ಇದೇ ಅಕ್ಟೋಬರ್ 23 ರಂದು ಭಾರತ ಹಾಗೂ ಪಾಕಿಸ್ತಾನ (India and Pakistan) ತಂಡಗಳು ಟಿ20 ವಿಶ್ವಕಪ್ನಲ್ಲಿ (T20 World Cup 2022) ಪರಸ್ಪರ ಮುಖಾಮುಖಿಯಾಗುತ್ತಿದ್ದು, ಈ ಉಭಯ ತಂಡಗಳ ನಡುವಿನ ಕದನವನ್ನು ವೀಕ್ಷಿಸಲು ಇಡೀ ಕ್ರಿಕೆಟ್ ಜಗತ್ತೆ ಕಾತುರದಿಂದ ಕಾಯುತ್ತಿದೆ. ಮೆಲ್ಬೋರ್ನ್ ಮೈದಾನದಲ್ಲಿ (Melbourne Cricket Ground) ನಡೆಯುವ ಈ ಬದ್ಧವೈರಿಗಳ ಕಾಳಗ ಈಗಾಗಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಈ ಪಂದ್ಯದ ಮೂಲಕ ಉಭಯ ತಂಡಗಳು ತಮ್ಮ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸುತ್ತಿದ್ದು, ಈ ಮೊದಲು ಈ ಎರಡೂ ತಂಡಗಳು ಟಿ20 ವಿಶ್ವಕಪ್ನಲ್ಲಿ 6 ಬಾರಿ ಮುಖಾಮುಖಿಯಾಗಿವೆ. ಈ 6 ಪಂದ್ಯಗಳಲ್ಲಿ ಟೀಂ ಇಂಡಿಯಾ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕ್ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ. ಇನ್ನುಳಿದಂತೆ ಕೇವಲ 1 ಪಂದ್ಯದಲ್ಲಿ ಪಾಕ್ ಪಡೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
6 ಬಾರಿಯ ಮುಖಾಮುಖಿ ವರದಿ ಹೀಗಿದೆ
ಡರ್ಬನ್, 2007: ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಮೊದಲ ಬಾರಿಗೆ ಮುಖಾಮುಖಿಯಾದವು. ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯ ಮೊದಲ ಪಂದ್ಯದಿಂದಲೇ ಈ ಹೈ-ವೋಲ್ಟೇಜ್ ಪಂದ್ಯ ಅಭಿಮಾನಿಗಳಿಗೆ ರಸದೌತಣ ನೀಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಕನ್ನಡಿಗ ರಾಬಿನ್ ಉತ್ತಪ್ಪ ಅವರ ಅರ್ಧಶತಕ ಹಾಗೂ ನಾಯಕ ಧೋನಿ ಮತ್ತು ಇರ್ಫಾನ್ ಪಠಾಣ್ ಅವರ ಮಹತ್ವದ ಇನ್ನಿಂಗ್ಸ್ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಭಾರತದ ಬೌಲರ್‌ಗಳು ಆರಂಭದಿಂದಲೇ ಆಘಾತ ನೀಡಲಾರಂಭಿಸಿದರು. ಆದರೆ ಅಂತಿಮ ಹಂತದಲ್ಲಿ ಮಿಸ್ಬಾ-ಉಲ್-ಹಕ್ ಸಿಡಿಸಿದ ಅರ್ಧಶತಕ ಪಂದ್ಯದ ದಿಕ್ಕನೇ ಬದಲಾಯಿಸಿತು. ಆದರೆ ಟೀಂ ಇಂಡಿಯಾ ಈ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಯಿತು. ಬಳಿಕ ಬೌಲ್ ಔಟ್ ಮೂಲಕ ವಿಜೇತರನ್ನು ನಿರ್ಧರಿಸಲಾಗಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಜೋಹಾನ್ಸ್‌ಬರ್ಗ್, 2007: ಇನ್ನು ಇದೇ ಆವೃತ್ತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡನೇ ಬಾರಿ ಮುಖಾಮುಖಿಯಾಗಿದ್ದವು. ಎರಡನೇ ಬಾರಿಗೆ ಮೊದಲ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ಎದುರಾಳಿಯಾಗಿತ್ತು. ಈ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಗೌತಮ್ ಗಂಭೀರ್ 75 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ರೋಹಿತ್ ಶರ್ಮಾ ಕೂಡ ಅಜೇಯ 30 ರನ್ ಗಳಿಸಿದರು. ಈ ಇಬ್ಬರ ಉಪಯುಕ್ತ ಆಟದಿಂದಾಗಿ ಟೀಂ ಇಂಡಿಯಾ, ಪಾಕಿಸ್ತಾನದ ಗೆಲುವಿಗೆ 158 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಇಮ್ರಾನ್ ನಜೀರ್ ಕೇವಲ 14 ಎಸೆತಗಳಲ್ಲಿ 33 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ನಜೀರ್ ರನೌಟ್ ಆದ ತಕ್ಷಣ ನಿಯಮಿತ ಅಂತರದಲ್ಲಿ ಪಾಕ್ ತಂಡದ ವಿಕೆಟ್ಗಳು ಬೀಳತೊಡಗಿದವು. ಇದರ ಹೊರತಾಗಿಯೂ, ಮಿಸ್ಬಾ-ಉಲ್-ಹಕ್ ಪಂದ್ಯವನ್ನು ಕೊನೆಯ ಓವರ್‌ವರೆಗೂ ಎಳೆದರು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನ ಗೆಲ್ಲಲು 13 ರನ್‌ಗಳ ಅಗತ್ಯವಿತ್ತು ಮತ್ತು ಭಾರತಕ್ಕೆ ಗೆಲ್ಲಲು ಒಂದು ವಿಕೆಟ್ ಬೇಕಿತ್ತು. ಕೊನೆಯ ಓವರ್‌ನ ಎರಡನೇ ಎಸೆತದಲ್ಲಿ ಯೋಗಿಂದರ್ ಶರ್ಮಾ ಎಸೆತವನ್ನು ಸಿಕ್ಸರ್ ಬಾರಿಸುವ ಮೂಲಕ ಮಿಸ್ಬಾ, ಭಾರತದ ಒತ್ತಡವನ್ನು ದ್ವಿಗುಣಗೊಳಿಸಿದರು. ಆದರೆ ಮುಂದಿನ ಎಸೆತದಲ್ಲಿ ಮಿಸ್ಬಾ ಶಾರ್ಟ್ ಫೈನ್ ಲೆಗ್‌ನಲ್ಲಿ ಶ್ರೀಶಾಂತ್‌ಗೆ ಸುಲಭ ಕ್ಯಾಚ್ ನೀಡಿದರು. ಆ ವಿಕೆಟ್‌ನೊಂದಿಗೆ ಭಾರತ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು.
ಇದನ್ನೂ ಓದಿ: T20 World Cup 2022: ಇಂಗ್ಲೆಂಡ್ ತಂಡದ ಸ್ಟಾರ್ ಬೌಲರ್ ಟಿ20 ವಿಶ್ವಕಪ್ನಿಂದ ಔಟ್..!
ಕೊಲಂಬೊ, 2012: 2007 ರ ವಿಶ್ವಕಪ್ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು 2012ರ ವಿಶ್ವಕಪ್‌ನ ಗುಂಪು ಹಂತದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಭಾರತ ಏಕಪಕ್ಷೀಯವಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 128 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಭಾರತದ ಪರ ಮಿಂಚಿದ ಲಕ್ಷ್ಮೀಪತಿ ಬಾಲಾಜಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದರು. ಇವರ ಬಳಿಕ ರವಿಚಂದ್ರನ್ ಅಶ್ವಿನ್ ಮತ್ತು ಯುವರಾಜ್ ಸಿಂಗ್ ಕೂಡ ಅದ್ಭುತ ಬೌಲಿಂಗ್ ಮಾಡಿ ತಲಾ ಎರಡು ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 78 ರನ್‌ಗಳ ಅಜೇಯ ಇನ್ನಿಂಗ್ಸ್ ಅದ್ಭುತ ಗೆಲುವು ತಂದುಕೊಟ್ಟರು. ಅಲ್ಲದೆ ಭಾರತ ಇನ್ನೂ 18 ಎಸೆತಗಳು ಬಾಕಿ ಇರುವಂತೆಯೇ ಎಂಟು ವಿಕೆಟ್‌ಗಳ ಜಯ ಸಾಧಿಸಿತು.
ಢಾಕಾ, 2014:2012 ರಲ್ಲಿ ಪಾಕಿಸ್ತಾನಕ್ಕೆ ಹೀನಾಯ ಸೋಲಿನ ಶಾಕ್ ನೀಡಿದ್ದ ಭಾರತ 2014ರ ಗುಂಪು ಹಂತದ ಪಂದ್ಯದಲ್ಲೂ ಏಕಪಕ್ಷೀಯವಾಗಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕ್ ಪಡೆಯನ್ನು ಕೇವಲ 130 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಪಂದ್ಯದಲ್ಲಿ ಭಾರತದ ಅದ್ಭುತ ಬೌಲಿಂಗ್ ಮಾಡಿದ ಅಮಿತ್ ಮಿಶ್ರಾ ನಾಲ್ಕು ಓವರ್‌ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರು. ಟಾರ್ಗೆಟ್ ಬೆನ್ನತ್ತಿದ ಭಾರತದ ಪರ ಕೊಹ್ಲಿ ಮತ್ತು ಸುರೇಶ್ ರೈನಾ ಕ್ರಮವಾಗಿ 36 ಮತ್ತು 35 ರನ್ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಈ ಇಬ್ಬರಿಗೂ ಮುನ್ನ ಆರಂಭಿಕರಾಗಿ ಕಣಕ್ಕಿಳಿದಿದ್ದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ 30 ಮತ್ತು 24 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ದರು. ಅಂತಿಮವಾಗಿ ಈ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದುಕೊಂಡಿತು.
ಕೋಲ್ಕತ್ತಾ, 2016: ಕೋಲ್ಕತ್ತಾದಲ್ಲಿ ನಡೆದ 2016 ಆವೃತ್ತಿಯ ಈ ಪಂದ್ಯದಲ್ಲಿ ಮಳೆ ಸಾಕಷ್ಟು ಕಾಟ ನೀಡಿತ್ತು. ಹೀಗಾಗಿ ಪಂದ್ಯವನ್ನು ತಡವಾಗಿ ಆರಂಭಿಸಬೇಕಾಗಿ ಬಂದ ಕಾರಣ ಪಂದ್ಯವನ್ನು 18 ಓವರ್‌ಗಳಲ್ಲಿ ಸೀಮಿತಗೊಳಿಸಲಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಪಡೆ ಭಾರತದ ಬಿಗಿ ಬೌಲಿಂಗ್ ಎದುರು ರನ್ ಗಳಿಸುವಲ್ಲಿ ವಿಫಲವಾಯಿತು. ಹೀಗಾಗಿ ಅಂತಿಮವಾಗಿ ಪಾಕಿಸ್ತಾನ ತಂಡ 5 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಗುರಿ ಬೆನ್ನಟ್ಟಿದ ಭಾರತ ಕೂಡ ಆರಂಭದಲ್ಲಿ ತನ್ನ ಎರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡಿತು. ಆದರೆ ಈ ಪಂದ್ಯದಲ್ಲಿ ಮತ್ತೊಮ್ಮೆ ಮಿಂಚಿದ ವಿರಾಟ್ ಕೊಹ್ಲಿ ಕೇವಲ 37 ಎಸೆತಗಳಲ್ಲಿ 55 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿ, ಟೀಂ ಇಂಡಿಯಾವನ್ನು ಆರು ವಿಕೆಟ್‌ಗಳಿಂದ ಗೆಲುವಿನ ದಡ ಸೇರಿಸಿದರು.
ದುಬೈ, 2021: ಆದರೆ 2021 ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ಟೀಂ ಇಂಡಿಯಾಕ್ಕೆ ಮುಜುಗರದ ಸೋಲನ್ನು ನೀಡಿತ್ತು. ಇದುವರೆಗೂ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಒಮ್ಮೆಯೂ ಸೋಲದ ಭಾರತಕ್ಕೆ ಬಾಬರ್ ಪಡೆ 10 ವಿಕೆಟ್‌ಗಳ ಸೋಲಿನ ಶಾಕ್ ನೀಡಿತ್ತು. ದುಬೈನಲ್ಲಿ ನಡೆದ ಗುಂಪು ಹಂತದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಪಾಕ್ ವೇಗಿ ಶಾಹೀನ್ ಶಾ ಆಫ್ರಿದಿ ದಾಳಿಗೆ ಸಿಲುಕಿ ಕೇವಲ 151 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಅಂದಿನ ನಾಯಕ ಕೊಹ್ಲಿ ಅರ್ಧಶತಕ ಗಳಿಸಿದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ 39 ರನ್ಗಲ ಇನ್ನಿಂಗ್ಸ್ ಆಡಿದ್ದರು. ಆದರೆ ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಬಾಬರ್ ಹಾಗೂ ರಿಜ್ವಾನ್ ಅವರ ಅಜೇಯ ಆಟದಿಂದಾಗಿ 10 ವಿಕೆಟ್‌ಗಳ ಜಯ ಸಾಧಿಸಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ