Team India: ನಾಲ್ವರಲ್ಲಿ ಯಾರಿಗೆ ಸಿಗಲಿದೆ ಚಾನ್ಸ್
Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ನಲ್ಲಿದೆ. ಅದರಂತೆ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಪಾಕಿಸ್ತಾನ್, ಒಮಾನ್ ಹಾಗೂ ಯುಎಇ ವಿರುದ್ಧ ಕಣಕ್ಕಿಳಿಯಲಿದೆ.
Updated on:Aug 19, 2025 | 9:04 AM

ಏಷ್ಯಾಕಪ್ಗಾಗಿ ಬಲಿಷ್ಠ ಭಾರತ ತಂಡವನ್ನು ಇಂದು (ಆಗಸ್ಟ್ 19) ಘೋಷಿಸಲಾಗುತ್ತದೆ. ಅದಕ್ಕೂ ಮುನ್ನ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸಭೆ ಸೇರಲಿದ್ದಾರೆ. ಈ ಸಭೆಯ ನಡುವೆ ನಾಲ್ವರ ಏಷ್ಯಾಕಪ್ ಭವಿಷ್ಯ ಕೂಡ ನಿರ್ಧಾರವಾಗಲಿದೆ.

ಅಂದರೆ ಏಷ್ಯಾಕಪ್ಗಾಗಿ ಭಾರತ ತಂಡವು ಬಹುತೇಕ ಫೈನಲ್ ಆಗಿದ್ದು, ಇದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಆಯ್ಕೆ ವಿಷಯದಲ್ಲಿ ಗೊಂದಲಗಳು ಏರ್ಪಟ್ಟಿವೆ ಎಂದು ವರದಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಮಧ್ಯಮ ಕ್ರಮಾಂಕದಲ್ಲಿ ನಾಲ್ವರು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿರುವುದು. ಆ ನಾಲ್ವರು ಆಟಗಾರರು ಯಾರೆಂದರೆ....

ಶ್ರೇಯಸ್ ಅಯ್ಯರ್: 2023ರ ಏಕದಿನ ವಿಶ್ವಕಪ್ ಬಳಿಕ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವಾಡಿಲ್ಲ. ಇದಾಗ್ಯೂ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿ (345 ರನ್ಸ್) ಹಾಗೂ ಐಪಿಎಲ್ನಲ್ಲಿ (604) ಅಯ್ಯರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಬಾರಿ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

ರಿಯಾನ್ ಪರಾಗ್: ಟೀಮ್ ಇಂಡಿಯಾ ಪರ ರಿಯಾನ್ ಪರಾಗ್ 9 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 70 ರನ್ಗಳು ಮಾತ್ರ. ಇನ್ನು ಪಡೆದಿರುವ ವಿಕೆಟ್ಗಳ ಸಂಖ್ಯೆ 4. ಇದಾಗ್ಯೂ ಆಲ್ರೌಂಡರ್ಗಳ ಪಟ್ಟಿಯಲ್ಲಿರುವ ರಿಯಾನ್ ಭಾರತ ಟಿ20 ತಂಡದ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದಾರೆ.

ರಿಂಕು ಸಿಂಗ್: ಟೀಮ್ ಇಂಡಿಯಾ ಪರ ಫಿನಿಶರ್ ಪಾತ್ರದಲ್ಲಿ ಕಣಕ್ಕಿಳಿಯುತ್ತಿದ್ದ ರಿಂಕು ಸಿಂಗ್ ಕಳಪೆ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಏಷ್ಯಾಕಪ್ಗಾಗಿ ಅವರನ್ನು ಆಯ್ಕೆ ಮಾಡಬೇಕೇ ಅಥವಾ ಕೈ ಬಿಡಬೇಕೇ ಎಂಬ ಚರ್ಚೆಗಳು ಮುಂದುವರೆದಿದೆ. ಇದೇ ಕಾರಣದಿಂದಾಗಿ ರಿಂಕು ಸಿಂಗ್ ಅವರ ಆಯ್ಕೆ ಕೂಡ ಇನ್ನೂ ಸಹ ಖಚಿತವಾಗಿಲ್ಲ.

ವಾಷಿಂಗ್ಟನ್ ಸುಂದರ್: ಟೀಮ್ ಇಂಡಿಯಾ ಪರ 54 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಾಷಿಂಗ್ಟ್ ಸುಂದರ್ 22 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 192 ರನ್ಗಳು ಮಾತ್ರ. ಇದಾಗ್ಯೂ 48 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸುಂದರ್ ಅವರನ್ನು ಹೆಚ್ಚುವರಿ ಆಲ್ರೌಂಡರ್ ಆಗಿ ಆಯ್ಕೆ ಮಾಡುವ ಬಗ್ಗೆ ಚರ್ಚೆ ಮುಂದುವರೆದಿದೆ.
Published On - 9:04 am, Tue, 19 August 25
