ಕೊಹ್ಲಿ, ಬುಮ್ರಾ ಇಲ್ಲದ ಟೀಂ ಇಂಡಿಯಾ! ರಹಾನೆ ಆಯ್ಕೆಗೆ ಅಭಿಮಾನಿಗಳು ಸುಸ್ತು

ಭಾರತದ ಮಾಜಿ ಕ್ರಿಕೆಟಿಗ ಅಜಿಂಕ್ಯ ರಹಾನೆ ತಮ್ಮ ಆಲ್‌ಟೈಮ್ ಟೆಸ್ಟ್ XI ಘೋಷಿಸಿದ್ದಾರೆ. ಆದರೆ, ಅವರ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ಇಬ್ಬರಿಗೂ ಸ್ಥಾನ ಸಿಕ್ಕಿಲ್ಲ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಧೋನಿಗೆ ಪ್ರಾಧಾನ್ಯತೆ ನೀಡಿದ ರಹಾನೆ ಆಯ್ಕೆ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಮಹತ್ವದ ಆಟಗಾರರನ್ನು ಏಕೆ ಕೈಬಿಡಲಾಗಿದೆ ಎಂಬುದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಕೊಹ್ಲಿ, ಬುಮ್ರಾ ಇಲ್ಲದ ಟೀಂ ಇಂಡಿಯಾ! ರಹಾನೆ ಆಯ್ಕೆಗೆ ಅಭಿಮಾನಿಗಳು ಸುಸ್ತು
ಅಜಿಂಕ್ಯ ರಹಾನೆ

Updated on: Oct 25, 2026 | 3:42 PM

ತಮ್ಮ ಜೊತೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಆಟಗಾರರ ಪೈಕಿ ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ ಭಾರತದ ಮಾಜಿ ಆಟಗಾರ ಅಜಿಂಕ್ಯ ರಹಾನೆ, ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಏಕೆಂದರೆ ರಹಾನೆ ತಮ್ಮ ಆಲ್‌ಟೈಮ್ ಟೀಂ ಇಂಡಿಯಾ ಟೆಸ್ಟ್ XIನಲ್ಲಿ ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ಇಬ್ಬರಿಗೂ ಸ್ಥಾನ ನೀಡಿಲ್ಲ. ವರ್ಷಗಳ ಕಾಲ ಟೀಂ ಇಂಡಿಯಾದಲ್ಲಿ ಆಡಿರುವ ರಹಾನೆ, ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರಿಂದ ಸಾಕಷ್ಟು ಕಲಿತಿದ್ದಾರೆ. ಚೇತೇಶ್ವರ ಪೂಜಾರ ಜೊತೆಗೂಡಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಬ್ಯಾಟಿಂಗ್‌ಗೆ ಬಲ ತುಂಬಿದ್ದಾರೆ. ಹೀಗೆ ಹಲವು ತಲೆಮಾರಿನ ಆಟಗಾರರ ಜೊತೆ ಆಡಿರುವ ರಹಾನೆ, ಇದೀಗ ತಮ್ಮ ನೆಚ್ಚಿನ ಟೆಸ್ಟ್ ತಂಡವನ್ನು ಪ್ರಕಟಿಸಿದ್ದು, ಆಯ್ಕೆಯ ಬಗ್ಗೆ ಚರ್ಚೆ ಶುರುವಾಗಿದೆ.

ಆಧುನಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ಇಲ್ಲದ ಭಾರತ ತಂಡವನ್ನು ಕಲ್ಪಿಸಿಕೊಳ್ಳೋದೇ ಕಷ್ಟ. ವಿದೇಶಿ ನೆಲದಲ್ಲೂ ಗೆಲ್ಲುವ ಛಲವನ್ನು ತಂಡದಲ್ಲಿ ಬೆಳೆಸಿದ ಕೊಹ್ಲಿ, ಭಾರತದ ಟೆಸ್ಟ್ ಕ್ರಿಕೆಟ್‌ನ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇನ್ನು ಬುಮ್ರಾ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಹೀಗಿದ್ದರೂ ರಹಾನೆ ತಮ್ಮ ತಂಡದಲ್ಲಿ ಇವರಿಬ್ಬರನ್ನು ಕೈಬಿಟ್ಟಿರೋದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ಸಚಿನ್‌ಗೆ ಜಾಗ ಕೊಡಲು ಕೊಹ್ಲಿ ಔಟ್?

ರಹಾನೆ ಆಯ್ಕೆ ಮಾಡಿದ ತಂಡದಲ್ಲಿ ಸಚಿನ್ ತೆಂಡೂಲ್ಕರ್ ನಾಲ್ಕನೇ ಕ್ರಮಾಂಕದಲ್ಲಿ ಸ್ಥಾನ ಪಡೆದಿದ್ದಾರೆ. ಹೀಗಾಗಿ ಬ್ಯಾಟಿಂಗ್ ಕ್ರಮಾಂಕದ ಲೆಕ್ಕಾಚಾರದಲ್ಲಿ ಕೊಹ್ಲಿಗೆ ಜಾಗ ಸಿಗಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಕೊಹ್ಲಿ ಸ್ಥಾನ ಸಿಗದಿರೋದಕ್ಕೆ ಒಂದು ಕಾರಣ ಇರಬಹುದು. ಆದರೆ, ಬುಮ್ರಾ ಅವರನ್ನೂ ತಂಡದಿಂದ ಹೊರಗಿಟ್ಟಿರೋದು ಅಭಿಮಾನಿಗಳಿಗೆ ದೊಡ್ಡ ಅಚ್ಚರಿ ಮೂಡಿಸಿದೆ.

ತಮ್ಮ ಆರಂಭದ ದಿನಗಳಲ್ಲಿ ಜೊತೆ ಆಡಿದ ಆಟಗಾರರು ಮತ್ತು ಮಾರ್ಗದರ್ಶನ ನೀಡಿದ ಹಿರಿಯ ಆಟಗಾರರಿಗೆ ರಹಾನೆ ಹೆಚ್ಚಿನ ಆದ್ಯತೆ ನೀಡಿದಂತೆ ಕಾಣುತ್ತಿದೆ. ಆದರೂ, ಕೊಹ್ಲಿ ಜೊತೆ ಹಲವು ಸ್ಮರಣೀಯ ಪಂದ್ಯಗಳಲ್ಲಿ ಆಡಿರುವ ರಹಾನೆ, ತಮ್ಮ ಆಲ್‌ಟೈಮ್ ತಂಡದಲ್ಲಿ ಅವರಿಗೆ ಸ್ಥಾನ ನೀಡದಿರೋದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ರಹಾನೆ ಆಲ್‌ಟೈಮ್ ಟೆಸ್ಟ್ XIನಲ್ಲಿ ಯಾರಿಗೆಲ್ಲಾ ಸ್ಥಾನ?

ರಹಾನೆ ಆಯ್ಕೆ ಮಾಡಿದ ತಂಡದಲ್ಲಿ ಆರಂಭಿಕರಾಗಿ ಮುರಳಿ ವಿಜಯ್ ಮತ್ತು ಶಿಖರ್ ಧವನ್ ಸ್ಥಾನ ಪಡೆದಿದ್ದಾರೆ. 2010ರ ದಶಕದ ಮಧ್ಯಭಾಗದಲ್ಲಿ ವಿದೇಶಿ ನೆಲದಲ್ಲಿ ಭಾರತದ ಪರ ಉತ್ತಮ ಆರಂಭ ನೀಡಿದ್ದ ಈ ಜೋಡಿಗೆ ಮನ್ನಣೆ ನೀಡಿದ್ದಾರೆ. ರಾಹುಲ್ ದ್ರಾವಿಡ್ ಮೂರನೇ ಕ್ರಮಾಂಕದಲ್ಲಿ, ಸಚಿನ್ ತೆಂಡೂಲ್ಕರ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ರಹಾನೆ ತಮ್ಮನ್ನು ಐದನೇ ಕ್ರಮಾಂಕದಲ್ಲಿ ಆಯ್ಕೆ ಮಾಡಿಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ತಂಡದ ವಿಕೆಟ್ ಕೀಪರ್ ಆಗಿರುವುದರ ಜೊತೆಗೆ ನಾಯಕನ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿಯ ಸಾಧನೆ ಅವರ ಸೀಮಿತ ಓವರ್‌ಗಳ ಕ್ರಿಕೆಟ್‌ನ ಯಶಸ್ಸಿನಷ್ಟು ಹೆಚ್ಚಾಗಿ ಚರ್ಚೆಯಾಗದಿದ್ದರೂ, ಅವರ ಶಾಂತ ನಾಯಕತ್ವಕ್ಕೆ ರಹಾನೆ ಗೌರವ ನೀಡಿದ್ದಾರೆ.

ಸ್ಪಿನ್ ವಿಭಾಗದಲ್ಲಿ ಜಡೇಜಾ, ಅಶ್ವಿನ್‌ಗೆ ಸ್ಥಾನ

ಬೌಲಿಂಗ್ ವಿಭಾಗದಲ್ಲಿ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಸ್ಪಿನ್ನರ್‌ಗಳಾಗಿ ಸ್ಥಾನ ಪಡೆದಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದಾರೆ. ವಿದೇಶಿ ನೆಲದಲ್ಲೂ ಎದುರಾಳಿ ತಂಡದ ಎಲ್ಲಾ 20 ವಿಕೆಟ್‌ಗಳನ್ನು ಪಡೆಯುವ ಸಾಮರ್ಥ್ಯ ಹೊಂದಿದ್ದ ಭಾರತದ ವೇಗದ ಬೌಲಿಂಗ್ ಪಡೆಯನ್ನು ಗಮನದಲ್ಲಿಟ್ಟುಕೊಂಡು ರಹಾನೆ ಈ ಮೂವರನ್ನು ಆಯ್ಕೆ ಮಾಡಿದಂತಿದೆ.

ಆದರೆ ಇದೇ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾಗೆ ಸ್ಥಾನ ನೀಡಬಹುದಿತ್ತಲ್ಲವೇ ಅನ್ನೋ ಪ್ರಶ್ನೆ ಈಗ ಅಭಿಮಾನಿಗಳಿಂದ ಕೇಳಿಬರುತ್ತಿದೆ. ಇಂದಿನ ಕ್ರಿಕೆಟ್‌ನಲ್ಲಿ ಬುಮ್ರಾ ಅವರ ಬೌಲಿಂಗ್ ಸಾಮರ್ಥ್ಯವನ್ನು ಗಮನಿಸಿದರೆ, ಅವರನ್ನು ಕೈಬಿಟ್ಟ ನಿರ್ಧಾರವನ್ನು ಹಲವರು ಒಪ್ಪಿಕೊಳ್ಳುವುದು ಕಷ್ಟವೇ ಸರಿ. ಒಟ್ಟಿನಲ್ಲಿ, ರಹಾನೆ ಆಯ್ಕೆ ಮಾಡಿದ ಆಲ್‌ಟೈಮ್ ಟೆಸ್ಟ್ XIನಲ್ಲಿ ಹಲವು ದಿಗ್ಗಜರಿಗೆ ಸ್ಥಾನ ಸಿಕ್ಕಿದ್ದರೂ, ವಿರಾಟ್ ಕೊಹ್ಲಿ ಮತ್ತು ಜಸ್‌ಪ್ರೀತ್ ಬುಮ್ರಾ ಹೊರಗುಳಿದಿರೋದು ದೊಡ್ಡ ಚರ್ಚೆಗೆ ನಾಂದಿ ಹಾಡಿದೆ. ತಂಡದ ಆಯ್ಕೆ ವೈಯಕ್ತಿಕ ಅನುಭವ ಮತ್ತು ಆಟಗಾರರ ಪಾತ್ರಗಳನ್ನು ಆಧರಿಸಿರಬಹುದು. ಆದರೆ, ಈ ಇಬ್ಬರು ಸ್ಟಾರ್ ಆಟಗಾರರಿಲ್ಲದ ತಂಡ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವುದಂತೂ ನಿಜ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Sun, 25 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us