ಪ್ರಸ್ತುತ ನಡೆಯುತ್ತಿರುವ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಅವರ ಅದ್ಭುತ ಫಾರ್ಮ್ ಮುಂದುವರೆದಿದೆ. ಈ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ರನ್‌ಗಳ ಶಿಖರ ಕಟ್ಟಿರುವ ಅನ್ವಯ್, ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಅಹಮದಾಬಾದ್‌ನ ADSA ರೈಲ್ವೇ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅನ್ವಯ್ 110 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ 234 ಎಸೆತಗಳನ್ನು ಎದುರಿಸಿದ ಅವರು 12 ಬೌಂಡರಿಗಳನ್ನು ಬಾರಿಸಿದರು.
ಅನ್ವಯ್ ಶತಕ ಬಾರಿಸಿದರಾದರೂ ಕರ್ನಾಟಕ ತಂಡ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಇದು ಕ್ವಾರ್ಟರ್ ಫೈನಲ್ ಪಂದ್ಯವಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 9 ವಿಕೆಟ್‌ಗೆ 742 ರನ್ ಕಲೆಹಾಕಿತು. ಉತ್ತರವಾಗಿ ಕರ್ನಾಟಕ ತಂಡ 280 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂರು ದಿನಗಳ ಪಂದ್ಯದಲ್ಲಿ ಮುನ್ನಡೆ ಪಡೆಯುವ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಿತ್ತು. ಆ ಪ್ರಕಾರ ಪಂದ್ಯದಲ್ಲಿ ಮುನ್ನಡೆ ಪಡೆದುಕೊಂಡ ಪಂಜಾಬ್ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಹೀಗಾಗಿ ಅನ್ವಯ್ ಶತಕ ಸಿಡಿಸಿದರೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ.
Anvay Dravid 100 runs in 198 balls (12×4, 0x6) Karnataka 251/6 #PUNvKAR #VijayMerchant #Elite #QF4 Scorecard:https://t.co/cFQ6rgOeBY
— BCCI Domestic (@BCCIdomestic) January 13, 2025
ಆದಾಗ್ಯೂ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಅನ್ವಯ್ ದ್ರಾವಿಡ್ ಪಾತ್ರರಾಗಿದ್ದಾರೆ. ಈ ಟೂರ್ನಿಯಲ್ಲಿ ಆಡಿದ 8 ಇನ್ನಿಂಗ್ಸ್‌ಗಳಲ್ಲಿ 91.80 ಸರಾಸರಿಯಲ್ಲಿ ಅನ್ವಯ್ ಬರೋಬ್ಬರಿ 459 ರನ್ ಕಲೆಹಾಕಿದ್ದಾರೆ. ಇದರಲ್ಲಿ 2 ಶತಕ ಮತ್ತು 3 ಅರ್ಧ ಶತಕಗಳು ಸೇರಿದ್ದು, ಇಡೀ ಟೂರ್ನಿಯಲ್ಲಿ ಅವರು 46 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಸಹ ಬಾರಿಸಿದ್ದಾರೆ.
ಈ ಪಂದ್ಯದಲ್ಲಿ ಪಂಜಾಬ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಪಂಜಾಬ್ ಓಪನರ್ ಗುರ್ಸಿಮ್ರಾನ್ ಸಿಂಗ್ ಅದ್ಭುತ ದ್ವಿಶತಕ ಬಾರಿಸುವ ಮೂಲಕ 230 ರನ್ ಕಲೆಹಾಕಿದರೆ, ಪಂಜಾಬ್‌ನ 6 ಬ್ಯಾಟ್ಸ್‌ಮನ್‌ಗಳು ಅರ್ಧಶತಕ ದಾಖಸಿದರು. ಹೀಗಾಗಿ ಪಂಜಾಬ್ ತಂಡ 246.3 ಓವರ್‌ಗಳ ಬ್ಯಾಟಿಂಗ್ ಮಾಡಿ 742 ರನ್‌ಗಳಿಗೆ ತನ್ನ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Mon, 13 January 25