ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ತಂಡವು ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಗೋವಾ ತನ್ನ ಮೊದಲ ಪಂದ್ಯದಲ್ಲಿ ಒಡಿಶಾವನ್ನು 27 ರನ್ಗಳಿಂದ ಸೋಲಿಸಿದೆ. ಜೈಪುರದ ಡಾ.ಸೋನಿ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗೋವಾ 371 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಒಡಿಶಾ 344 ರನ್ಗಳಿಗೆ ಆಲೌಟ್ ಆಯಿತು. ಒಡಿಶಾ ತಂಡವನ್ನು ಆಲೌಟ್ ಮಾಡುವಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಪಾತ್ರ ಪ್ರಮುಖವಾಗಿತ್ತು. ಈ ಪಂದ್ಯದಲ್ಲಿ 10 ಓವರ್ ಬೌಲ್ ಮಾಡಿದ ಅರ್ಜುನ್ 61 ರನ್ ಬಿಟ್ಟುಕೊಟ್ಟರಾದರೂ ಪ್ರಮುಖ 3 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು.
ಈ ಪಂದ್ಯದಲ್ಲಿ ಟಾಸ್ ಸೋತ ಮೊದಲು ಬ್ಯಾಟಿಂಗ್ ಮಾಡಿದ ಗೋವಾ ಪರ ತಂಡದ ಬ್ಯಾಟ್ಸ್‌ಮನ್‌ಗಳು ದಿಟ್ಟ ಪ್ರದರ್ಶನ ನೀಡಿ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 371 ರನ್ ಗಳಿಸಿದರು. ತಂಡದ ಪರ ಇಶಾನ್ ಗಡೇಕರ್ 93 ರನ್ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ನಾಯಕ ದರ್ಶನ್ ಮಿಸಾಲ್ 79 ರನ್ ಮತ್ತು ಸುಯಶ್ ಪ್ರಭುದೇಸಾಯಿ 74 ರನ್ ಕೊಡುಗೆ ನೀಡಿದರು. ಸ್ನೇಹಲ್ ಕೌತಾಂಕರ್ ಕೂಡ 67 ರನ್ ಕಲೆಹಾಕಿದರು. ಈ ಇನ್ನಿಂಗ್ಸ್‌ನಲ್ಲಿ ಅರ್ಜುನ್ ತೆಂಡೂಲ್ಕರ್‌ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗದಿದ್ದರೂ, ಬೌಲಿಂಗ್ನಲ್ಲಿ ಮಾತ್ರ ತಮ್ಮ ಚಮತ್ಕಾರ ತೋರಿದರು.
ಗೋವಾ ಪರ ಬೌಲಿಂಗ್ ಆರಂಭಿಸಿದ ಅರ್ಜುನ್ ತೆಂಡೂಲ್ಕರ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆರಂಭಿಕ ಓವರ್‌ಗಳಲ್ಲಿ ಕರಾರುವಕ್ಕಾದ ದಾಳಿ ನಡೆಸಿದ ಅರ್ಜುನ್ ಇದರ ನಂತರ ತಮ್ಮ ಎರಡನೇ ಸ್ಪೆಲ್‌ನಲ್ಲಿ ವಿಕೆಟ್ಗಳ ಬೇಟೆ ಆರಂಭಿಸಿದರು. ಒಬ್ಬರ ನಂತರ ಒಬ್ಬರಂತೆ 3 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ಗಟ್ಟಿದರು. ಅರ್ಜುನ್ ತೆಂಡೂಲ್ಕರ್ 10 ಓವರ್‌ಗಳಲ್ಲಿ 6.10 ಎಕಾನಮಿ ದರದಲ್ಲಿ 61 ರನ್ ನೀಡಿ ಒಟ್ಟು 3 ವಿಕೆಟ್ ಪಡೆದರು. ಅವರು ಕಾರ್ತಿಕ್ ಬಿಸ್ವಾಲ್, ಅಭಿಷೇಕ್ ರಾವುತ್ ಮತ್ತು ರಾಜೇಶ್ ಮೊಹಂತಿ ಅವರ ವಿಕೆಟ್ ಉರುಳಿಸಿದರು. ಅರ್ಜುನ್ ಹೊರತಾಗಿ ಶುಭಂ ತಾರಿ ಮತ್ತು ಮೋಹಿತ್ ರೆಡ್ಕರ್ ಕೂಡ ತಲಾ 2 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅರ್ಜುನ್ ತೆಂಡೂಲ್ಕರ್ ಅವರ ಪ್ರದರ್ಶನ ತೀರಾ ಕಳಪೆಯಾಗಿತ್ತು. ಒಟ್ಟು 3 ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದ ಅರ್ಜುನ್ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದರು. ಇದರ ನಂತರ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಇದೀಗ ಅರ್ಜುನ್ ತಂಡಕ್ಕೆ ಭರ್ಜರಿ ಕಂಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ