ಮುಂಬೈ ತಂಡದ ನಾಯಕತ್ವ ತ್ಯಜಿಸಿದ ಅಜಿಂಕ್ಯ ರಹಾನೆ

Ajinkya Rahane: ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವಾಡಿದ್ದು 2023 ರಲ್ಲಿ. ಇದಾದ ಬಳಿಕ ಅವರನ್ನು ಭಾರತ ಟೆಸ್ಟ್ ತಂಡದ ಆಯ್ಕೆಗೆ ಪರಿಗಣಿಸಲಾಗಿಲ್ಲ. ಇದಾಗ್ಯೂ ಕಳೆದ ಎರಡು ವರ್ಷಗಳಿಂದ ದೇಶೀಯ ಟೂರ್ನಿಗಳಲ್ಲಿ ರಹಾನೆ ಮುಂಬೈ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದರು. ಇದೀಗ ರಣಜಿ ಟೂರ್ನಿಗೂ ಮುನ್ನ ಮುಂಬೈ ತಂಡದ ನಾಯಕತ್ವದಿಂದ ಅಜಿಂಕ್ಯ ರಹಾನೆ ಕೆಳಗಿಳಿದಿದ್ದಾರೆ.

ಮುಂಬೈ ತಂಡದ ನಾಯಕತ್ವ ತ್ಯಜಿಸಿದ ಅಜಿಂಕ್ಯ ರಹಾನೆ
Ajinkya Rahane

Updated on: Aug 21, 2025 | 1:30 PM

ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಮುಂಬರುವ ದೇಶೀಯ ಟೂರ್ನಿಗೂ ಮುಂಚಿತವಾಗಿ ಮುಂಬೈ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಹೊಸ ನಾಯಕನನ್ನು ರೂಪಿಸುವ ಸಲುವಾಗಿ ರಹಾನೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. 37 ವರ್ಷದ ಅಜಿಂಕ್ಯ ರಹಾನೆ ಕಳೆದ ಕೆಲ ವರ್ಷಗಳಿಂದ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಆದರೀಗ ನಿವೃತ್ತಿ ಅಂಚಿನಲ್ಲಿರುವ ಕಾರಣ ಹೊಸ ಆಟಗಾರರಿಗೆ ಜವಾಬ್ದಾರಿ ಒಪ್ಪಿಸಬೇಕಿದೆ. ಹೀಗಾಗಿ ಮುಂಬರುವ ರಣಜಿ ಸೀಸನ್​ನಲ್ಲಿ ಮುಂಬೈ ತಂಡವನ್ನು ಮುನ್ನಡೆಸುವುದಿಲ್ಲ ಎಂದು ರಹಾನೆ ತಿಳಿಸಿದ್ದಾರೆ.

ಮುಂಬೈ ತಂಡವನ್ನು ಮುನ್ನಡೆಸುವುದು ಮತ್ತು ಚಾಂಪಿಯನ್‌ಶಿಪ್‌ಗಳನ್ನು ಗೆಲ್ಲುವುದು ನನಗೆ ಸಿಕ್ಕ ಅಪಾರ ಗೌರವವಾಗಿದೆ. ಮುಂಬರುವ ದೇಶೀಯ ಸೀಸನ್​ ನೋಡುವಾಗ, ಹೊಸ ನಾಯಕನನ್ನು ಆಯ್ಕೆ ಮಾಡಲು ಇದು ಸರಿಯಾದ ಸಮಯ ಎಂದು ನಾನು ನಂಬುತ್ತೇನೆ. ಆದ್ದರಿಂದ ನಾನು ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಒಬ್ಬ ಆಟಗಾರನಾಗಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ನಾನು ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಅಲ್ಲದೆ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನೊಂದಿಗೆ ನನ್ನ ಪ್ರಯಾಣವನ್ನು ಮುಂದುವರಿಸುತ್ತೇನೆ ಎಂದು ಅಜಿಂಕ್ಯ ರಹಾನೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ.

ಅಂದರೆ ನಾಯಕತ್ವ ತ್ಯಜಿಸಿದರೂ ದೇಶೀಯ ಅಂಗಳದಲ್ಲಿ ಮುಂಬೈ ಪರ ಆಡುವುದನ್ನು ಮುಂದುವರೆಸುವುದಾಗಿ ಅಜಿಂಕ್ಯ ರಹಾನೆ ತಿಳಿಸಿದ್ದಾರೆ. ಹೀಗಾಗಿ ಮುಂಬರುವ ರಣಜಿ ಸೀಸನ್​ನಲ್ಲಿ ಮುಂಬೈ ತಂಡದಲ್ಲಿ ಅನುಭವಿ ಬ್ಯಾಟರ್ ಆಗಿ ರಹಾನೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇನ್ನು ಅಜಿಂಕ್ಯ ರಹಾನೆ ನಾಯಕತ್ವದಲ್ಲಿ, ಮುಂಬೈ ತಂಡವು 202324ಸೀಸನ್​ನಲ್ಲಿ ರಣಜಿ ಟ್ರೋಫಿಯನ್ನು ಗೆಲ್ಲುವ ಮೂಲಕ ಏಳು ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿತ್ತು. ಹಾಗೆಯೇ ರಹಾನೆ ಮುಂದಾಳತ್ವದ ಮುಂಬೈ ತಂಡವು 202425ರ ಸೀಸನ್​ನಲ್ಲಿ ಇರಾನಿ ಟ್ರೋಫಿಯನ್ನು ಸಹ ಗೆದ್ದಿತು. ಇದೀಗ ಕಳೆದ ಸೀಸನ್​ನಲ್ಲಿ ಯಶಸ್ವಿ ನಾಯಕ ಮುಂಬರುವ ಸೀಸನ್​ನಲ್ಲಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಮುಂಬೈ ತಂಡದ ಮುಂದಿನ ನಾಯಕ ಯಾರು?

ಮುಂಬೈ ತಂಡವು ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಯಶಸ್ವಿ ಜೈಸ್ವಾಲ್ ಮತ್ತು ಸರ್ಫರಾಝ್ ಖಾನ್ ಅವರಂತಹ ಅನುಭವಿ ಆಟಗಾರರನ್ನು ಹೊಂದಿದೆ. ಜೈಸ್ವಾಲ್ ಮತ್ತು ಸರ್ಫರಾಜ್ ಹೊರತುಪಡಿಸಿ, ಉಳಿದವರ ನಾಯಕತ್ವವು ಶ್ಲಾಘನೀಯ. ಅದರಲ್ಲೂ ಅಯ್ಯರ್ ಮೂರು ಐಪಿಎಲ್ ಫ್ರಾಂಚೈಸಿಗಳನ್ನು ಮುನ್ನಡೆಸಿದ್ದಾರೆ.

ಇದನ್ನೂ ಓದಿ: IPL 2026: 6 ಆಟಗಾರರನ್ನು ಕೈ ಬಿಡಲಿದೆ RCB

ಇತ್ತ ಸೂರ್ಯಕುಮಾರ್ ಯಾದವ್ ಪ್ರಸ್ತುತ ಭಾರತದ ಟಿ20 ನಾಯಕರಾಗಿದ್ದಾರೆ. ಹೀಗಾಗಿ ಶ್ರೇಯಸ್ ಅಯ್ಯರ್ ಹಾಗೂ ಸೂರ್ಯಕುಮಾರ್ ಯಾದವ್ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ಕಂಡು ಬರಲಿದೆ.