198 ರನ್‌ಗಳ ಗುರಿ 14 ಓವರ್‌ಗಳಲ್ಲಿ ಚೇಸ್; ಅಭಿಷೇಕ್ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ! ಭಾರತಕ್ಕೆ ಸರಣಿ
ವೆಲ್ಲಿಂಗ್ಟನ್‌ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ 3ನೇ T20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ 198 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿ ಜಯಗಳಿಸಿದೆ. ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಹಾಗೂ ವೈಭವ್ ಸೂರ್ಯವಂಶಿ ಅವರ ಉತ್ತಮ ಇನ್ನಿಂಗ್ಸ್‌ನಿಂದ ಭಾರತ 13.2 ಓವರ್‌ಗಳಲ್ಲೇ ಗೆದ್ದು, ಐದು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡಿದೆ.

ವೆಲ್ಲಿಂಗ್ಟನ್‌ನ ಹೆನ್ರಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯವನ್ನು ಶ್ರೇಯಸ್ ಅಯ್ಯರ್ ಪಡೆ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ 198 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಈ ಚೇಸಿಂಗ್ನಲ್ಲಿ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿದರೆ, ಅರ್ಧಶತಕ ವಂಚಿತರಾದ ವೈಭವ್45 ರನ್ ಬಾರಿಸಿದರು. ಆದರೆ ಸ್ಫೋಟಕ ಆರಂಭದ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿ ಪೆವಿಲಿಯನ್ ಸೇರಿಕೊಂಡರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 198 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತ 4 ವಿಕೆಟ್ಗಳನ್ನು ಕಳೆದುಕೊಂಡು ಕೇವಲ 13.2 ಓವರ್‌ಗಳಲ್ಲಿ ಅಂದರೆ ಇನ್ನು 40 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸತತ ಮೂರು ಪಂದ್ಯಗಳನ್ನು ಗೆದ್ದು ಐದು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ತನ್ನದಾಗಿಸಿಕೊಂಡಿದೆ.
ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 38 ಎಸೆತಗಳಲ್ಲಿ 113 ರನ್ ಸಿಡಿಸಿದರೆ, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ 19 ಎಸೆತಗಳಲ್ಲಿ 45 ರನ್ ಗಳಿಸಿ ಮಿಂಚಿದರು. ಈ ಇಬ್ಬರೂ ಕೇವಲ 43 ಎಸೆತಗಳಲ್ಲಿ 133 ರನ್‌ಗಳ ಜೊತೆಯಾಟವಾಡಿ ನ್ಯೂಜಿಲೆಂಡ್ ಬೌಲರ್‌ಗಳ ಬೆವರಿಳಿಸಿದರು.
ಮೊದಲ 5 ಓವರ್‌ಗಳಲ್ಲೇ 100 ರನ್
199 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು. ಮೊದಲ ಎಸೆತದಲ್ಲೇ ಅಭಿಷೇಕ್ ಸಿಕ್ಸರ್ ಬಾರಿಸಿದರೆ, ವೈಭವ್ ಬೌಂಡರಿ ಮೂಲಕ ರನ್ ಖಾತೆ ತೆರೆದರು. ಮೊದಲ ಓವರ್‌ನಲ್ಲೇ ಈ ಜೋಡಿ ಬರೋಬ್ಬರಿ 26 ರನ್ ಕಲೆಹಾಕಿತು. ಎರಡನೇ ಓವರ್‌ನಲ್ಲಿ 17 ರನ್, ಮೂರನೇ ಓವರ್‌ನಲ್ಲಿ 21 ರನ್, ನಾಲ್ಕನೇ ಓವರ್‌ನಲ್ಲಿ 20 ರನ್ ಹಾಗೂ ಐದನೇ ಓವರ್‌ನಲ್ಲಿ 16 ರನ್ ಹರಿದುಬಂದವು. ಈ ಮೂಲಕ ಭಾರತ ಕೇವಲ ಐದು ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿ ಹೊಸ ದಾಖಲೆ ನಿರ್ಮಿಸಿತು.
ಇಷ್ಟಕ್ಕೆ ಸುಮ್ಮನಾಗದ ಅಭಿಷೇಕ್ ಮತ್ತು ವೈಭವ್ ಜೋಡಿ ಆರನೇ ಓವರ್‌ನಲ್ಲೂ 18 ರನ್ ಚಚ್ಚಿತು. ಪರಿಣಾಮ, ಮೊದಲ ಆರು ಓವರ್‌ಗಳಲ್ಲಿ ಭಾರತ 118 ರನ್ ಕಲೆಹಾಕಿತು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನ ಪವರ್‌ಪ್ಲೇನಲ್ಲಿ ಭಾರತದ ಈ ಸ್ಫೋಟಕ ಬ್ಯಾಟಿಂಗ್ ಎದುರಾಳಿ ತಂಡವನ್ನು ಕಂಗೆಡಿಸಿತು.
1️⃣9️⃣9️⃣ chased down in 13.2 overs 💥
📸 #TeamIndia take a 3️⃣-0️⃣ lead and seal the series with a run-chase for the ages 👏 🙌
Updates ▶️ https://t.co/zf4CnZQ8CD
#NZvIND https://t.co/pP6zHBmuns
— BCCI (@BCCI) October 27, 2026
35 ಎಸೆತಗಳಲ್ಲಿ ಅಭಿಷೇಕ್ ಶತಕ
ಪವರ್‌ಪ್ಲೇನಲ್ಲಿ ರನ್ ಮಳೆಯನ್ನೇ ಸುರಿಸಿದ ಭಾರತಕ್ಕೆ ಎಂಟನೇ ಓವರ್‌ನಲ್ಲಿ ಮೊದಲ ಹಿನ್ನಡೆ ಎದುರಾಯಿತು. ನ್ಯೂಜಿಲೆಂಡ್ ಬೌಲರ್ ಫಿಶರ್ ಎಸೆತದಲ್ಲಿ ವೈಭವ್ ಸೂರ್ಯವಂಶಿ, ಮಿಚೆಲ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಅವರು ಕೇವಲ 18 ಎಸೆತಗಳಲ್ಲಿ 45 ರನ್ ಗಳಿಸಿ ತಂಡಕ್ಕೆ ಭರ್ಜರಿ ಅಡಿಪಾಯ ಹಾಕಿಕೊಟ್ಟರು.
ಆದರೆ, ವೈಭವ್ ಔಟಾದರೂ ಅಭಿಷೇಕ್ ಶರ್ಮಾ ಅಬ್ಬರ ಮಾತ್ರ ನಿಲ್ಲಲಿಲ್ಲ. ನ್ಯೂಜಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅವರು ಕೇವಲ 35 ಎಸೆತಗಳಲ್ಲಿ ತಮ್ಮ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಶತಕ ಪೂರೈಸಿದರು. ಒಟ್ಟು 38 ಎಸೆತಗಳನ್ನು ಎದುರಿಸಿದ ಅಭಿಷೇಕ್ 113 ರನ್ ಸಿಡಿಸಿ ಔಟಾದರು.
ಬಳಿಕ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಕೂಡ ವಿಕೆಟ್ ಒಪ್ಪಿಸಿದರು. ಆದರೂ, ಆರಂಭಿಕರ ಅಬ್ಬರದ ಕಾರಣ ಭಾರತಕ್ಕೆ ಗೆಲುವು ಸಾಧಿಸಲು ಹೆಚ್ಚಿನ ಸಮಯ ಬೇಕಾಗಲಿಲ್ಲ. ಕೇವಲ 13.2 ಓವರ್‌ಗಳಲ್ಲೇ ಗುರಿ ತಲುಪಿ ಪಂದ್ಯವನ್ನು ಗೆದ್ದುಕೊಂಡಿತು.
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ..!
ಡ್ಯಾರಿಲ್ ಮಿಚೆಲ್ ಹೋರಾಟ ವ್ಯರ್ಥ
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ ತಂಡ ಭಾರತಕ್ಕೆ 199 ರನ್‌ಗಳ ಗುರಿ ನೀಡಿತ್ತು. ತಂಡದ ಪರ ಡ್ಯಾರಿಲ್ ಮಿಚೆಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 52 ಎಸೆತಗಳನ್ನು ಎದುರಿಸಿದ ಅವರು 89 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೊಂದೆಡೆ ಬೆವೊನ್ ಜಾಕೋಬ್ಸ್ ಕೂಡ ಉಪಯುಕ್ತ ಕಾಣಿಕೆ ನೀಡಿದರು. ಅವರು 23 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು. ಭಾರತದ ಪರ ಅಕ್ಷರ್ ಪಟೇಲ್, ಅರ್ಷ್ದೀಪ್ ಸಿಂಗ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:39 pm, Tue, 27 October 26




