ಏಷ್ಯಾಕಪ್‌ನ ಫೈನಲ್ (Asia Cup 2023 Final) ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ (India vs Sri Lanka) ಎಂಟನೇ ಬಾರಿಗೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಕೇವಲ 50 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, 10 ವಿಕೆಟ್ಗಳ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಉಗ್ರಾವತಾರ ತಾಳಿದ ವೇಗಿ ಮೊಹಮ್ಮದ್ ಸಿರಾಜ್ (Mohammed Siraj), ಲಂಕಾ ಪಡೆಯನ್ನು ಹೆಡೆಮುರಿ ಕಟ್ಟಿ ಕೇವಲ 21 ರನ್ ನೀಡಿ ಬರೋಬ್ಬರಿ 6 ವಿಕೆಟ್ ಉರುಳಿಸಿದರು. ಅದರಲ್ಲೂ ಒಂದೇ ಓವರ್ನಲ್ಲಿ 4 ವಿಕೆಟ್ ಉರುಳಿಸಿ ಲಂಕಾ ಪಾಳಯಕ್ಕೆ ಶಾಕ್ ಮೇಲೆ ಶಾಕ್ ನೀಡಿದ ಸಿರಾಜ್, ಈ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಪಡೆದರು. ಆ ಬಳಿಕ ತನ್ನ ಹೃದಯ ವೈಶಾಲ್ಯತೆಯನ್ನು ಮೆರೆದ ಸಿರಾಜ್, ಪಂದ್ಯ ಪುರುಷೋತ್ತಮ ಪ್ರಶಸ್ತಿಯಿಂದ ಬಂದ 4 ಲಕ್ಷ ರೂ. ಬಹುಮಾನದ ಹಣವನ್ನು ಶ್ರೀಲಂಕಾದ ಮೈದಾನದ ಸಿಬ್ಬಂದಿಗೆ ನೀಡಿದ್ದರು. ಅವರ ಈ ಕಾರ್ಯಕ್ಕೆ ಕ್ರಿಕೆಟ್ ಲೋಕ ಮೆಚ್ಚುಗೆ ವ್ಯಕ್ತಪಡಿಸಿತ್ತು. ಇದೀಗ ಸಿರಾಜ್ ಅವರ ಪ್ರದರ್ಶನ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ (Anand Mahindra) ಅವರ ಗಮನ ಸೆಳೆದಿದ್ದು, ಆನಂದ್ ಮಹೀಂದ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಿರಾಜ್ರನ್ನು ಹಾಡಿ ಹೊಗಳಿದ್ದಾರೆ.
ತನ್ನ ಟ್ವಿಟ್ಟರ್ ಖಾತೆಯಲ್ಲಿ ಸಿರಾಜ್ ಸಾಧನೆಯನ್ನು ಕೊಂಡಾಡಿರುವ ಆನಂದ್ ಮಹೀಂದ್ರಾ, ನಮ್ಮ ಎದುರಾಳಿಗಳಿಗಾಗಿ ನನ್ನ ಹೃದಯ ಹಿಂದೆಂದೂ ಇಷ್ಟು ಮರುಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಇದು ನಾವು ಅವರ ಮೇಲೆ ಅತಿಮಾನುಷ ಶಕ್ತಿಯನ್ನು ಬಳಸಿದಂತೆ ಭಾಸವಾಗುತ್ತಿದೆ. ಮೊಹಮ್ಮದ್ ಸಿರಾಜ್ ನೀವು ಮಾರ್ವೆಲ್ ಅವೆಂಜರ್ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಆನಂದ್ ಮಹೀಂದ್ರಾ ಈ ಟ್ವೀಟ್ ಈಗೆ ಎಲ್ಲೆಡೆ ವೈರಲ್ ಆಗಿದ್ದು, ನೆಟ್ಟಿಗರು ಮಹೀಂದ್ರಾ ಅವರ ಪೋಸ್ಟ್‌ಗೆ ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದು, ವಿಚಿತ್ರವಾದ ಬೇಡಿಕೆಗಳನ್ನು ಅವರ ಮುಂದಿಟ್ಟಿದ್ದಾರೆ.
I don’t think I have EVER before felt my heart weep for our opponents….It’s as if we have unleashed a supernatural force upon them… @mdsirajofficial you are a Marvel Avenger… https://t.co/DqlWbnXbxq
— anand mahindra (@anandmahindra) September 17, 2023
ಗ್ರ್ಯಾಂಡ್‌ಮಾಸ್ಟರ್ ಪ್ರಗ್ನಾನಂದ ಪೋಷಕರಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಉದ್ಯಮಿ ಆನಂದ್ ಮಹೀಂದ್ರಾ
ಅದರಲ್ಲಿ ಒಬ್ಬ ಬಳಕೆದಾರ ಹೊಸ ಎಸ್‌ಯುವಿ ಕಾರನ್ನು ಸಿರಾಜ್‌ಗೆ ಉಡುಗೊರೆಯಾಗಿ ನೀಡುವಂತೆ ಮಹೀಂದ್ರಾ ಅವರ ಬಳಿ ಮನವಿ ಮಾಡಿದ್ದಾನೆ. ಈ ಪೋಸ್ಟ್‌ಗೆ ಉತ್ತರಿಸಿರುವ ಆನಂದ್ ಮಹೀಂದ್ರಾ, ಇಂತಹ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಹೇಳಿದ್ದಾರೆ.
Been there, done that… https://t.co/jBUsxlooZf
— anand mahindra (@anandmahindra) September 17, 2023
ಈ ಹಿಂದೆ ಆನಂದ್ ಮಹೀಂದ್ರಾ, ಮೊಹಮ್ಮದ್ ಸಿರಾಜ್‌ಗೆ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ವಾಸ್ತವವಾಗಿ 2021ರಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಆ ಪ್ರವಾಸದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಆಟಗಾರರು ಟೆಸ್ಟ್ ಸರಣಿಯಲ್ಲಿ ಕಾಂಗರೂಗಳನ್ನು ಅವರ ನಾಡಿನಲ್ಲೇ ಬಗ್ಗುಬಡಿದಿದ್ದರು. ಇದು ಮಹೀಂದ್ರಾ ಅವರ ಹೃದಯ ಗೆದ್ದಿತ್ತು. ಹೀಗಾಗಿ ಮಹೀಂದ್ರಾ ಅವರು ಸಿರಾಜ್ ಸೇರಿದಂತೆ ಟೀಂ ಇಂಡಿಯಾದ ಆರು ಕ್ರಿಕೆಟಿಗರಿಗೆ ಥಾರ್ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಮಹೀಂದ್ರಾ ಗ್ರೂಪ್ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳನ್ನು ಉತ್ತೇಜಿಸುತ್ತದೆ. ಇತ್ತೀಚಿಗೆ ಆನಂದ್ ಮಹೀಂದ್ರಾ ಅವರು ಚೆಸ್ ವಿಶ್ವಕಪ್ ಫೈನಲ್ ತಲುಪಿದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಪ್ರಗ್ನಾನಂದ್‌ಗೆ ಎಲೆಕ್ಟ್ರಿಕ್ ಎಸ್‌ಯುವಿ ಮಹೀಂದ್ರಾ ಎಕ್ಸ್‌ಯುವಿ 400 ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ