KSCA ಚುನಾವಣೆ: ವೆಂಕಟೇಶ್ ಪ್ರಸಾದ್ಗೆ ಅನಿಲ್ ಕುಂಬ್ಳೆ ಬೆಂಬಲ
KSCA elections 2025: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಚುನಾವಣೆಯು ನವೆಂಬರ್ 30 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಟೀಮ್ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಹಾಗೂ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿರುವ ಶಾಂತಕುಮಾರ್ ನಡುವೆ ನೇರ ಪೈಪೋಟಿ ಇದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ (ಕೆಎಸ್‌ಸಿಎ) ಮುಂಬರುವ ಚುನಾವಣೆಯಲ್ಲಿ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಪ್ರಸಾದ್ ಮುಂದಾಳತ್ವದ ಸಮಿತಿಗೆ ಟೀಮ್ ಇಂಡಿಯಾದ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರಿಂದ ಬೆಂಬಲ ವ್ಯಕ್ತವಾಗಿದೆ.
ಈ ಬಗ್ಗೆ ಮಾತನಾಡಿದ ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್ ಅಧ್ಯಕ್ಷನ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ. ಕರ್ನಾಟಕದಲ್ಲಿ ಕ್ರಿಕೆಟ್ ಅಭಿವೃದ್ಧಿಯಾಗಬೇಕಿದ್ದರೆ ಅವರು ಗೆಲ್ಲಬೇಕು. 2010 ರಿಂದ 2013 ರವರೆಗೆ ನಮ್ಮ ಸಮಿತಿ ಮಾಡಿದ ಎಲ್ಲಾ ಅಭಿವೃದ್ಧಿ ಕಾರ್ಯಗಳು ಇದೀಗ ನಾಶವಾಗುತ್ತಿದೆ. ಪ್ರಸಾದ್ ಅವರು ಗೆದ್ದರೆ ಮತ್ತೊಮ್ಮೆ ಕರ್ನಾಟಕ ಕ್ರಿಕೆಟ್ ಸಂಸ್ಥೆಯು ಅಭಿವೃದ್ಧಿಯತ್ತ ಸಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಕುಂಬ್ಳೆ ಹೇಳಿದ್ದಾರೆ.
ಅಷ್ಟೇ ಅಲ್ಲದೆ ವೆಂಕಟೇಶ್ ಪ್ರಸಾದ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಕರ್ನಾಟಕದ ಬಹುತೇಕ ತಾಲ್ಲೂಕುಗಳಲ್ಲಿ ಕೆಎಸ್‌ಸಿಎ ಅಕಾಡೆಮಿಗಳು ಆರಂಭವಾಗುತ್ತದೆ. ಈ ಹಿಂದೆ ನಮ್ಮ ಸಮಿತಿ ಕೂಡ ಅದನ್ನೇ ಮಾಡಿದ್ದವು. ಇದೀಗ ಅದಕ್ಕೆಲ್ಲಾ ಮರುಜೀವ ನೀಡಲು ಪ್ರಸಾದ್ ಅವರು ಆಯ್ಕೆಯಾಬೇಕು ಎಂದಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷನಾಗಿ ಆಯ್ಕೆಯಾದರೆ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಮರಳಿ ತರುತ್ತೇವೆ ಎಂದು ವೆಂಟಕೇಶ್ ಪ್ರಸಾದ್ ಆಶ್ವಾಸನೆ ನೀಡಿದ್ದಾರೆ.
ಆರ್ಸಿಬಿ ವಿಜಯೋತ್ಸದ ವೇಳೆ ಉಂಟಾದ ದಾರುಣ ಘಟನೆಯ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯವನ್ನು ಆಯೋಜಿಸಲಾಗಿಲ್ಲ. ಹೀಗಾಗಿ ನಾವು ಗೆದ್ದರೆ ಖಂಡಿತವಾಗಿಯೂ ರಾಜ್ಯದಲ್ಲಿ ಮತ್ತೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುತ್ತೇವೆ ವೆಂಟಕೇಶ್ ಪ್ರಸಾದ್ ತಿಳಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಪಂದ್ಯವನ್ನು ಆಯೋಜಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ’ಕುನ್ಹಾ ಆಯೋಗವು ಈಗಾಗಲೇ ವರದಿ ಸಲ್ಲಿಸಿದೆ. ಈ ವರದಿಯಲ್ಲಿ ಮಾಡಲಾದ ಶಿಫಾರಸುಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಲಾಗುವುದು ಮತ್ತು ಪರಿಹಾರ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿರುವ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.
ಈ ಮೂಲಕ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಜಾರಿಗೆ ತರುತ್ತೇವೆ ಎಂದು ವೆಂಕಟೇಶ್ ಪ್ರಸಾದ್ ನೇತೃತ್ವದ ಬಣವು ಹೊಸ ಭರವಸೆಯನ್ನು ಮುಂದಿಟ್ಟಿದ್ದಾರೆ.
ಕೆಎಸ್‌ಸಿಎ ಚುನಾವಣೆ ಯಾವಾಗ?
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ನ ಚುನಾವಣೆಯು ನವೆಂಬರ್ 30 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಟೀಮ್ ಇಂಡಿಯಾದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಹಾಗೂ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾಗಿರುವ ಶಾಂತಕುಮಾರ್ ಸ್ಪರ್ಧಿಸಿದ್ದಾರೆ.
ವೆಂಕಿ ಬಣದಲ್ಲಿರುವವರು ಯಾರೆಲ್ಲಾ?
- ವೆಂಕಟೇಶ್ ಪ್ರಸಾದ್ (ಅಧ್ಯಕ್ಷ ಸ್ಥಾನಕ್ಕೆ)
- ಸುಜಿತ್ ಸೋಮಸುಂದರ್ (ಉಪಾಧ್ಯಕ್ಷ ಸ್ಥಾನಕ್ಕೆ)
- ವಿನಯ್ ಮೃತ್ಯುಂಜಯ (ಕಾರ್ಯದರ್ಶಿ ಸ್ಥಾನಕ್ಕೆ)
- ಎವಿ ಶಶಿಧರ್ (ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ)
- ಮಧುಕರ್ (ಖಜಾಂಚಿ ಸ್ಥಾನಕ್ಕೆ)
ಪ್ರಸ್ತುತ ಕೆಎಸ್‌ಸಿಎ ಪದಾಧಿಕಾರಿಗಳು:
- ರಘುರಾಮ್ ಭಟ್ (ಅಧ್ಯಕ್ಷರು)
- ಬಿ.ಕೆ. ಸಂಪತ್ ಕುಮಾರ್ (ಉಪಾಧ್ಯಕ್ಷರು)
- ಎ. ಶಂಕರ್ (ಕಾರ್ಯದರ್ಶಿ)
- ಶಹವೀರ್ ತಾರಾಪೋರ್ ( ಜಂಟಿ ಕಾರ್ಯದರ್ಶಿ)
- ಇ.ಎಸ್. ಜೈರಾಮ್ ( ಖಜಾಂಚಿ)
