Ashes 2023: ವಿವಾದದ ಕಿಡಿ ಹೊತ್ತಿಸಿದ ಬೈರ್‌ಸ್ಟೋ ರನೌಟ್! ಕ್ರೀಡಾ ಸ್ಫೂರ್ತಿ ಮರೆತ್ರಾ ಕಾಂಗರೂಗಳು? ವಿಡಿಯೋ

|

Updated on: Jul 03, 2023 | 8:01 AM

Ashes 2023: ಪಂದ್ಯದ ಕೊನೆಯ ದಿನದಂದು, ಅದರಲ್ಲೂ ನಿರ್ಣಾಯಕ ಹಂತದಲ್ಲಿ ಜಾನಿ ಬೈರ್‌ಸ್ಟೋ ಅವರ ವಿಕೆಟ್ ಉರುಳಿದ ರೀತಿ ಸಾಕಷ್ಟು ವಿವಾದ ಹುಟ್ಟುಹಾಕಿದೆ.

Ashes 2023: ವಿವಾದದ ಕಿಡಿ ಹೊತ್ತಿಸಿದ ಬೈರ್‌ಸ್ಟೋ ರನೌಟ್! ಕ್ರೀಡಾ ಸ್ಫೂರ್ತಿ ಮರೆತ್ರಾ ಕಾಂಗರೂಗಳು? ವಿಡಿಯೋ
ಬೈರ್‌ಸ್ಟೋ ರನೌಟ್
Follow us on

ಐತಿಹಾಸಿಕ ಲಾರ್ಡ್ಸ್ (Lord’s) ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (Australia vs England) ನಡುವಿನ ಆ್ಯಶಸ್ ಸರಣಿಯ (Ashes 2023) ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 43 ರನ್‌ಗಳಿಂದ ಗೆದ್ದುಕೊಂಡಿದೆ. ಎರಡನೇ ಟೆಸ್ಟ್ ಗೆಲುವಿಗೆ 371 ರನ್​ಗಳ ಗುರಿ ಪಡೆದಿದ್ದ ಇಂಗ್ಲೆಂಡ್,ನಾಯಕ ಸ್ಟೋಕ್ಸ್ ಅವರ ಶತಕದ ಏಕಾಂಗಿ ಹೋರಾಟದ ಹೊರತಾಗಿಯೂ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯಲ್ಲಿ 2-0 ಏಕಪಕ್ಷೀಯ ಮುನ್ನಡೆ ಸಾಧಿಸಿದೆ. ಅದಾಗ್ಯೂ ಲಾರ್ಡ್ಸ್‌ ಟೆಸ್ಟ್ ಸಾಕಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿತು. ಅದರಲ್ಲಿ ಒಂದು ಆಸೀಸ್ ವಿಕೆಟ್ ಕೀಪರ್ ಮಾಡಿದ ಅದೊಂದು ರನೌಟ್. ಪಂದ್ಯದ ಕೊನೆಯ ದಿನದಂದು, ಅದರಲ್ಲೂ ನಿರ್ಣಾಯಕ ಹಂತದಲ್ಲಿ ಜಾನಿ ಬೈರ್‌ಸ್ಟೋ (Jonny Bairstow) ಅವರ ವಿಕೆಟ್ ಉರುಳಿದ ರೀತಿ ಸಾಕಷ್ಟು ವಿವಾದ ಹುಟ್ಟುಹಾಕಿದೆ.

ಲಾರ್ಡ್ಸ್ ಟೆಸ್ಟ್​ನ ಕೊನೆಯ ದಿನ ಆಂಗ್ಲರ ತಂಡ ಗೆಲುವಿಗೆ 371 ರನ್ ಗಳ ಗುರಿ ಬೆನ್ನತ್ತಿತ್ತು. ದಿನದ ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ ಮೊದಲ ಒಂದೂವರೆ ಗಂಟೆಯಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳಲಿಲ್ಲ. ತಂಡದ ಪರ ಬೆನ್ ಡಕೆಟ್-ಬೆನ್ ಸ್ಟೋಕ್ಸ್ ಜೋಡಿಯು ಬಲಿಷ್ಠ ಬ್ಯಾಟಿಂಗ್ ಮಾಡಿತು. ನಂತರ ಕೊನೆಯ ಅರ್ಧ ಗಂಟೆಯಲ್ಲಿ ಇಂಗ್ಲೆಂಡ್ ಎರಡು ವಿಕೆಟ್ ಕಳೆದುಕೊಂಡಿತು. ಇದರಲ್ಲಿ ಮೊದಲ ವಿಕೆಟ್ ಆಗಿ ಡಕೆಟ್ ಬಲಿಯಾದರೆ, ನಂತರ ಜಾನಿ ಬೈರ್‌ಸ್ಟೋ ಕೂಡ ಬೇಗನೆ ಔಟಾದರು.

Ashes 2023: ಸತತ 2 ಸೋಲು..! ಗೆಲ್ಲಲೇಬೇಕಾದ ಒತ್ತಡದಲ್ಲಿ 3ನೇ ಟೆಸ್ಟ್​ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್

ವಿವಾದ ಹುಟ್ಟುಹಾಕಿದ ಬೈರ್‌ಸ್ಟೋ ರನ್ ಔಟ್

ಅರ್ಧಶತಕ ಸಿಡಿಸಿದ ಡಕೆಟ್ ವಿಕೆಟ್ ಬಳಿಕ ಬಂದ ಬೈರ್‌ಸ್ಟೋ 10 ರನ್ ಬಾರಿಸಿ ಉತ್ತಮ ಆರಂಭ ಪಡೆದುಕೊಂಡಿದ್ದರು. ಆದರೆ ಬೈರ್‌ಸ್ಟೋ ವಿಕೆಟ್‌ ಪತನವಾಗಿದ್ದು ಮಾತ್ರ ಎಲ್ಲರನ್ನು ಅಚ್ಚರಿಗೊಳಿಸಿತು. ಏಕೆಂದರೆ ಔಟ್ ಮಾಡುವ ವಿಧಾನ ಸ್ವತಃ ವಿಚಿತ್ರವಾಗಿತ್ತು. ಆಸೀಸ್ ವೇಗಿ ಕ್ಯಾಮರೂನ್ ಗ್ರೀನ್ ಎಸೆದ ಶಾರ್ಟ್ ಬಾಲ್ ಅನ್ನು ಬೈರ್‌ಸ್ಟೋ ಆಡುವ ಗೋಜಿಗೆ ಹೋಗಲಿಲ್ಲ. ಹೀಗಾಗಿ ಚೆಂಡು ವಿಕೆಟ್ ಕೀಪರ್​ನತ್ತ ಸಾಗಿತು.  ಚೆಂಡನ್ನು ಡಾಟ್ ಮಾಡಿದ ಬೈರ್‌ಸ್ಟೋ ಕ್ರೀಸ್‌ನಿಂದ ಹೊರ ಬಂದರು. ಕೂಡಲೇ ಎಚ್ಚೆತ್ತುಕೊಂಡ ಆಸೀಸ್ ವಿಕೆಟ್ ಕೀಪರ್ ಕ್ಯಾರಿ ಸ್ಟಂಪ್‌ಗೆ ಚೆಂಡನ್ನು ಎಸೆದರು. ಆ ಬಳಿಕ ಆಸ್ಟ್ರೇಲಿಯಾ ಆಟಗಾರರು ಸಂಭ್ರಮಾಚರಣೆ ಆರಂಭಿಸಿದರು.

ಇದೆಲ್ಲದರ ಅರಿವೆ ಇಲ್ಲದ ಬೈರ್‌ಸ್ಟೋ ಮತ್ತು ಅವರ ಜೊತೆಗಿದ್ದ ನಾಯಕ ಬೆನ್ ಸ್ಟೋಕ್ಸ್ ಆಸೀಸ್ ಆಟಗಾರರ ವರ್ತನೆ ನೋಡಿ ಆಶ್ಚರ್ಯಚಕಿತರಾದರು. ವಾಸ್ತವವಾಗಿ ವಿಕೆಟ್‌ಕೀಪರ್‌ನತ್ತ ಚೆಂಡು ಹೋಗುವುದನ್ನು ನೋಡಿದ ಬಳಿಕ ತಾನು ಕಾಲಿನಿಂದ ಕ್ರೀಸ್‌ ಅನ್ನು ಮುಟ್ಟಿ ಆ ಬಳಿಕ ಕ್ರೀಸ್​ನಿಂದ ಹೊರಬಂದಿದ್ದೇನೆ ಎಂಬುದು ಬೈರ್‌ಸ್ಟೋ ಅಭಿಪ್ರಾಯವಾಗಿತ್ತು. ಹೀಗಾಗಿ ಆಸೀಸ್ ಆಟಗಾರರ ವಿಕೆಟ್ ಸಂಭ್ರಮಾಚರಣೆ ಕಂಡು ಬೈರ್‌ಸ್ಟೋ ಆಶ್ಚರ್ಯ ಚಕಿತರಾದರು. ಆದರೆ ಆಸೀಸ್ ಔಟ್ ಮನವಿಯನ್ನು ಪುರಸ್ಕರಿಸಿದ ಮೂರನೇ ಅಂಪೈರ್ ಬೈರ್‌ಸ್ಟೋ ಔಟೆಂದು ತೀರ್ಪು ನೀಡಿದರು.

ಐಸಿಸಿ ನಿಯಮಗಳು ಹೇಳುವುದೇನು?

ನಿಯಮಗಳ ಪ್ರಕಾರ, ಬೌಲರ್ ಬೌಲ್ ಮಾಡಿದ ಚೆಂಡನ್ನು ಬ್ಯಾಟರ್ ಆಡದೆ ಇದ್ದರೆ,  ಚೆಂಡು ಡೆಡ್ ಆಗುವವರೆಗೆ ಅಂದರೆ, ಆ ಚೆಂಡು ಕೀಪರ್ ಕೈಗೆ ಸೇರುವವರೆಗೆ ಅದನ್ನು ಸಕ್ರಿಯವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಚೆಂಡು ಕೀಪರ್ ಕೈಗೆ ಹೋಗುವ ಮುನ್ನವೇ ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಹೊರಬಂದರೆ, ಆಗ ವಿಕೆಟ್ ಕೀಪರ್​ಗೆ ರನ್​ಔಟ್ ಮಾಡುವ ಅವಕಾಶವಿರುತ್ತದೆ. ಹೀಗಾಗಿ ಬೈರ್‌ಸ್ಟೋ, ಚೆಂಡು ವಿಕೆಟ್ ಕೀಪರ್ ಕೈ ಸೇರುವ ಮುನ್ನವೇ ಕ್ರೀಸ್ ಬಿಟ್ಟು ಹೊರಹೋಗಿದ್ದನ್ನು ಗಮನಿಸಿದ ಕ್ಯಾರಿ ಕೂಡಲೇ ಚೆಂಡನ್ನು ವಿಕೆಟ್​ಗೆ ಹೊಡೆದರು. ಹೀಗಾಗಿ ನಿಯಮಗಳ ಪ್ರಕಾರ ಮೂರನೇ ಅಂಪೈರ್ ಕೂಡ ಬೈರ್‌ಸ್ಟೋ ಔಟೆಂದು ತೀರ್ಪು ನೀಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:58 am, Mon, 3 July 23