Updated on: Aug 30, 2021 | 5:00 PM
ಅದು 2013, ಆಗಸ್ಟ್ 29...ಸೌತಂಪ್ಟನ್ನ ರೋಸ್ ಬೌಲ್ ಮೈದಾನದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಅಂದಿನ ಇಂಗ್ಲೆಂಡ್ ನಾಯಕ ಸ್ಟುವರ್ಟ್ ಬ್ರಾಡ್ ಬೌಲಿಂಗ್ ಆಯ್ದುಕೊಂಡರು. ಆದರೆ ಮೊದಲ ಮೂರು ಓವರ್ನಲ್ಲೇ ಬ್ರಾಡ್ ಅವರ ನಿರ್ಧಾರ ತಪ್ಪು ಎಂದು ಸಾರಿದ್ದರು ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್.
ಹೌದು, ಆರಂಭಿಕರಾಗಿ ಕಣಕ್ಕಿಳಿದಿದ್ದ ಫಿಂಚ್ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಎರಡನೇ ಓವರ್ನಲ್ಲಿ ವಾರ್ನರ್ ಔಟ್ ಆಗಿ ಹೊರನಡೆದರೂ, ಅದಕ್ಕೂ ನನಗೂ ಸಂಬಂಧವೇ ಇಲ್ಲವೆಂಬಂತೆ ಫಿಂಚ್ ಅಬ್ಬರಿಸಿದ್ದರು. ಇಂಗ್ಲೆಂಡ್ ಬೌಲರುಗಳನ್ನು ಮನಸೋ ಇಚ್ಛೆ ದಂಡಿಸಿದ್ದ ಆರೋನ್ ಫಿಂಚ್ ರನ್ ಗತಿಯನ್ನು 10ರ ಸರಾಸರಿಯಲ್ಲಿ ಕೊಂಡೊಯ್ದಿದ್ದರು. ಪರಿಣಾಮ ಮೊದಲ 10 ಓವರ್ ಆಗುವಷ್ಟರಲ್ಲಿ ಆಸೀಸ್ ಮೊತ್ತ 100ರ ಗಡಿದಾಟಿತ್ತು. ಅಲ್ಲದೆ 26 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು.
ಅರ್ಧಶತಕದ ಬಳಿಕ ಅಕ್ಷರಶಃ ಅಬ್ಬರಿಸಲಾರಂಭಿಸಿದ ಫಿಂಚ್ 47 ಎಸೆತಗಳಾಗುವಷ್ಟರಲ್ಲಿ ತಮ್ಮ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದ್ದರು. ಇನ್ನು ಸೆಂಚುರಿ ಬಳಿಕ ಕೂಡ ಆಸೀಸ್ ಆರಂಭಿಕನನ್ನು ಕಟ್ಟಿಹಾಕಲು ಇಂಗ್ಲೆಂಡ್ ಬೌಲರುಗಳಿಗೆ ಸಾಧ್ಯವಾಗಲಿಲ್ಲ. ಪರಿಣಾಮ ಫಿಂಚ್ ಬ್ಯಾಟ್ನಿಂದ 11 ಬೌಂಡರಿ ಹಾಗೂ 14 ಭರ್ಜರಿ ಸಿಕ್ಸರ್ಗಳು ಮೂಡಿಬಂದವು. ಅಂದರೆ ಕೇವಲ 25 ಎಸೆತಗಳಲ್ಲಿ ಬೌಂಡರಿ-ಸಿಕ್ಸರ್ ಮೂಲಕ ಫಿಂಚ್ 128 ರನ್ ಚಚ್ಚಿದ್ದರು. ಪರಿಣಾಮ 63 ಎಸೆತಗಳಲ್ಲಿ 156 ರನ್ ಬಾರಿಸಿ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ಇದರೊಂದಿಗೆ ಅಂದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನ ಗರಿಷ್ಠ ಸ್ಕೋರ್ ದಾಖಲೆ ಫಿಂಚ್ ಪಾಲಾಯಿತು.
ಅತ್ತ ಫಿಂಚ್ ಅಬ್ಬರದೊಂದಿಗೆ ಆಸ್ಟ್ರೇಲಿಯಾ ತಂಡವು ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 248 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್ ಆಸರೆಯಾದರು. ಕೇವಲ 49 ಎಸೆತಗಳನ್ನು ಎದುರಿಸಿದ್ದ ರೂಟ್ 90 ರನ್ ಬಾರಿಸಿದರು. ಇದಾಗ್ಯೂ ಇಂಗ್ಲೆಂಡ್ ತಂಡವು ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 209 ರನ್ಗಳಿಸಲಷ್ಟೇ ಶಕ್ತರಾದರು. ಆಸ್ಟ್ರೇಲಿಯಾ ತಂಡವು 39 ರನ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.
ಸ್ಪೋಟಕ ಇನಿಂಗ್ಸ್ಗಳಿಗೆ ಸಾಕ್ಷಿಯಾಗಿದ್ದ ಈ ಪಂದ್ಯ ನಡೆದು 8 ವರ್ಷಗಳು ಕಳೆದಿವೆ. ಟಿ20 ಕ್ರಿಕೆಟ್ನಲ್ಲಿ ಅಂದು ಹೊಸ ಇತಿಹಾಸ ಬರೆದಿದ್ದ ಆರೋನ್ ಫಿಂಚ್ ಆ ಬಳಿಕ ತಮ್ಮದೇ ದಾಖಲೆಯನ್ನು ಅಳಿಸಿ ಹಾಕಿ ಹೊಸ ರೆಕಾರ್ಡ್ ಸೃಷ್ಟಿಸಿದರು. ಹೌದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವೈಯುಕ್ತಿಕ ಗರಿಷ್ಠ ಸ್ಕೋರ್ 156 ರನ್ ಬಾರಿಸಿದ್ದ ಫಿಂಚ್ 2018 ರಲ್ಲಿ ತಮ್ಮ ದಾಖಲೆಯನ್ನು ಮುರಿದರು. ಜಿಂಬಾಬ್ವೆ ವಿರುದ್ದ ನಡೆದ ಟಿ20 ಪಂದ್ಯದಲ್ಲಿ 76 ಎಸೆತಗಳಲ್ಲಿ 172 ರನ್ ಬಾರಿಸಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದರು. ಈ ದಾಖಲೆ ಇಂದಿಗೂ ಅಚ್ಚಳಿಯದೇ ಉಳಿದಿದೆ. ಮುಂಬರುವ ಟಿ20 ವಿಶ್ವಕಪ್ನಲ್ಲಿ ಫಿಂಚ್ ಬರೆದಿಟ್ಟಿರುವ ಈ ವಿಶ್ವ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಕಾದು ನೋಡಬೇಕಿದೆ.