
ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯವನ್ನಾಡುತ್ತಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ನಾಯಕ ಶಕೀಬ್ ಅಲ್ ಹಸನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಢಾಕಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಶಕೀಬ್ ಅಲ್ ಹಸನ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಕೀಬ್ ಮಾತ್ರವಲ್ಲ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಒಟ್ಟು 500 ಮಂದಿಯನ್ನು ಇದರಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.
ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಶಕೀಬ್ ವಿರುದ್ಧ ಢಾಕಾ ಮೆಟ್ರೋಪಾಲಿಟನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿದ ವ್ಯಕ್ತಿಯ ಹೆಸರು ರಫೀಕುಲ್ ಇಸ್ಲಾಂ ಆಗಿದ್ದು, ದೂರುದಾರ ವ್ಯಕ್ತಿ, ಢಾಕಾದಲ್ಲಿ ನಡೆದ ಪ್ರತಿಭಟನೆಯ ವೇಳೆ ಮೃತಪಟ್ಟ ವ್ಯಕ್ತಿಯ ತಂದೆ ಎಂದು ವರದಿಯಾಗಿದೆ. ವಾಸ್ತವವಾಗಿ ಶಕೀಬ್ ಅಲ್ ಹಸನ್, ಈ ಹಿಂದೆ ಬಾಂಗ್ಲಾದೇಶದ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರ ಪಕ್ಷವಾಗಿದ್ದ ಬಾಂಗ್ಲಾದೇಶ ಅವಾಮಿ ಲೀಗ್‌ನ ನಾಯಕರಾಗಿದ್ದರು. ಆದರೆ ಬಾಂಗ್ಲಾದೇಶದಲ್ಲಿ ಮೀಸಲಾತಿಯ ವಿರುದ್ಧ ಸಾರ್ವಜನಿಕರು ದಂಗೆ ಎದ್ದ ಬಳಿಕ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ್ದಾರೆ. ಶಕೀಬ್ ಅಲ್ ಹಸನ್, ಶೇಖ್ ಹಸೀನಾಗೆ ಆತ್ಮೀಯರಾಗಿದ್ದ ಕಾರಣ ಅವರ ವಿರುದ್ಧ ಇಂತಹ ಪ್ರಕರಣಗಳು ದಾಖಲಾಗುತ್ತಿರುವ ಸಾಧ್ಯತೆ ಇದೆ.
ಶೇಖ್ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿದ ನಂತರ ಬಾಂಗ್ಲಾದೇಶದ ಮಾಜಿ ನಾಯಕ ಮಶ್ರಫೆ ಮೊರ್ತಜಾ ಕೂಡ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು. ಪ್ರತಿಭಟನಕಾರರ ಗುಂಪು ಅವರ ಮನೆಯ ಮೇಲೆ ದಾಳಿ ಮಾಡಿ ಮನೆಗೆ ಬೆಂಕಿ ಹಚ್ಚಿತ್ತು. ಇದೀಗ ಶಕೀಬ್ ಅಲ್ ಹಸನ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಭವಿಷ್ಯದಲ್ಲಿ ಶಕೀಬ್ಗೆ ಆಪತ್ತು ಎದುರಾಗಬಹುದಾದ ಸಾಧ್ಯತೆಗಳಿವೆ. ಹೀಗಾಗಿ ಕೊಲೆ ಆರೋಪ ಹೊತ್ತಿರುವ ಶಕೀಬ್, ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಬಾಂಗ್ಲಾದೇಶಕ್ಕೆ ವಾಪಸಾಗುತ್ತಾರಾ ಎಂಬುದು ಪ್ರಶ್ನೆಯಾಗಿದೆ. ಶಕೀಬ್, ಬಾಂಗ್ಲಾದೇಶದ ಖುಲ್ನಾದಲ್ಲಿ ಮನೆ ಹೊಂದಿದ್ದರಾದರೂ ಅವರ ಪತ್ನಿ ಮತ್ತು ಮಕ್ಕಳು ಅಮೇರಿಕಾದಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಶಕೀಬ್ ಟೆಸ್ಟ್ ಸರಣಿ ಮುಗಿದ ಬಳಿಕ ಪಾಕಿಸ್ತಾನದಿಂದ ನೇರವಾಗಿ ಅಮೆರಿಕಕ್ಕೆ ಹೋಗುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:46 pm, Fri, 23 August 24