ವಿಜಯ್ ಮರ್ಚೆಂಟ್ ಟ್ರೋಫಿ: ಕರ್ನಾಟಕ ಪರ ಅಮೋಘ ಶತಕ ಬಾರಿಸಿದ ರಾಹುಲ್ ದ್ರಾವಿಡ್ ಕಿರಿಯ ಮಗ
Anvay Dravid's Century: ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಜಾರ್ಖಂಡ್ ವಿರುದ್ಧದ ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿ ಮಿಂಚಿದ್ದಾರೆ. 153 ಎಸೆತಗಳಲ್ಲಿ 10 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ಈ ಶತಕ ಸಾಧಿಸಿದ ಅವರು ತಮ್ಮ ತಂದೆಯಂತೆಯೇ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕರ್ನಾಟಕ ತಂಡಕ್ಕೆ ಈ ಗೆಲುವಿನಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.
ಟೀಂ ಇಂಡಿಯಾದ ಮಾಜಿ ಕೋಚ್ ಹಾಗೂ ಶ್ರೇಷ್ಠ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜಾರ್ಖಂಡ್ ವಿರುದ್ಧ ವಿಜಯ್ ಮರ್ಚೆಂಟ್ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಪರ ಅದ್ಭುತ ಶತಕ ಬಾರಿಸಿದ್ದಾರೆ. ಆಂಧ್ರಪ್ರದೇಶದ ಮುಲಪಾಡುವಿನಲ್ಲಿ ನಡೆದ ಈ ಪಂದ್ಯದಲ್ಲಿ 153 ಎಸೆತಗಳನ್ನು ಎದುರಿಸಿದ ಅನ್ವಯ್ ದ್ರಾವಿಡ್ 10 ಬೌಂಡರಿ ಮತ್ತು 2 ಸಿಕ್ಸರ್‌ಗಳಿಂದ ಅಜೇಯ 100 ರನ್ ಗಳಿಸಿದರು. ಇದಕ್ಕೂ ಮೊದಲು ಇತ್ತೀಚೆಗೆ, ಕೆಎಸ್‌ಸಿಎ ಅಂಡರ್-16 ಅಂತರ ವಲಯ ಪಂದ್ಯಾವಳಿಯಲ್ಲಿ ತುಮಕೂರು ವಲಯದ ವಿರುದ್ಧವೂ ಅನ್ವಯ್ ದ್ರಾವಿಡ್ ಅಜೇಯ 200 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
16 ವರ್ಷದೊಳಗಿನವರ ರೆಡ್ ಬಾಲ್ ಟೂರ್ನಿಯ ವಿಜಯ್ ಮರ್ಚಂಟ್ ಟ್ರೋಫಿಯ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ 387 ರನ್ ಗಳಿಸಿತ್ತು. ತಂಡದ ಪರ ಆರಂಭಿಕ ಆಟಗಾರ ತೌಹೀದ್ ಕೇವಲ 2 ರನ್ಗಳಿಂದ ಶತಕ ವಂಚಿತರಾಗಿ 98 ರನ್ ಗಳಿಸಿದರೆ, ಮನ್ಮೀತ್ ಸಾಗರ್ ಕೂಡ ಕೆಳ ಕ್ರಮಾಂಕದಲ್ಲಿ 72 ರನ್‌ಗಳ ಕಾಣಿಕೆ ನೀಡಿದರು.
ಅನ್ವಯ್ ದ್ರಾವಿಡ್ ಶತಕ
ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಪರ ಆರಂಭಿಕರು ಬಲಿಷ್ಠ ಇನ್ನಿಂಗ್ಸ್ ಆಡಿದರು. ಆರ್ಯ ಗೌಡ ಮತ್ತು ನಾಯಕ ಧ್ರುವ ಕೃಷ್ಣನ್ ಭರ್ಜರಿ ಶತಕ ಬಾರಿಸಿದರು. ಇದಾದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಉತ್ತಮ ಆರಂಭದ ಲಾಭ ಪಡೆದು ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಕೊನೆಯ ದಿನದ ಆಟ ಮುಗಿಯುವ ಮುನ್ನವೇ ತಮ್ಮ ಅದ್ಭುತ ಶತಕ ಪೂರೈಸಿದರು.
ಆರಂಭಿಕರ ಶತಕ ಮತ್ತು ಅನ್ವಯ್ ದ್ರಾವಿಡ್ ಅವರ ಅಮೋಘ ಇನ್ನಿಂಗ್ಸ್‌ನ ಆಧಾರದ ಮೇಲೆ ಕರ್ನಾಟಕ 4 ವಿಕೆಟ್‌ಗಳನ್ನು ಕಳೆದುಕೊಂಡು 441 ರನ್ ಗಳಿಸಿ ಜಾರ್ಖಂಡ್‌ಗಿಂತ 54 ರನ್‌ಗಳ ಮುನ್ನಡೆ ಸಾಧಿಸಿತು. ಪಂದ್ಯ ಡ್ರಾಗೊಂಡರೂ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಕರ್ನಾಟಕಕ್ಕೆ 3 ಅಂಕ ಲಭಿಸಿದರೆ, ಜಾರ್ಖಂಡ್ಗೆ ಕೇವಲ ಒಂದು ಅಂಕ ಮಾತ್ರ ಲಭಿಸಿತು. ಈ ಮೂಲಕ ತಂದೆ ರಾಹುಲ್ ಅವರಂತೆಯೇ ಅನ್ವಯ್ ಕ್ರೀಸ್ನಲ್ಲಿ ದೀರ್ಘಕಾಲ ಕಳೆದು ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿ ತಂಡದ ಯಶಸ್ಸಿಗೆ ಕಾರಣರಾದರು.
ಹಿರಿಯ ಮಗ ಕೂಡ ಪ್ರತಿಭಾವಂತ
ಅನ್ವಯ್ಗೂ ಮೊದಲು ದ್ರಾವಿಡ್ ಅವರ ಹಿರಿಯ ಮಗ ಸಮಿತ್ ಕೂಡ ತಮ್ಮ ಆಟದಿಂದ ಭಾರತ ಕ್ರಿಕೆಟ್ನಲ್ಲಿ ಛಾಪು ಮೂಡಿಸಿದ್ದಾರೆ. ಕೆಲವು ತಿಂಗಳ ಹಿಂದೆ, ಅವರು ಭಾರತದ ಅಂಡರ್ -19 ತಂಡದಲ್ಲಿ ಸ್ಥಾನ ಪಡೆದಿದ್ದರು. ಅಲ್ಲಿ ಅವರು ಆಸ್ಟ್ರೇಲಿಯಾ ಅಂಡರ್ -19 ತಂಡದ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯವನ್ನು ಆಡಬೇಕಾಗಿತ್ತು. ಆದರೆ, ಗಾಯದ ಕಾರಣ ಅವರು ಅದರಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ, ಅದಕ್ಕೂ ಮೊದಲು, ಸಮಿತ್ ಕೂಚ್ ಬೆಹಾರ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆಡಿದ 8 ಪಂದ್ಯಗಳಲ್ಲಿ 362 ರನ್ ಗಳಿಸಿದಲ್ಲದೆ ಬೌಲಿಂಗ್‌ನಲ್ಲೂ ಕಮಾಲ್ ಮಾಡಿದ್ದ ಅವರು 16 ವಿಕೆಟ್ ಸಹ ಪಡೆದಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 pm, Fri, 13 December 24