ಸೂಪರ್ ಸಂಡೆ: ಒಂದೇ ದಿನ ಟೀಮ್ ಇಂಡಿಯಾಗೆ 2 ಪಂದ್ಯಗಳು
ಭಾರತದಲ್ಲಿ ಕ್ರಿಕೆಟ್ ಎನ್ನುವುದು ಕೇವಲ ಆಟವಲ್ಲ, ಅದೊಂದು ಎಮೋಷನ್. ಕೋಟ್ಯಂತರ ಅಭಿಮಾನಿಗಳ ಈ ಎಮೋಷನ್ ನಾಳೆ (ಸೆ.13) ಡಬಲ್ ಆಗಲಿದೆ. ಏಕೆಂದರೆ, ಭಾರತೀಯ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ರೋಮಾಂಚನಕಾರಿ 'ಸೂಪರ್ ಸಂಡೆ' ಧಮಾಕಾಗೆ ಟೀಮ್ ಇಂಡಿಯಾ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.

ಟೀಮ್ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ನಾಳೆ (ಸೆಪ್ಟೆಂಬರ್ 13) ನಿಜಕ್ಕೂ ‘ಸೂಪರ್ ಸಂಡೇ’. ಏಕೆಂದರೆ, ಒಂದೇ ದಿನ ಭಾರತ ತಂಡದ ಎರಡು ಪ್ರಮುಖ ಪಂದ್ಯಗಳು ಜರುಗಲಿವೆ. ಒಂದೆಡೆ ಭಾರತ ಪುರುಷರ ತಂಡವು ಅಫ್ಘಾನಿಸ್ತಾನ್ ವಿರುದ್ಧದ ಟಿ20 ಸರಣಿಯನ್ನು ಆರಂಭಿಸುತ್ತಿದ್ದರೆ, ಮತ್ತೊಂದೆಡೆ ಭಾರತೀಯ ಮಹಿಳಾ ತಂಡವು ಏಷ್ಯಾದ ಹೊಸ ಸಾಮ್ರಾಜ್ಞಿ ಯಾರೆಂಬುದನ್ನು ನಿರ್ಣಯಿಸುವ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.
ಭಾರತ vs ಅಫ್ಘಾನಿಸ್ತಾನ್:
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಈ ಸರಣಿಯ ವಿಶೇಷತೆಯೆಂದರೆ, ಪಂದ್ಯ ಭಾರತದಲ್ಲಿ ನಡೆದರೂ ಸಹ ಅಫ್ಘಾನಿಸ್ತಾನ ಅಧಿಕೃತವಾಗಿ ಈ ಸರಣಿಯ ಆತಿಥೇಯ ದೇಶವಾಗಿದೆ.
- ನಾಯಕತ್ವ: ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದರೆ, ಅಫ್ಘಾನಿಸ್ತಾನ್ ತಂಡಕ್ಕೆ ಇಬ್ರಾಹಿಂ ಜದ್ರಾನ್ ನಾಯಕರಾಗಿದ್ದಾರೆ
- ನೇರ ಪ್ರಸಾರ: ಈ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ಹಾಗೂ FanCode ಆ್ಯಪ್ ಮೂಲಕ ಲೈವ್ ವೀಕ್ಷಿಸಬಹುದು.
- ಎಷ್ಟು ಗಂಟೆಗೆ ಪಂದ್ಯ: ಈ ಸರಣಿಯ ಮೊದಲ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಶುರುವಾಗಲಿದೆ.
ಇದನ್ನೂ ಓದಿ: ‘ಇಂಡಿಯಾ ಚಾಂಪಿಯನ್ಸ್’ ತಂಡ ಪ್ರಕಟ
ಭಾರತ vs ಶ್ರೀಲಂಕಾ:
ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಮಹಿಳಾ ಏಷ್ಯಾಕಪ್ ಫೈನಲ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ. ಕಳೆದ ಬಾರಿಯ ಏಷ್ಯಾಕಪ್ ಫೈನಲ್ನಲ್ಲಿ ಭಾರತ ತಂಡಕ್ಕೆ ಸೋಲುಣಿಸಿ ಶ್ರೀಲಂಕಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಮತ್ತೊಮ್ಮೆ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಸೇಡು ತೀರಿಸಿಕೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
- ನಾಯಕತ್ವ: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ ತನ್ನ 8ನೇ ಏಷ್ಯಾ ಕಪ್ ಮುಕುಟವನ್ನು ಮುಡಿಗೇರಿಸಿಕೊಳ್ಳಲು ಹೋರಾಡಲಿದೆ. ಚಾಮರಿ ಅಥಾಪತ್ತು ನೇತೃತ್ವದ ಶ್ರೀಲಂಕಾ ತಂಡ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಹವಣಿಸುತ್ತಿದೆ.
- ನೇರ ಪ್ರಸಾರ: ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಸೋನಿ ಲೈವ್ ಆ್ಯಪ್ನಲ್ಲಿ ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಇರಲಿದೆ.
- ಎಷ್ಟು ಗಂಟೆಗೆ ಪಂದ್ಯ: ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಶುರುವಾಗಲಿದೆ.




