IPL 2026: 6 ಆಟಗಾರರನ್ನು ಕೈ ಬಿಡಲಿದೆ RCB
IPL 2026: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ 22 ಆಟಗಾರರು ಕಾಣಿಸಿಕೊಂಡಿದ್ದರು. ಈ 22 ಆಟಗಾರರಲ್ಲಿ 16 ಪ್ಲೇಯರ್ಸ್ ಮುಂದಿನ ಸೀಸನ್ನಲ್ಲೂ ಮುಂದುವರೆಯುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿ ಆರ್ಸಿಬಿ ಪರ ಕಣಕ್ಕಿಳಿದ ಬಹುತೇಕ ಆಟಗಾರರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಐಪಿಎಲ್ 2026 ರ ಮಿನಿ ಹರಾಜಿಗೂ ಮುನ್ನ ಆರ್ಸಿಬಿ ಕೆಲವೇ ಕೆಲವು ಆಟಗಾರರನ್ನು ಮಾತ್ರ ರಿಲೀಸ್ ಮಾಡಲಿದೆ.
Updated on: Aug 19, 2025 | 7:55 AM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ (IPL 2025) ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಮುಂದಿನ ಸೀಸನ್ಗೂ ಮುನ್ನ ಕೆಲ ಆಟಗಾರರನ್ನು ಕೈ ಬಿಡುವುದು ಖಚಿತ. ಅದರಂತೆ ಆರ್ಸಿಬಿ ಫ್ರಾಂಚೈಸಿ ಮಿನಿ ಹರಾಜಿಗೂ ಮುನ್ನ ರಿಲೀಸ್ ಮಾಡುವ ಆಟಗಾರರು ಯಾರೆಂದು ನೋಡುವುದಾದರೆ...

ಲಿಯಾಮ್ ಲಿವಿಂಗ್ಸ್ಟೋನ್: ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಆಲ್ರೌಂಡರ್ ಆಗಿ ಕಾಣಿಸಿಕೊಂಡ ಲಿಯಾಮ್ ಲಿವಿಂಗ್ಸ್ಟೋನ್ ಅವರನ್ನು ಮುಂದಿನ ಸೀಸನ್ಗೆ ತಂಡದಲ್ಲಿ ಉಳಿಸಿಕೊಳ್ಳುವುದು ಡೌಟ್. ಏಕೆಂಧರೆ 10 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಲಿವಿಂಗ್ಸ್ಟೋನ್ ಈ ಬಾರಿ ಕಲೆಹಾಕಿರುವುದು ಕೇವಲ 54 ರನ್ಗಳು ಮಾತ್ರ. ಹಾಗೆಯೇ 5 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಕಬಳಿಸಿದ್ದು 2 ವಿಕೆಟ್ ಮಾತ್ರ. ಹೀಗಾಗಿ ಲಿವಿಂಗ್ಸ್ಟೋನ್ಗೆ ತಂಡದಿಂದ ಗೇಟ್ ಪಾಸ್ ಸಿಗೋದು ಖಚಿತ ಎನ್ನಬಹುದು.

ರಾಸಿಖ್ ಸಲಾಂ ದಾರ್: ಜಮ್ಮು ಕಾಶ್ಮೀರ ಯುವ ವೇಗಿ ರಾಸಿಖ್ ಸಲಾಂ ದಾರ್ ಅವರನ್ನು ಆರ್ಸಿಬಿ ಫ್ರಾಂಚೈಸಿ 6 ಕೋಟಿ ರೂ.ಗೆ ಖರೀದಿಸಿತ್ತು. ಆದರೆ ಈ ಬಾರಿ ಕಣಕ್ಕಿಳಿದ 2 ಪಂದ್ಯಗಳಲ್ಲಿ ರಾಸಿಖ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅಲ್ಲದೆ ಕೇವಲ 1 ವಿಕೆಟ್ ಮಾತ್ರ ಕಬಳಿಸಿದ್ದಾರೆ. ಅತ್ತ ಮಿನಿ ಹರಾಜಿಗೆ ಪರ್ಸ್ ಮೊತ್ತ ಹೆಚ್ಚಿಸಲು ರಾಸಿಖ್ ಅವರನ್ನು ಸಹ ಆರ್ಸಿಬಿ ಕೈ ಬಿಡಲಿದೆ ಎನ್ನಬಹುದು.

ಅಭಿನಂದನ್ ಸಿಂಗ್: ಈ ಬಾರಿಯ ಐಪಿಎಲ್ನಲ್ಲಿ ಅಭಿನಂದನ್ ಸಿಂಗ್ ಆರ್ಸಿಬಿ ಪರ ಒಂದೇ ಒಂದು ಪಂದ್ಯವಾಡಿಲ್ಲ. ಅದರಲ್ಲೂ ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಮುಂಬರುವ ಸೀಸನ್ಗಾಗಿ ಅಭಿನಂದನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ.

ಮೋಹಿತ್ ರಾಥಿ: ಆರ್ಸಿಬಿ ತಂಡದಲ್ಲಿರುವ ಯುವ ಆಲ್ರೌಂಡರ್ ಮೋಹಿತ್ ರಾಥಿ ಕೂಡ ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅತ್ತ ಇಂಪ್ಯಾಕ್ಟ್ ಸಬ್ ಪಟ್ಟಿಯಲ್ಲೂ ಮೋಹಿತ್ಗೆ ಸ್ಥಾನ ಲಭಿಸಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಅವರನ್ನು ಸಹ ತಂಡದಿಂದ ಕೈ ಬಿಡಲಿದ್ದಾರೆ.

ಬ್ಲೆಸಿಂಗ್ ಮುಝರಬಾನಿ: ಐಪಿಎಲ್ನ ಕೊನೆಯ ಎರಡು ಪಂದ್ಯಗಳ ವೇಳೆ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಂಡ ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿಯನ್ನು ಸಹ ಕೈ ಬಿಡಲಿದ್ದಾರೆ. ಏಕೆಂದರೆ ಮುಝರಬಾನಿ ಅವರನ್ನು ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ.

ಟಿಮ್ ಸೈಫರ್ಟ್: ಜೇಕಬ್ ಬೆಥೆಲ್ ತವರಿಗೆ ಹಿಂತಿರುಗಿದ ಕಾರಣ ಆರ್ಸಿಬಿ ನ್ಯೂಝಿಲೆಂಡ್ನ ವಿಕೆಟ್ ಕೀಪರ್ ಟಿಮ್ ಸೈಫರ್ಟ್ ಅವರನ್ನು ಬದಲಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೆ ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆಯಾಗಿರುವ ಸೈಫರ್ಟ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ.

ಈ 6 ಆಟಗಾರರನ್ನು ಕೈ ಬಿಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಹುತೇಕ ಆಟಗಾರರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಉಳಿದೆಲ್ಲಾ ಆಟಗಾರರು ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು, ಹೀಗಾಗಿ ಚಾಂಪಿಯನ್ ಪಡೆಯನ್ನು ಮುಂದಿನ ಸೀಸನ್ಗೂ ಮುಂದುವರೆಸುವ ಸಾಧ್ಯತೆಯಿದೆ.
