ದೇಶೀಯ ಅಂಗಳದ ಮಹತ್ವದ ಟೂರ್ನಿ ರಣಜಿ ಕ್ರಿಕೆಟ್ನಲ್ಲಿ ( Ranji Trophy 2022) 5000ನೇ ಪಂದ್ಯವಾಡಲಾಯಿತು. ಪ್ರಸ್ತುತ ರಣಜಿ ಟ್ರೋಫಿಯ ಲೀಗ್ ಹಂತದ ಪಂದ್ಯಗಳು ನಡೆಯುತ್ತಿದ್ದು, ಈ ವೇಳೆ ಟೂರ್ನಿಯ ಇತಿಹಾಸದ 5000ನೇ ಪಂದ್ಯ ಚೆನ್ನೈನಲ್ಲಿ ಆಡಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ರೈಲ್ವೇಸ್ ತಂಡಗಳು 5 ಸಾವಿರನೇ ಪಂದ್ಯಕ್ಕಾಗಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಈ ಇತಿಹಾಸ ನಿರ್ಮಾಣವಾಗಿದೆ. 88 ವರ್ಷಗಳ ಇತಿಹಾಸ ಹೊಂದಿರುವ ಈ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ರಣಜಿ ಟ್ರೋಫಿಯನ್ನು 1934 ರಲ್ಲಿ ಪ್ರಾರಂಭಿಸಲಾಯಿತು. ಪಂದ್ಯಾವಳಿಯ ಮೊದಲ ಮತ್ತು 5000 ನೇ ಪಂದ್ಯದ ನಡುವೆ ಒಂದು ಕುತೂಹಲಕಾರಿ ವಿಷಯವಿದೆ. ಅದೇನೆಂದರೆ ಈ ಎರಡು ಪಂದ್ಯಗಳು ಚೆನ್ನೈನಲ್ಲೇ ಆಡಲಾಗಿದೆ. ಇದಾಗ್ಯೂ ಸ್ಟೇಡಿಯಂ ಮಾತ್ರ ಬದಲು. ಏಕೆಂದರೆ ಮೊದಲ ಪಂದ್ಯ ಚೆಪಾಕ್‌ನಲ್ಲಿ ನಡೆದಿತ್ತು. ಇದೀಗ ಐಐಟಿ ಮೈದಾನದಲ್ಲಿ 5000ನೇ ಪಂದ್ಯ ನಡೆಯುತ್ತಿದೆ.
ರಣಜಿ ಟ್ರೋಫಿಯ 5000ನೇ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಈ ಐತಿಹಾಸಿಕ ಪಂದ್ಯದಲ್ಲಿ ಸೂರ್ಯಾಂಶ್ ರೈನಾ ಮತ್ತು ಕಮ್ರಾನ್ ಇಕ್ಬಾಲ್ ಇನ್ನಿಂಗ್ಸ್ ಆರಂಭಿಸಿದರು. ಇವರಿಬ್ಬರ ನಡುವೆ ಮೊದಲ ವಿಕೆಟ್‌ಗೆ 88 ರನ್‌ಗಳ ಜೊತೆಯಾಟವಿತ್ತು. ಸೂರ್ಯಾಂಶ್ ರೈನಾ 28 ರನ್ ಗಳಿಸಿ ಔಟಾದರೆ, ಆ ಬಳಿಕ ಬಂದ ಫಾಜಿಲ್ ರಶೀದ್ ಕೂಡ ಬೇಗನೆ ನಿರ್ಗಮಿಸಿದರು. ಈ ಎರಡೂ ವಿಕೆಟ್‌ಗಳನ್ನು ಕರ್ಣ್ ಶರ್ಮಾ ಪಡೆದರು. ಈ ಎರಡು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಜಮ್ಮು ಮತ್ತು ಕಾಶ್ಮೀರ 100 ರನ್‌ಗಳ ಗಡಿ ದಾಟಿದೆ.
ರಣಜಿ ಇತಿಹಾಸದಲ್ಲಿ ಮುಂಬೈ ಅತ್ಯಂತ ಯಶಸ್ವಿ ತಂಡ:
ಮುಂಬೈ ರಣಜಿ ಟ್ರೋಫಿಯ 88 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, 41 ಬಾರಿ ಪ್ರಶಸ್ತಿ ಗೆದ್ದಿದೆ.2ನೇ ಯಶಸ್ವಿ ತಂಡವೆಂದರೆ ಕರ್ನಾಟಕ. ಕರ್ನಾಟಕ ತಂಡ 8 ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಟೂರ್ನಿಯ 2ನೇ ಸ್ಥಾನದಲ್ಲಿದೆ. ಸೌರಾಷ್ಟ್ರ ತಂಡವು ಪ್ರಸ್ತುತ ರಣಜಿ ಟ್ರೋಫಿಯ ಹಾಲಿ ಚಾಂಪಿಯನ್ ಆಗಿದ್ದು, 2020 ರಲ್ಲಿ ಮೊದಲ ಬಾರಿಗೆ ಈ ಟ್ರೋಫಿಯನ್ನು ಗೆದ್ದಿದೆ.
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?