
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇತ್ತೀಚೆಗಷ್ಟೇ ವಿದಾಯ ಹೇಳಿದ ಭಾರತದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರತಿ ತಿಂಗಳು ₹70,000 ನಿಶ್ಚಿತ ಪಿಂಚಣಿ ನೀಡಲಿದೆ. ಬಿಸಿಸಿಐನ ‘ಆಟಗಾರರ ಪಿಂಚಣಿ ಯೋಜನೆ’ಯ ಅಡಿಯಲ್ಲಿ ರಹಾನೆ ಈ ಗರಿಷ್ಠ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಬಿಸಿಸಿಐ ನಿಯಮಗಳ ಪ್ರಕಾರ, ದೇಶದ ಪರವಾಗಿ 25 ಅಥವಾ ಅದಕ್ಕಿಂತ ಹೆಚ್ಚಿನ ಟೆಸ್ಟ್ ಪಂದ್ಯಗಳನ್ನು ಆಡಿದ ಮಾಜಿ ಆಟಗಾರರನ್ನು ಅತ್ಯುನ್ನತ ಪಿಂಚಣಿ ಶ್ರೇಣಿಗೆ ಪರಿಗಣಿಸಲಾಗುತ್ತದೆ.
ಅಜಿಂಕ್ಯ ರಹಾನೆ ಅವರ ಪಿಂಚಣಿಯು ಬಿಸಿಸಿಐನ ಅಧಿಕೃತ ತರಬೇತುದಾರ ಅಥವಾ ಆಡಳಿತಾತ್ಮಕ ಹುದ್ದೆಯನ್ನು ವಹಿಸಿಕೊಳ್ಳದ ಹೊರತು ಮುಂದುವರಿಯುತ್ತದೆ ಎಂದು ಎನ್ಡಿಟಿವಿ ಸ್ಪೋರ್ಟ್ಸ್ ವರದಿ ಮಾಡಿದೆ.
ಅಂದರೆ ಭಾರತೀಯ ಮಂಡಳಿಯಲ್ಲಿ ಯಾವುದೇ ಸಂಬಳ ಬರುವ ಹುದ್ದೆ ವಹಿಸಿಕೊಂಡರೆ ಅಥವಾ ಟೀಮ್ ಇಂಡಿಯಾದ ಕೋಚ್ ಅಥವಾ ಇನ್ನಿತರೆ ಹುದ್ದೆಗಳಲ್ಲಿ ಕಾಣಿಸಿಕೊಂಡರೆ ಪಿಂಚಣಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದ್ದು, ಹುದ್ದೆಯಿಂದ ಕೆಳಗಿಳಿದ ನಂತರ ಮತ್ತೆ ಆರಂಭವಾಗುತ್ತದೆ.
ಅಜಿಂಕ್ಯ ರಹಾನೆ ಮುಂಬೈ ದೇಶಿ ತಂಡದ ಪರ ಆಡಿದ್ದರೂ, ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (MCA) ಮತ್ತು ಬಿಸಿಸಿಐ ಎರಡರಿಂದಲೂ ಏಕಕಾಲದಲ್ಲಿ ಪಿಂಚಣಿ ಪಡೆಯಲು ಬರುವುದಿಲ್ಲ. ನಿಯಮದ ಪ್ರಕಾರ ಆಟಗಾರರು ಹೆಚ್ಚಿನ ಮೊತ್ತವಿರುವ ರಾಷ್ಟ್ರೀಯ ಪಿಂಚಣಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: ಧೋನಿಯ ವಿಶ್ವ ದಾಖಲೆ ಮುರಿದ ಇಮ್ರಾನ್ ತಾಹಿರ್
ಪಿಂಚಣಿ ಮಾತ್ರವಲ್ಲದೆ, ಇಂಡಿಯನ್ ಕ್ರಿಕೆಟರ್ಸ್ ಅಸೋಸಿಯೇಷನ್ (ICA) ಜಂಟಿ ವೈದ್ಯಕೀಯ ವಿಮಾ ಯೋಜನೆಯಡಿ ಅಜಿಂಕ್ಯ ರಹಾನೆ, ಅವರ ಸಂಗಾತಿ ಮತ್ತು 25 ವರ್ಷದೊಳಗಿನ ಅವಿವಾಹಿತ ಮಕ್ಕಳಿಗೆ ₹10 ಲಕ್ಷದವರೆಗೆ ವೈದ್ಯಕೀಯ ವಿಮಾ ಸೌಲಭ್ಯ ಸಿಗಲಿದೆ. ತುರ್ತು ಅಥವಾ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಬಿಸಿಸಿಐನ ಕಲ್ಯಾಣ ನಿಧಿಯಿಂದ ಹೆಚ್ಚುವರಿ ಆರ್ಥಿಕ ಸಹಾಯವನ್ನೂ ಕೋರಬಹುದಾಗಿದೆ.