Ashes 2023: ಇಂಗ್ಲೆಂಡ್-ಆಸ್ಟ್ರೇಲಿಯಾ (England vs Australia) ನಡುವಣ ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯವು ನಾಳೆಯಿಂದ (ಜುಲೈ 6) ಶುರುವಾಗಲಿದೆ. ಲೀಡ್ಸ್ನ ಹೆಡಿಂಗ್ಲಿ ಮೈದಾನದಲ್ಲಿ ಜರುಗಲಿರುವ ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಅದರಲ್ಲೂ ತಂಡದ ಪ್ರಮುಖ ವೇಗಿ ಜೇಮ್ಸ್ ಅ್ಯಂಡರ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈ ಬಿಡಲಾಗಿದೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಅ್ಯಂಡರ್ಸನ್ ಕಡೆಯಿಂದ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ಮೂಡಿಬಂದಿರಲಿಲ್ಲ. ಹೀಗಾಗಿ ಅವರನ್ನು ಆಡುವ ಬಳಗದಿಂದ ಕೈ ಬಿಡಲಾಗಿದೆ.
ಹಾಗೆಯೇ ಮೊದಲ 2 ಪಂದ್ಯಗಳಲ್ಲಿ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದ ಒಲ್ಲಿ ಪೋಪ್ ಕೂಡ ಪ್ಲೇಯಿಂಗ್ ಇಲೆವೆನ್ನಿಂದ ಹೊರಬಿದ್ದಿದ್ದಾರೆ. ಇನ್ನು ಲಾರ್ಡ್ಸ್ ಟೆಸ್ಟ್ನಲ್ಲಿ ಅವಕಾಶ ಪಡೆದಿದ್ದ ಜೋಶ್ ಟಂಗ್ ಅವರನ್ನು ಸಹ ಕೈ ಬಿಡಲಾಗಿದೆ.
ಈ ಮೂವರ ಜಾಗದಲ್ಲಿ ಆಲ್ರೌಂಡರ್ ಮೊಯೀನ್ ಅಲಿ, ಮಾರ್ಕ್ ವುಡ್ ಹಾಗೂ ಕ್ರಿಸ್ ವೋಕ್ಸ್ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಮೊಯೀನ್ ಅಲಿ ಮೊದಲ ಟೆಸ್ಟ್ ಪಂದ್ಯವಾಡಿದ್ದರು. ಇದೀಗ ಮೂರನೇ ಟೆಸ್ಟ್ ಪಂದ್ಯದ ಮೂಲಕ ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಇಂಗ್ಲೆಂಡ್ಗೆ ನಿರ್ಣಾಯಕ ಪಂದ್ಯ:
ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ ಪಂದ್ಯ. ಅಂದರೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇದೀಗ 3ನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಗೆದ್ದರೆ ಸರಣಿ ಪ್ಯಾಟ್ ಕಮಿನ್ಸ್ ಪಡೆಯ ಪಾಲಾಗಲಿದೆ.
ಇತ್ತ ಇಂಗ್ಲೆಂಡ್ ತಂಡವು ಸರಣಿ ಗೆಲ್ಲುವ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ ಮೂರನೇ ಟೆಸ್ಟ್ ಪಂದ್ಯದಲ್ಲಿ ಜಯ ಸಾಧಿಸಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕು. ಹೀಗಾಗಿ ಇದು ಇಂಗ್ಲೆಂಡ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.
ಇದಕ್ಕಾಗಿಯೇ ಈಗ ಬೆನ್ ಸ್ಟೋಕ್ಸ್ ಪಡೆಯು ಮೂರು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ. ಈ ಬದಲಾವಣೆಯು ಇಂಗ್ಲೆಂಡ್ ಪಾಲಿಗೆ ಫಲಪ್ರದವಾಗಲಿದೆಯಾ ಕಾದು ನೋಡಬೇಕಿದೆ.
3ನೇ ಟೆಸ್ಟ್ಗೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್:
ಝಾಕ್ ಕ್ರಾಲಿ, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜೋ ರೂಟ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಒಲ್ಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಮಾರ್ಕ್ ವುಡ್.
ಇದನ್ನೂ ಓದಿ: ಹರ್ಭಜನ್ ಸಿಂಗ್ ಹೆಸರಿಸಿದ ಬೆಸ್ಟ್ 5 ಟೆಸ್ಟ್ ಆಟಗಾರರು ಇವರೇ..!
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೇಮ್ಸ್ ಅ್ಯಂಡರ್ಸನ್, ಜಾನಿ ಬೈರ್‌ಸ್ಟೋವ್ , ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಡಾನ್ ಲಾರೆನ್ಸ್, ಮೊಯೀನ್ ಅಲಿ, ಒಲ್ಲಿ ಪೋಪ್, ಒಲ್ಲಿ ರಾಬಿನ್ಸನ್, ಜೋ ರೂಟ್, ಜೋಶ್ ಟಂಗ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.