ದೆಹಲಿಯಲ್ಲಿ ಅಫ್ಘಾನಿಸ್ತಾನ್ ಕ್ರಿಕೆಟಿಗ ಶಪೂರ್ ಝದ್ರಾನ್ ನಿಧನ!
Shapoor Zadran: ಅಫ್ಘಾನಿಸ್ತಾನ ಕ್ರಿಕೆಟ್ ಇತಿಹಾಸದ ಸುವರ್ಣ ಯುಗದ ಆರಂಭಕ್ಕೆ ಕಾರಣರಾಗಿದ್ದ, ದೇಶದ ಮೊಟ್ಟಮೊದಲ ಸ್ಟಾರ್ ವೇಗದ ಬೌಲರ್ ಶಪೂರ್ ಝದ್ರಾನ್ ಅವರ ಅಕಾಲಿಕ ನಿಧನವು ಜಾಗತಿಕ ಕ್ರಿಕೆಟ್ ಲೋಕವನ್ನು ತೀವ್ರ ಆಘಾತಕ್ಕೆ ತಳ್ಳಿದೆ. ಅಪರೂಪದ ಅನಾರೋಗ್ಯದ ವಿರುದ್ಧ ದೀರ್ಘಕಾಲ ಹೋರಾಡಿದ ಅವರು ತಮ್ಮ ಜನ್ಮದಿನಗಿಂತ ಒಂದು ದಿನ ಮುಂಚಿತವಾಗಿ ಇಹಲೋಕ ತ್ಯಜಿಸಿದ್ದಾರೆ.

ಅಫ್ಘಾನಿಸ್ತಾನ್ ಕ್ರಿಕೆಟ್ ತಂಡವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗದ ಬೌಲರ್ ಶಪೂರ್ ಝದ್ರಾನ್ (Shapoor Zadran) ಅವರು ಮಂಗಳವಾರ (ಜುಲೈ 7, 2026) ದೆಹಲಿಯಲ್ಲಿ ನಿಧನರಾಗಿದ್ದಾರೆ. ಜುಲೈ 8 ರಂದು ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿದ್ದ ಅವರು, ಜನ್ಮದಿನದ ಕೇವಲ ಒಂದು ದಿನ ಮುಂಚಿತವಾಗಿ ಕೊನೆಯುಸಿರೆಳೆದಿದ್ದಾರೆ.
ಮಾರಣಾಂತಿಕ ಕಾಯಿಲೆ!
ಕಳೆದ ಕೆಲವು ತಿಂಗಳುಗಳಿಂದ ಶಪೂರ್ ಅವರು ‘ಹಿಮೋಫಾಗೊಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್’ (HLH) ಎಂಬ ಅಪರೂಪದ ಮತ್ತು ಮಾರಣಾಂತಿಕ ರೋಗನಿರೋಧಕ ಶಕ್ತಿ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ತೀವ್ರವಾದ ಉರಿಯೂತಕ್ಕೆ ಕಾರಣವಾಗುವ ಈ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರು ಜನವರಿ 2026 ರಿಂದ ದೆಹಲಿ-ಎನ್‌ಸಿಆರ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಮೇ ತಿಂಗಳಿನಿಂದ ಅವರು ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅಫ್ಘಾನ್ ತಂಡ ಕಟ್ಟಿದ ಆಟಗಾರ:
ಅಫ್ಘಾನಿಸ್ತಾನ್ ಕ್ರಿಕೆಟ್ ಮಂಡಳಿ (ACB) ಶಪೂರ್ ಅವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದು, ಅವರನ್ನು “ಅಫ್ಘಾನ್ ಕ್ರಿಕೆಟ್‌ಗೆ ಬಲವಾದ ಬುನಾದಿ ಹಾಕಿಕೊಟ್ಟ ಮಹಾನ್ ಆಟಗಾರ” ಎಂದು ಕೊಂಡಾಡಿದೆ. ಇಂದಿನ ಅಫ್ಘಾನಿಸ್ತಾನ್ ತಂಡ ರೂಪುಗೊಳ್ಳುವಲ್ಲಿ ಶಪೂರ್ ಝದ್ರಾನ್ ಕೂಡ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ ಯುವ ಆಟಗಾರರಿಗೆ ಸ್ಫೂರ್ತಿಯಾಗಿ ನಿಂತಿದ್ದರು.
ಶಪೂರ್ ವೃತ್ತಿಜೀವನ:
- ಅಂತರರಾಷ್ಟ್ರೀಯ ಕೆರಿಯರ್: ಶಪೂರ್ ಅವರು 2009 ರಿಂದ 2020 ರವರೆಗೆ ಅಫ್ಘಾನಿಸ್ತಾನ್ ತಂಡವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ 44 ಏಕದಿನ ಹಾಗೂ 36 ಟಿ20 ಪಂದ್ಯಗಳನ್ನಾಡಿ ಒಟ್ಟು 80 ವಿಕೆಟ್‌ಗಳನ್ನು ಕಬಳಿಸಿದ್ದರು.
- ವಿಶ್ವಕಪ್‌ನ ಹೀರೊ: 2015ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಅವರು ಅಫ್ಘಾನಿಸ್ತಾನದ ಪರ ಗರಿಷ್ಠ ವಿಕೆಟ್ ಟೇಕರ್ ಎನಿಸಿಕೊಂಡಿದ್ದರು.
- ಐತಿಹಾಸಿಕ ರನ್: 2015ರ ವಿಶ್ವಕಪ್‌ನಲ್ಲಿ ಸ್ಕಾಟ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ರನ್ ಗಳಿಸಿ, ಅಫ್ಘಾನಿಸ್ತಾನ್ ತಂಡಕ್ಕೆ ವಿಶ್ವಕಪ್ ಇತಿಹಾಸದಲ್ಲೇ ಮೊಟ್ಟಮೊದಲ ಜಯ ತಂದುಕೊಟ್ಟ ರೋಮಾಂಚಕ ಕ್ಷಣಕ್ಕೆ ಶಪೂರ್ ಕಾರಣರಾಗಿದ್ದರು.
- ಸ್ಟಾರ್ ವೇಗಿ: 6 ಅಡಿ ಎತ್ತರದ ಕಾಯ ಮತ್ತು ಹಾರಾಡುವ ಕೇಶರಾಶಿಯೊಂದಿಗೆ ಭೀತಿ ಹುಟ್ಟಿಸುತ್ತಿದ್ದ ಅವರು ಅಫ್ಘಾನಿಸ್ತಾನದ ಮೊದಲ ಸ್ಟಾರ್ ವೇಗಿ ಎನಿಸಿಕೊಂಡಿದ್ದರು.
- ಮಾರ್ಗದರ್ಶಕ: ಕ್ರಿಕೆಟ್ ಆಟ ಮಾತ್ರವಲ್ಲದೆ, ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಝ್, ಇಬ್ರಾಹಿಂ ಝದ್ರಾನ್ ಸೇರಿದಂತೆ ಅಫ್ಘಾನ್ ತಂಡ ಇಂದಿನ ಹಲವು ಕ್ರಿಕೆಟ್ ತಾರೆಗಳಿಗೆ ಶಪೂರ್ ಆರಂಭಿಕ ದಿನಗಳಲ್ಲಿ ಪ್ರಮುಖ ಮಾರ್ಗದರ್ಶಕರಾಗಿದ್ದರು.
ಇದನ್ನೂ ಓದಿ: ಅರ್ಜೆಂಟೀನಾ ಪರ ‘ಆಡುತ್ತಿರುವ’ ರೆಫರಿ… ಗಂಭೀರ ಆರೋಪ!
ಕಂಬನಿ ಮಿಡಿದ ಕ್ರಿಕೆಟ್ ಲೋಕ:
ಶಪೂರ್ ಝದ್ರಾನ್ ಅವರ ಅಕಾಲಿಕ ನಿಧನಕ್ಕೆ ಮಾಜಿ ಅಂತರರಾಷ್ಟ್ರೀಯ ಕೋಚ್ ರವಿಶಾಸ್ತ್ರಿ, ಅಫ್ಘಾನ್ ಆಟಗಾರರಾದ ಮೊಹಮ್ಮದ್ ನಬಿ, ರಶೀದ್ ಖಾನ್ ಸೇರಿದಂತೆ ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಹಾಗೂ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಂಬನಿ ಮಿಡಿದಿದ್ದಾರೆ.




