ಶ್ರೀಜಿತ್ ಸಿಡಿಲಬ್ಬರ; ಮುಂಬೈ ನೀಡಿದ 382 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಕರ್ನಾಟಕ
Vijay Hazare Trophy: ಕರ್ನಾಟಕ ತಂಡವು 2024-25ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ವಿರುದ್ಧ ಅದ್ಭುತ ಜಯ ಸಾಧಿಸಿದೆ. ಕೆ.ಎಲ್. ಶ್ರೀಜಿತ್ ಅವರ ಅಜೇಯ 150 ರನ್‌ಗಳ ಅದ್ಭುತ ಇನಿಂಗ್ಸ್‌ನಿಂದಾಗಿ ಕರ್ನಾಟಕವು ಮುಂಬೈ ನೀಡಿದ 382 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು. ಮಯಾಂಕ್ ಅಗರ್ವಾಲ್ ಮತ್ತು ಕೆವಿ ಅನೀಶ್ ಕೂಡ ಉತ್ತಮ ಇನಿಂಗ್ಸ್ ಆಡಿದರು.
2024-25ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಲಿಷ್ಠ ಮುಂಬೈ ತಂಡವನ್ನು ಹೀನಾಯವಾಗಿ ಮಣಿಸುವಲ್ಲಿ ಕರ್ನಾಟಕ ತಂಡ ಯಶಸ್ವಿಯಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನ ಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ನೀಡಿದ 382 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಇನ್ನು 22 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು. ಕರ್ನಾಟಕದ ಈ ಗೆಲುವಿನಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಕೆಎಲ್ ಶ್ರೀಜಿತ್ ಪಾತ್ರ ಅಪಾರವಾಗಿತ್ತು. 382 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಕರ್ನಾಟಕ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಶ್ರೀಜಿತ್ ಕೇವಲ 101 ಎಸೆತಗಳಲ್ಲಿ 20 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ ಅಜೇಯ 150 ರನ್‌ಗಳ ಇನ್ನಿಂಗ್ಸ್ ಆಡಿದರು.
382 ರನ್ ಗಳಿಸಿಯೂ ಸೋತ ಮುಂಬೈ
ಉಭಯ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಇತ್ತ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಕೂಡ ಉತ್ತಮ ಬ್ಯಾಟಿಂಗ್ ಮಾಡಿತು. ತಂಡದ ಪರ ನಾಯಕತ್ವದ ಇನ್ನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ 55 ಎಸೆತಗಳಲ್ಲಿ 114 ರನ್ ಗಳಿಸಿದರೆ, ಶಿವಂ ದುಬೆ ಕೂಡ ಕೇವಲ 36 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದರು. ಈ ಕಾರಣದಿಂದಾಗಿ ಮುಂಬೈ ತಂಡವು 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 382 ರನ್ ಕಲೆಹಾಕಿತು.
ಕರ್ನಾಟಕದ ಉತ್ತಮ ಬ್ಯಾಟಿಂಗ್
ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು 48 ಎಸೆತಗಳಲ್ಲಿ 47 ರನ್‌ಗಳ ಇನಿಂಗ್ಸ್ ಆಡಿದರು. ಮಯಾಂಕ್ಗೆ ಸಾಥ್ ನೀಡಿದ ಕೆವಿ ಅನೀಶ್ ಕೂಡ 82 ರನ್ ಕೊಡುಗೆ ನೀಡಿದರು. ಇದಾದ ಬಳಿಕ ಜೊತೆಯಾದ ಕೃಷ್ಣನ್ ಶ್ರೀಜಿತ್ ಮತ್ತು ಪ್ರವೀಣ್ ದುಬೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ವೇಳೆ ಪ್ರವೀಣ್ ದುಬೆ 50 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿದರೆ, ಮತ್ತೊಂದೆಡೆ, ಕೃಷ್ಣನ್ ಶ್ರೀಜಿತ್ 101 ಎಸೆತಗಳಲ್ಲಿ 150 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಕೃಷ್ಣನ್ ಶ್ರೀಜಿತ್ ಅವರ ಈ ಇನ್ನಿಂಗ್ಸ್‌ನಲ್ಲಿ 20 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಶ್ರೀಜಿತ್ ಅವರ ಈ ಬಲಿಷ್ಠ ಇನ್ನಿಂಗ್ಸ್‌ನಿಂದಾಗಿ ಕರ್ನಾಟಕ 46.2 ರಲ್ಲಿ 3 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಸಾಧಿಸಿತು.
ಕೃಷ್ಣನ್ ಶ್ರೀಜಿತ್ ಯಾರು?
28 ವರ್ಷದ ಕೃಷ್ಣನ್ ಶ್ರೀಜಿತ್ ಇನ್ನೂ ಹೆಚ್ಚು ದೇಶೀಯ ಕ್ರಿಕೆಟ್ ಆಡಿಲ್ಲ. ಇದು ಅವರ ಮೂರನೇ ಲಿಸ್ಟ್ ಎ ಪಂದ್ಯವಾಗಿತ್ತು. ಇದಲ್ಲದೇ ಇದುವರೆಗೆ ಅವರು ಕೇವಲ 1 ಪ್ರಥಮ ದರ್ಜೆ ಪಂದ್ಯವನ್ನಾಡಿದ್ದಾರೆ. ಆದಾಗ್ಯೂ ಆಗಾದ ಪ್ರತಿಭೆ ಹೊಂದಿರುವ ಶ್ರೀಜಿತ್ರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಫ್ರಾಂಚೈಸಿ ಮೂಲ ಬೆಲೆ 30 ಲಕ್ಷಕ್ಕೆ ಖರೀದಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:47 pm, Sat, 21 December 24