IND vs PAK: ಕೂದಲೆಳೆ ಅಂತರದಲ್ಲಿ ಕೊಹ್ಲಿ ದಾಖಲೆ ಮುರಿಯುವಲ್ಲಿ ವಿಫಲರಾದ ಅಭಿಷೇಕ್

Abhishek Sharma: 2025ರ ಏಷ್ಯಾಕಪ್‌ನಲ್ಲಿ ಅಭಿಷೇಕ್ ಶರ್ಮಾ ಅದ್ಭುತ ಪ್ರದರ್ಶನ ನೀಡಿದರೂ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ವಿಫಲರಾದರು. ಇದು ವಿರಾಟ್ ಕೊಹ್ಲಿ ಅವರ ಟಿ20 ಟೂರ್ನಿಯ ಗರಿಷ್ಠ ರನ್‌ಗಳ ದಾಖಲೆಯನ್ನು ಮುರಿಯುವ ಅವಕಾಶವನ್ನು ಕಸಿದುಕೊಂಡಿತು. ಆದರೂ, ಅಭಿಷೇಕ್ 314 ರನ್‌ಗಳೊಂದಿಗೆ ಟಿ20 ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಹೊಸ ದಾಖಲೆ ಬರೆದು, ಮೊಹಮ್ಮದ್ ರಿಜ್ವಾನ್ ಮತ್ತು ಕೊಹ್ಲಿಯನ್ನು ಹಿಂದಿಕ್ಕಿ ಗಮನ ಸೆಳೆದಿದ್ದಾರೆ.

IND vs PAK: ಕೂದಲೆಳೆ ಅಂತರದಲ್ಲಿ ಕೊಹ್ಲಿ ದಾಖಲೆ ಮುರಿಯುವಲ್ಲಿ ವಿಫಲರಾದ ಅಭಿಷೇಕ್
Abhishek Sharma

Updated on: Sep 28, 2025 | 11:13 PM

ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) 2025 ರ ಏಷ್ಯಾಕಪ್‌ನಲ್ಲಿ (Asia Cup 2025) ಉತ್ತಮ ಪ್ರದರ್ಶನ ನೀಡಿದರು. ಆದರೆ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಅವರಿಗೆ ಉತ್ತಮ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಫೈನಲ್‌ಗೂ ಮೊದಲು ಆಡಿದ ಟೂರ್ನಮೆಂಟ್‌ನ ಎಲ್ಲಾ ಪಂದ್ಯಗಳಲ್ಲಿ 30 ರನ್‌ಗಳ ಗಡಿಯನ್ನು ದಾಟಿದ್ದ ಅಭಿಷೇಕ್ ಫೈನಲ್‌ನಲ್ಲಿ ಮಾತ್ರ ಒಂದಂಕಿಗೆ ತಮ್ಮ ವಿಕೆಟ್ ಅನ್ನು ಕಳೆದುಕೊಂಡರು. ಪರಿಣಾಮವಾಗಿ, ಅವರು ವಿರಾಟ್ ಕೊಹ್ಲಿ (Virat Kohli) ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡರು.

ವಿರಾಟ್ ದಾಖಲೆ ಮುರಿಯಲು ಅಭಿಷೇಕ್ ವಿಫಲ

ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 6 ಎಸೆತಗಳನ್ನು ಎದುರಿಸಿ 5 ರನ್‌ ಕಲೆಹಾಕಿ ಫಹೀಮ್ ಅಶ್ರಫ್ ಅವರ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಟೂರ್ನಮೆಂಟ್‌ವೊಂದರಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆ ಮುರಿಯಲು ವಿಫಲರಾದರು. ಹೀಗಾಗಿ ಈ ದಾಖಲೆ ವಿರಾಟ್ ಕೊಹ್ಲಿ ಬಳಿಯೇ ಉಳಿದಂತ್ತಾಯಿತು. 2025 ರ ಏಷ್ಯಾಕಪ್‌ನಲ್ಲಿ ಅಭಿಷೇಕ್ ಶರ್ಮಾ ಆಡಿರುವ 7 ಇನ್ನಿಂಗ್ಸ್‌ಗಳಲ್ಲಿ ಒಟ್ಟು 314 ರನ್‌ ಬಾರಿಸಿದ್ದು, ಇದರಲ್ಲಿ ಸತತ ಮೂರು 50ಪ್ಲಸ್ ಸ್ಕೋರ್‌ಗಳು ಸೇರಿವೆ.

ಅಂತರರಾಷ್ಟ್ರೀಯ ಟಿ20ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಬ್ಯಾಟ್ಸ್‌ಮನ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 2014ರ ಟಿ20 ವಿಶ್ವಕಪ್‌ನಲ್ಲಿ ಅವರು ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ 319 ರನ್ ಗಳಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದರು. 2009ರ ಟಿ20 ವಿಶ್ವಕಪ್‌ನಲ್ಲಿ ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ 317 ರನ್ ಗಳಿಸಿದ್ದ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಪ್ರಸ್ತುತ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಭಿಷೇಕ್ ಶರ್ಮಾ ಈ ಎರಡೂ ಲೆಜೆಂಡರಿ ಬ್ಯಾಟ್ಸ್‌ಮನ್​ಗಳನ್ನು ಮೀರಿಸುವ ಅವಕಾಶವನ್ನು ಹೊಂದಿದ್ದರು. ಆದರೆ ಕೆಲವೇ ಕೆಲವು ರನ್​ಗಳ ಅಂತರದಿಂದ ಈ ಅವಕಾಶದಿಂದ ವಂಚಿತರಾದರು.

IND vs PAK: ಪಾಕಿಸ್ತಾನದ ಫೈಟರ್ ಜೆಟ್ ಹೊಡೆದುರುಳಿಸಿದ ಬುಮ್ರಾ; ವಿಡಿಯೋ ನೋಡಿ

ಹೀಗೊಂದು ದಾಖಲೆ ಬರೆದ ಅಭಿ

ಅಭಿಷೇಕ್ ಶರ್ಮಾ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯಲು ವಿಫಲರಾದರೂ ಟಿ20 ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಹಿಂದಿನ ಪಂದ್ಯದಲ್ಲಿಯೇ ಅವರು ಮೊಹಮ್ಮದ್ ರಿಜ್ವಾನ್ ಅವರ ದಾಖಲೆಯನ್ನು ಮುರಿದಿದ್ದರು. 2022 ರ ಟಿ20 ಏಷ್ಯಾಕಪ್‌ನಲ್ಲಿ ಮೊಹಮ್ಮದ್ ರಿಜ್ವಾನ್ 281 ರನ್ ಗಳಿಸಿದ್ದರು. ಅದೇ ವರ್ಷ ವಿರಾಟ್ ಕೊಹ್ಲಿ ಕೂಡ 276 ರನ್‌ ಬಾರಿಸಿದ್ದರು. ಆದರೆ ಅಭಿಷೇಕ್ ಈಗ ಅವರಿಬ್ಬರನ್ನೂ ಹಿಂದಿಕ್ಕಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ