ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಭಿಷೇಕ್ ಶರ್ಮಾ..!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ T20 ಪಂದ್ಯದಲ್ಲಿ, ಭಾರತದ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ನ್ಯೂಜಿಲೆಂಡ್ ನೀಡಿದ 198 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ವೈಭವ್ ಸೂರ್ಯವಂಶಿ ಜೊತೆಗೂಡಿ ಮೊದಲ ನಾಲ್ಕು ಓವರ್‌ಗಳಲ್ಲಿ 84 ರನ್ ಕಲೆಹಾಕಿ ಭರ್ಜರಿ ಆರಂಭ ಪಡೆಯಿತು. ಈ ಅರ್ಧಶತಕದಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಸೇರಿದ್ದವು.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20ಐ ಸರಣಿಯ ಮೂರನೇ ಪಂದ್ಯ ವೆಲ್ಲಿಂಗ್ಟನ್‌ನ ಹೆನ್ರಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 198 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಭರ್ಜರಿ ಆರಂಭ ಸಿಕ್ಕಿದ್ದು, ಮೊದಲ 4 ಓವರ್‌ಗಳಲ್ಲಿ ಬರೋಬ್ಬರಿ 84 ರನ್ ಕಲೆಹಾಕಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಮೈದಾನದಲ್ಲಿ ಸಿಕ್ಸರ್ಗಳ ಮಳೆ ಸುರಿಸಿದರು. ಇದರ ಪರಿಣಾಮವಾಗಿ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಈ ಅರ್ಧಶತಕದಲ್ಲಿ 5 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು.
ಈ ಪಂದ್ಯಕ್ಕೆ ಭಾರತದ ಆರಂಭಿಕ ಜೋಡಿ ಬದಲಾಗಿತ್ತು. ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆರಂಭಿಕರು ಬದಲಾದರೂ ತಂಡದ ಆರಂಭಕ್ಕೆ ಯಾವುದೇ ಭಂಗ ಬರಲಿಲ್ಲ. ಇವರಿಬ್ಬರು ಮೊದಲ ಎಸೆತದಿಂದಲೇ ಕಿವೀಸ್ ಬೌಲರ್ಗಳ ಬೆಂಡೆತಲು ಶುರು ಮಾಡಿದರು. ಇದರ ಫಲವಾಗಿ ಜೇಕಬ್ ಡಫಿ ಬೌಲ್ ಮಾಡಿದ ಮೊದಲ ಓವರ್ನ ಮೊದಲ ಎಸೆತದಲ್ಲೇ ವೈಭವ್ ಬೌಂಡರಿ ಬಾರಿಸಿದರೆ, ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಇತ್ತ ಅಭಿಷೇಕ್ ಶರ್ಮಾ ಕೂಡ ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಎತ್ತಿದರು. ಹೀಗಾಗಿ ಮೊದಲ ಓವರ್‌ನಲ್ಲೇ ಭಾರತ ವಿಕೆಟ್ ನಷ್ಟವಿಲ್ಲದೆ 26 ರನ್ ಕಲೆಹಾಕಿತು.
Published On - 2:49 pm, Tue, 27 October 26




