
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯ ವೆಲ್ಲಿಂಗ್ಟನ್‌ನ ಹೆನ್ರಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 198 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಭರ್ಜರಿ ಆರಂಭ ಸಿಕ್ಕಿದ್ದು, ಮೊದಲ 4 ಓವರ್‌ಗಳಲ್ಲಿ ಬರೋಬ್ಬರಿ 84 ರನ್ ಕಲೆಹಾಕಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಮೈದಾನದಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದರು. ಇದರ ಪರಿಣಾಮವಾಗಿ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಈ ಅರ್ಧಶತಕದಲ್ಲಿ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.
ಈ ಪಂದ್ಯಕ್ಕೆ ಭಾರತದ ಆರಂಭಿಕ ಜೋಡಿ ಬದಲಾಗಿತ್ತು. ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆರಂಭಿಕರು ಬದಲಾದರೂ ತಂಡದ ಆರಂಭಕ್ಕೆ ಯಾವುದೇ ಭಂಗ ಬರಲಿಲ್ಲ. ಇವರಿಬ್ಬರು ಮೊದಲ ಎಸೆತದಿಂದಲೇ ಕಿವೀಸ್ ಬೌಲರ್ಗಳ ಬೆಂಡೆತಲು ಶುರು ಮಾಡಿದರು. ಇದರ ಫಲವಾಗಿ ಜೇಕಬ್ ಡಫಿ ಬೌಲ್ ಮಾಡಿದ ಮೊದಲ ಓವರ್ನ ಮೊದಲ ಎಸೆತದಲ್ಲೇ ವೈಭವ್ ಬೌಂಡರಿ ಬಾರಿಸಿದರೆ, ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಇತ್ತ ಅಭಿಷೇಕ್ ಶರ್ಮಾ ಕೂಡ ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಎತ್ತಿದರು. ಹೀಗಾಗಿ ಮೊದಲ ಓವರ್‌ನಲ್ಲೇ 26 ರನ್ ಕಲೆಹಾಕಿತು.
ಎರಡನೇ ಓವರ್‌ನಲ್ಲೂ ಅಬ್ಬರ ಮುಂದುವರೆಸಿದ ಈ ಜೋಡಿ ಈ ಓವರ್‌ನಲ್ಲಿ 17 ರನ್, ಮೂರನೇ ಓವರ್‌ನಲ್ಲಿ 21 ರನ್, ನಾಲ್ಕನೇ ಓವರ್‌ನಲ್ಲಿ 20 ರನ್ ಹಾಗೂ ಐದನೇ ಓವರ್‌ನಲ್ಲಿ 16 ರನ್ ಹರಿದುಬಂದವು. ಈ ಮೂಲಕ ಭಾರತ ಕೇವಲ ಐದು ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿ ಹೊಸ ದಾಖಲೆ ನಿರ್ಮಿಸಿತು. ಇಷ್ಟಕ್ಕೆ ಸುಮ್ಮನಾಗದ ಅಭಿಷೇಕ್ ಮತ್ತು ವೈಭವ್ ಜೋಡಿ ಆರನೇ ಓವರ್‌ನಲ್ಲೂ 18 ರನ್ ಚಚ್ಚಿತು. ಪರಿಣಾಮ, ಮೊದಲ ಆರು ಓವರ್‌ಗಳಲ್ಲಿ ಭಾರತ 118 ರನ್ ಕಲೆಹಾಕಿತು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪವರ್‌ಪ್ಲೇನಲ್ಲಿ ಭಾರತದ ಈ ಸ್ಫೋಟಕ ಬ್ಯಾಟಿಂಗ್ ಎದುರಾಳಿ ತಂಡವನ್ನು ಕಂಗೆಡಿಸಿತು.
ಇದೇ ವೇಳೆ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. 4 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 55 ರನ್ ಕಲೆಹಾಕಿದರು. ಇದು ಕಿವೀಸ್ ವಿರುದ್ಧ ಅಭಿಷೇಕ್ ಬಾರಿಸಿದ ಎರಡನೇ ವೇಗದ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ಅವರು ಇದೇ ವರ್ಷ ಗುವಾಹಟಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತಮ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ನಿರ್ಮಿಸಿದ್ದರು. ಇದೀಗ ಅದೇ ಕಿವೀಸ್ ವಿರುದ್ಧ ಅವರ ನೆಲದಲ್ಲಿ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ್ದಾರೆ.
Published On - 2:49 pm, Tue, 27 October 26