AFG vs NZ: ಟಾಸ್ ಕೂಡ ನಡೆಯದೆ ನ್ಯೂಜಿಲೆಂಡ್- ಅಫ್ಘಾನಿಸ್ತಾನ ಟೆಸ್ಟ್ ಪಂದ್ಯ ರದ್ದು

|

Updated on: Sep 13, 2024 | 4:08 PM

AFG Vs NZ: ಗ್ರೇಟರ್ ನೋಯ್ಡಾದಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯದ 5 ನೇ ದಿನದಾಟವೂ ಮಳೆಯಿಂದ ರದ್ದಾಗಿದೆ. ಸತತ ಮಳೆಯಿಂದಾಗಿ ಪಂದ್ಯದ ಅಧಿಕಾರಿಗಳು ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಇದರೊಂದಿಗೆ ಈ ಟೆಸ್ಟ್ ಪಂದ್ಯ ಇದೀಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದು, ಪಂದ್ಯದ ಎಲ್ಲಾ ಐದು ದಿನಗಳು ಯಾವುದೇ ಚೆಂಡು ಎಸೆತವಿಲ್ಲದೆ ರದ್ದುಗೊಂಡಿವೆ.

AFG vs NZ: ಟಾಸ್ ಕೂಡ ನಡೆಯದೆ ನ್ಯೂಜಿಲೆಂಡ್- ಅಫ್ಘಾನಿಸ್ತಾನ ಟೆಸ್ಟ್ ಪಂದ್ಯ ರದ್ದು
ಅಫ್ಘಾನಿಸ್ತಾನ- ನ್ಯೂಜಿಲೆಂಡ್
Follow us on

ಗ್ರೇಟರ್ ನೋಯ್ಡಾದಲ್ಲಿ ನಡೆಯಬೇಕಿದ್ದ ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯದ 5 ನೇ ದಿನದಾಟವೂ ಮಳೆಯಿಂದ ರದ್ದಾಗಿದೆ. ಸತತ ಮಳೆಯಿಂದಾಗಿ ಪಂದ್ಯದ ಅಧಿಕಾರಿಗಳು ಟೆಸ್ಟ್ ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಇದರೊಂದಿಗೆ ಈ ಟೆಸ್ಟ್ ಪಂದ್ಯ ಇದೀಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದು, ಪಂದ್ಯದ ಎಲ್ಲಾ ಐದು ದಿನಗಳು ಯಾವುದೇ ಚೆಂಡು ಎಸೆತವಿಲ್ಲದೆ ರದ್ದುಗೊಂಡಿವೆ. 1877ರಲ್ಲಿ ಟೆಸ್ಟ್ ಪಂದ್ಯ ಆರಂಭವಾದಾಗಿನಿಂದ ಒಂದು ಚೆಂಡನ್ನು ಎಸೆಯದೆ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಿರುವುದು ಇದು ಕೇವಲ 8ನೇ ಬಾರಿ. 1890 ರಲ್ಲಿ ಮೊದಲ ಬಾರಿಗೆ, 1998 ರಲ್ಲಿ ಕೊನೆಯ ಬಾರಿಗೆ ಇಂತಹ ಟೆಸ್ಟ್ ಪಂದ್ಯವನ್ನು ನೋಡಲಾಗಿತ್ತು. ಇನ್ನು ಭಾರತದ ವಿಚಾರಕ್ಕೆ ಬಂದರೆ ಒಂದೂ ಬಾಲ್ ಎಸೆತವಿಲ್ಲದೆ ಟೆಸ್ಟ್ ಪಂದ್ಯ ರದ್ದುಗೊಂಡಿರುವುದು ಇದೇ ಮೊದಲು.

147 ವರ್ಷಗಳಲ್ಲಿ 8 ಬಾರಿ

1877 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯವನ್ನು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಟೆಸ್ಟ್ ಪಂದ್ಯವೆಂದು ಪರಿಗಣಿಸಲಾಗಿದೆ. ಅಂದರೆ ಟೆಸ್ಟ್ ಕ್ರಿಕೆಟ್​ನ ಇತಿಹಾಸ 147 ವರ್ಷಗಳಷ್ಟು ಹಳೆಯದು. 1890ರಲ್ಲಿ ಮೊದಲ ಬಾರಿಗೆ ಒಂದೂ ಚೆಂಡನ್ನು ಎಸೆಯಲಾಗದೆ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಯಿತು. ಆಗಸ್ಟ್ 1890 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಒಂದೇ ಒಂದು ಚೆಂಡನ್ನು ಎಸೆಯಲಾಗಲಿಲ್ಲ. ಇದರ ನಂತರ, 1938 ರಲ್ಲಿ ಮತ್ತೊಮ್ಮೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ರದ್ದಾಗಿತ್ತು.

ನಂತರ ಡಿಸೆಂಬರ್ 1970 ರಲ್ಲಿ, ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ನಡುವೆ ಇಂಗ್ಲೆಂಡ್‌ನಲ್ಲಿ ನಡೆದ ಪಂದ್ಯವೂ ಮಳೆಯಿಂದಾಗಿ ಒಂದು ಚೆಂಡು ಬೌಲ್ ಆಗದೆ ರದ್ದುಗೊಂಡಿತು. ಫೆಬ್ರವರಿ 1989 ರಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯಗಳು ಮತ್ತು ಮಾರ್ಚ್ 1990 ರಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಗಳು ಮಳೆಯಿಂದಾಗಿ ಆಡಲು ಸಾಧ್ಯವಾಗಲಿಲ್ಲ. ಇದಲ್ಲದೇ ಡಿಸೆಂಬರ್ 1998 ರಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಂತರ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವು ಯಾವುದೇ ಬಾಲ್ ಎಸೆಯದೆ ರದ್ದಾಗಿದ್ದವು. ಇದೀಗ ಗ್ರೇಟರ್ ನೋಯ್ಡಾದಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯವನ್ನು ಚೆಂಡು ಎಸೆಯಲಾಗದೆ ರದ್ದುಗೊಳಿಸಲಾಗಿದೆ.

ಎರಡೂ ತಂಡಗಳಿಗೆ ನಷ್ಟ

ಅಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಮಳೆ ದೊಡ್ಡ ಶತ್ರುವಾಯಿತು. ಬಾಲ್ ಎಸೆಯುವುದು ಬಿಡಿ, ಈ ಪಂದ್ಯದಲ್ಲಿ ಟಾಸ್ ಕೂಡ ಮಾಡಲಾಗಲಿಲ್ಲ. ಇದೀಗ ಗ್ರೇಟರ್ ನೋಯ್ಡಾ ಕ್ರೀಡಾ ಸಂಕೀರ್ಣದ ನಿರ್ವಹಣೆಯ ಮೇಲೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಏಕೆಂದರೆ ಮೊದಲ 2 ದಿನ ಮಳೆಯಾಗಿರಲಿಲ್ಲ. ಇದರ ಹೊರತಾಗಿಯೂ ಮೈದಾನವನ್ನು ಒಣಗಿಸಲು ಮೈದಾನದವರು ವಿಫಲರಾಗಿದ್ದರು.

ಅಫ್ಘಾನಿಸ್ತಾನ ತಂಡ ಟೆಸ್ಟ್ ಪಂದ್ಯಗಳನ್ನು ಆಡುವುದು ತೀರ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ನ್ಯೂಜಿಲೆಂಡ್‌ನಂತಹ ತಂಡದ ವಿರುದ್ಧ ಆಡುವ ಮೂಲಕ ಅಫ್ಘಾನಿಸ್ತಾನ ಆಟಗಾರರು ಉತ್ತಮ ಅನುಭವ ಪಡೆದುಕೊಳ್ಳುವ ಅವಕಾಶ ಪಡೆದಿದ್ದರು. ಈ ಪಂದ್ಯದಿಂದ ತಂಡ ಸಾಕಷ್ಟು ಕಲಿಯಬಹುದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇತ್ತ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ 50 ಶೇಕಡಾ ಅಂಕಗಳೊಂದಿಗೆ 3 ನೇ ಸ್ಥಾನದಲ್ಲಿದ್ದು, ಇದೀಗ ಶ್ರೀಲಂಕಾ ಪ್ರವಾಸದಲ್ಲಿ 2 ಟೆಸ್ಟ್ ಮತ್ತು ಭಾರತದ ವಿರುದ್ಧ 3 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ. ಈ ಎರಡೂ ತಂಡಗಳಲ್ಲಿ ಅತ್ಯುತ್ತಮ ಸ್ಪಿನ್ನರ್​ಗಳಿರುವುದರಿಂದ ಅಫ್ಘಾನಿಸ್ತಾನ ವಿರುದ್ಧದ ಈ ಪಂದ್ಯ ನಡೆದಿದ್ದರೆ, ನ್ಯೂಜಿಲೆಂಡ್ ತಂಡಕ್ಕೆ ಮುಂಬರುವ ಎರಡು ಸರಣಿಗಳಿಗೆ ಉತ್ತಮ ತಯಾರಿ ಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಏಕೆಂದರೆ ಅಫ್ಘಾನಿಸ್ತಾನ ತಂಡದಲ್ಲೂ ಅತ್ಯುತ್ತಮ ಸ್ಪಿನ್ನರ್​ಗಳಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Fri, 13 September 24