Cheteshwar Pujara: 103 ಎಸೆತಗಳನ್ನು ಎದುರಿಸಿ 3 ಫೋರ್ ಬಾರಿಸಿದ ಚೇತೇಶ್ವರ ಪೂಜಾರ
Duleep Trophy 2023: ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪಶ್ಚಿಮ ವಲಯ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ರನ್ಗಳಿಸಲು ಪರದಾಡಿದ್ದಾರೆ.
Duleep Trophy 2023: ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಮೊದಲ ಸೆಮಿಫೈನಲ್ನಲ್ಲಿ ಚೇತೇಶ್ವರ ಪೂಜಾರ (Cheteshwar Pujara) ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇಂದ್ರ ವಲಯ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಹಾಗೂ ಪ್ರಿಯಾಂಕ್ ಪಾಂಚಾಲ್ ಮೊದಲ ವಿಕೆಟ್ಗೆ 43 ರನ್ಗಳ ಜೊತೆಯಾಟವಾಡಿದ್ದರು.
ಈ ಹಂತದಲ್ಲಿ ಪೃಥ್ವಿ ಶಾ (26) ಔಟಾದರೆ, ಇದರ ಬೆನ್ನಲ್ಲೇ ಪ್ರಿಯಾಂಕ್ ಪಾಂಚಾಲ್ (13) ಕೂಡ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ರನ್ಗಳಿಸಲು ಪರದಾಡಿದರು. ಯುವ ಬೌಲರ್ಗಳ ಮುಂದೆ ಪೂಜಾರ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದರು.
ಒಂದೆಡೆ ಪೂಜಾರಾ ಡಿಫೆನ್ಸ್ ಆಟದತ್ತ ಗಮನಹರಿಸಿದ್ದರೆ, ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ (7), ಸರ್ಫರಾಝ್ ಖಾನ್ (0), ಹೆಟ್ ಪಟೇಲ್ (5) ವಿಕೆಟ್ ಒಪ್ಪಿಸಿದ್ದರು. ಇದಾಗ್ಯೂ ಬೌಲರ್ಗಳ ಪರಾಕ್ರಮದ ಮುಂದೆ ತಮ್ಮ ಅನುಭವವನ್ನು ಧಾರೆಯೆರೆಯುವಲ್ಲಿ ಪೂಜಾರ ವಿಫಲರಾದರು. ಪರಿಣಾಮ ಕೇಂದ್ರ ವಲಯ ತಂಡದ ಬೌಲರ್ಗಳು ಮೇಲುಗೈ ಸಾಧಿಸಿದರು.
ಇತ್ತ 103 ಎಸೆತಗಳನ್ನು ಎದುರಿಸಿದರೂ ಚೇತೇಶ್ವರ ಪೂಜಾರ ಬ್ಯಾಟ್ನಿಂದ ಮೂಡಿಬಂದಿದ್ದು ಕೇವಲ 3 ಫೋರ್ಗಳು ಮಾತ್ರ. ಅಲ್ಲದೆ 28 ರನ್ಗಳಿಸಿ ಶಿವಂ ಮಾವಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅತಿತ್ ಶೇಠ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 129 ಎಸೆತಗಳನ್ನು ಎದುರಿಸಿದ ಅತಿತ್ 1 ಭರ್ಜರಿ ಸಿಕ್ಸ್ ಹಾಗೂ 9 ಫೋರ್ನೊಂದಿಗೆ 74 ರನ್ಗಳಿಸಿ ಔಟಾದರು.
ಅಂತಿಮವಾಗಿ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಪಶ್ಚಿಮ ವಲಯ ತಂಡವು 8 ವಿಕೆಟ್ ಕಳೆದುಕೊಂಡು 216 ರನ್ಗಳಿಸಿದೆ. ಕ್ರೀಸ್ನಲ್ಲಿ ಚಿಂತನ್ ಗಜ (13) ಹಾಗೂ ಅರ್ಝಾನ್ ನಾಗ್ವಾಸ್ವಾಲ್ಲಾ (5) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕೇಂದ್ರ ವಲಯ ತಂಡದ ಪರ ನಾಯಕ ಶಿವಂ ಮಾವಿ 43 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಅವೇಶ್ ಖಾನ್, ಯಶ್ ಠಾಕೂರ್, ಸೌರಭ್ ಕುಮಾರ್ ಹಾಗೂ ಸರನ್ಶ್ ಜೈನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.
ಪಶ್ಚಿಮ ವಲಯ ಪ್ಲೇಯಿಂಗ್ 11: ಪೃಥ್ವಿ ಶಾ , ಪ್ರಿಯಾಂಕ್ ಪಾಂಚಾಲ್ (ನಾಯಕ) , ಅರ್ಝಾನ್ ನಾಗವಾಸ್ವಾಲ್ಲಾ , ಚಿಂತನ್ ಗಜ , ಹೆತ್ ಪಟೇಲ್ (ವಿಕೆಟ್ ಕೀಪರ್) , ಅತಿತ್ ಶೇಠ್, ಸರ್ಫರಾಜ್ ಖಾನ್ , ಯುವರಾಜ್ ಸಿಂಗ್ ದೋಡಿಯಾ , ಸೂರ್ಯಕುಮಾರ್ ಯಾದವ್ , ಚೇತೇಶ್ವರ ಪೂಜಾರ , ಧರ್ಮೇಂದ್ರ ಸಿನ್ಹ್ ಜಡೇಜಾ.
ಕೇಂದ್ರ ವಲಯ ಪ್ಲೇಯಿಂಗ್ 11: ವಿವೇಕ್ ಸಿಂಗ್ , ಹಿಮಾಂಶು ಮಂತ್ರಿ , ಅಮನದೀಪ್ ಖರೆ , ಧ್ರುವ ಜುರೆಲ್ , ರಿಂಕು ಸಿಂಗ್ , ಉಪೇಂದ್ರ ಯಾದವ್ (ವಿಕೆಟ್ ಕೀಪರ್) , ಸರನ್ಶ್ ಜೈನ್ , ಸೌರಭ್ ಕುಮಾರ್ , ಶಿವಂ ಮಾವಿ (ನಾಯಕ) , ಅವೇಶ್ ಖಾನ್ , ಯಶ್ ಠಾಕೂರ್.