ಸತತ ನಾಲ್ಕನೇ ಸೆಂಚುರಿ ಸಿಡಿಸಿದ ಅಭಿಮನ್ಯು ಈಶ್ವರನ್

|

Updated on: Oct 14, 2024 | 2:04 PM

Abhimanyu Easwaran: ದೇಶೀಯ ಅಂಗಳದಲ್ಲಿ ಅಭಿಮನ್ಯು ಈಶ್ವರನ್ ಅವರ ಭರ್ಜರಿ ಬ್ಯಾಟಿಂಗ್ ಮುಂದುವರೆದಿದೆ. ದುಲೀಪ್ ಟ್ರೋಫಿ ಪಂದ್ಯಗಳಲ್ಲಿ 116, 157* ರನ್​ಗಳೊಂದಿಗೆ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದ ಅಭಿಮನ್ಯು ಆ ಬಳಿಕ ಇರಾನಿ ಕಪ್​ನಲ್ಲಿ 191 ರನ್​ ಬಾರಿಸಿದ್ದರು. ಇದೀಗ ರಣಜಿ ಟ್ರೋಫಿಯಲ್ಲಿ ಅಜೇಯ 127 ರನ್ ಬಾರಿಸಿ ಮಿಂಚಿದ್ದಾರೆ.

ಸತತ ನಾಲ್ಕನೇ ಸೆಂಚುರಿ ಸಿಡಿಸಿದ ಅಭಿಮನ್ಯು ಈಶ್ವರನ್
Abhimanyu Easwaran
Follow us on

ರಣಜಿ ಟ್ರೋಫಿಯ ಗ್ರೂಪ್-ಸಿ ಪಂದ್ಯದಲ್ಲಿ ಬಂಗಾಳ ತಂಡದ ಬ್ಯಾಟರ್ ಅಭಿಮನ್ಯು ಈಶ್ವರನ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಅಭಿಮನ್ಯು ಅವರ ಸತತ ನಾಲ್ಕನೇ ಶತಕ ಎಂಬುದು ವಿಶೇಷ. ಇದಕ್ಕೂ ಮುನ್ನ ದುಲೀಪ್ ಟ್ರೋಫಿಯ 2ನೇ ಮತ್ತು 3ನೇ ಪಂದ್ಯಗಳಲ್ಲಿ ಶತಕ ಬಾರಿಸಿದ್ದರು. ಇದಾದ ಬಳಿಕ ಇರಾನಿ ಕಪ್ ಪಂದ್ಯದಲ್ಲೂ ಅಭಿಮನ್ಯು ಮೂರಂಕಿ ಮೊತ್ತಗಳಿಸಿದ್ದರು. ಇದೀಗ ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲೇ ಸೆಂಚುರಿ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಗಮನ ಸೆಳೆದಿದ್ದಾರೆ.

ಇನ್ನು ಉತ್ತರ ಪ್ರದೇಶ ವಿರುದ್ಧ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಂಗಾಳ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಪ್ರಥಮ ಇನಿಂಗ್ಸ್ ಆಡಿದ ಬಂಗಾಳ ಪರ ಸುದೀಪ್ ಚಟರ್ಜಿ (116) ಶತಕ ಬಾರಿಸಿದ್ದರು. ಈ ಸೆಂಚುರಿ ನೆರವಿನಿಂದ ಬಂಗಾಳ ತಂಡವು ಮೊದಲ ಇನಿಂಗ್ಸ್​ನಲ್ಲಿ 311 ರನ್​ ಕಲೆಹಾಕಿ ಆಲೌಟ್ ಆಯಿತು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ತಂಡದ ಪರ ನಾಯಕ ಆರ್ಯನ್ ಜುಯಲ್ 92 ರನ್ ಬಾರಿಸಿದರೆ, ಸಿದ್ಧಾರ್ಥ್ ಯಾದವ್ 73 ರನ್​ ಕಲೆಹಾಕಿದರು. ಈ ಮೂಲಕ ಪ್ರಥಮ ಇನಿಂಗ್ಸ್​ನಲ್ಲಿ 292 ರನ್​ಗಳಿಸಿ ಉತ್ತರ ಪ್ರದೇಶ ಆಲೌಟ್ ಆಯಿತು.

ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಂಗಾಳ ತಂಡಕ್ಕೆ ಅಭಿಮನ್ಯು ಈಶ್ವರನ್ ಹಾಗೂ ಸುದೀಪ್ ಚಟರ್ಜಿ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 212 ರನ್​ಗಳ ಜೊತೆಯಾಟವಾಡಿದ ಬಳಿಕ ಸುದೀಪ್ (93) ಔಟಾದರು.

ಮತ್ತೊಂದೆಡೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಮನ್ಯು ಈಶ್ವರನ್ 172 ಎಸೆತಗಳಲ್ಲಿ 12 ಫೋರ್​ಗಳೊಂದಿಗೆ ಅಜೇಯ 127 ರನ್ ಬಾರಿಸಿದರು. ಈ ಮೂಲಕ ಬಂಗಾಳ ತಂಡವು 3 ವಿಕೆಟ್ ನಷ್ಟದೊಂದಿಗೆ 253 ರನ್ ಕಲೆಹಾಕಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಘೋಷಿಸಿದೆ. ಅದರಂತೆ ಇದೀಗ ಉತ್ತರ ಪ್ರದೇಶ ತಂಡಕ್ಕೆ ಗೆಲ್ಲಲು 274 ರನ್​ಗಳ ಅವಶ್ಯಕತೆಯಿದ್ದು, ನಾಲ್ಕನೇ ದಿನದಾಟದಲ್ಲಿ ಪಂದ್ಯ ಮುಂದುವರೆದಿದೆ.

ಬಂಗಾಳ ಪ್ಲೇಯಿಂಗ್ ಇಲೆವೆನ್: ಸುದೀಪ್ ಚಟರ್ಜಿ , ಅಭಿಮನ್ಯು ಈಶ್ವರನ್ , ಸುದೀಪ್ ಕುಮಾರ್ ಘರಾಮಿ , ಅನುಸ್ತುಪ್ ಮಜುಂದಾರ್ (ನಾಯಕ) , ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್) , ವೃದ್ಧಿಮಾನ್ ಸಹಾ , ಶಹಬಾಝ್ ಅಹ್ಮದ್ , ರಿತಿಕ್ ಚಟರ್ಜಿ , ಸೂರಜ್ ಸಿಂಧು ಜೈಸ್ವಾಲ್ , ಮೊಹಮ್ಮದ್ ಕೈಫ್ , ಮುಖೇಶ್ ಕುಮಾರ್.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಮುಂದಿದೆ ಮೂರು ಭರ್ಜರಿ ದಾಖಲೆಗಳು

ಉತ್ತರ ಪ್ರದೇಶ ಪ್ಲೇಯಿಂಗ್ ಇಲೆವೆನ್: ಆರ್ಯನ್ ಜುಯಲ್ (ನಾಯಕ) , ಸ್ವಸ್ತಿಕ್ ಚಿಕಾರಾ , ಪ್ರಿಯಂ ಗರ್ಗ್ , ಅಕ್ಷದೀಪ್ ನಾಥ್ , ನಿತೀಶ್ ರಾಣಾ , ಸಿದ್ದಾರ್ಥ್ ಯಾದವ್ , ಸೌರಭ್ ಕುಮಾರ್ , ವಿಪ್ರಜ್ ನಿಗಮ್ , ಯಶ್ ದಯಾಳ್ , ಅಂಕಿತ್ ರಜಪೂತ್ , ಆಕಿಬ್ ಖಾನ್.