Zak Crawley: ಸಿಡಿಲಬ್ಬರದ ಸೆಂಚುರಿ ಸಿಡಿಸಿ ದಾಖಲೆ ಬರೆದ ಝಾಕ್ ಕ್ರಾಲಿ

| Updated By: ಝಾಹಿರ್ ಯೂಸುಫ್

Updated on: Jul 20, 2023 | 8:39 PM

Ashes 2023: ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲ ಇನಿಂಗ್ಸ್​ನಲ್ಲಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಕ್ರಿಸ್ ವೋಕ್ಸ್​ (5 ವಿಕೆಟ್) ದಾಳಿಗೆ ತತ್ತರಿಸಿತು.

Zak Crawley: ಸಿಡಿಲಬ್ಬರದ ಸೆಂಚುರಿ ಸಿಡಿಸಿ ದಾಖಲೆ ಬರೆದ ಝಾಕ್ ಕ್ರಾಲಿ
Zak Crawley
Follow us on

Ashes 2023: ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಇಂಗ್ಲೆಂಡ್ ಓಪನರ್ ಝಾಕ್ ಕ್ರಾಲಿ ಹಲವು ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 317 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ ಬೆನ್ ಡಕೆಟ್ (1) ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಝಾಕ್ ಕ್ರಾಲಿ ಹಾಗೂ ಮೊಯೀನ್ ಅಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಸ್ಪೋಟಕ ಬ್ಯಾಟಿಂಗ್​ಗೆ ಒತ್ತು ನೀಡಿದ ಈ ಜೋಡಿ ಆಸ್ಟ್ರೇಲಿಯಾ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ 25 ಓವರ್​ಗಳಲ್ಲಿ ಕ್ರಾಲಿ ಹಾಗೂ ಮೊಯೀನ್ ಅಲಿ 121 ರನ್​ಗಳನ್ನು ಕಲೆಹಾಕಿದರು.

ಈ ಹಂತದಲ್ಲಿ ಮತ್ತೆ ದಾಳಿಗಿಳಿದ ಮಿಚೆಲ್ ಸ್ಟಾರ್ಕ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಮೊಯೀನ್ ಅಲಿ (54) ಕ್ಯಾಚ್ ನೀಡಿ ನಿರ್ಗಮಿಸಿದರು. ಇದಾಗ್ಯೂ ಝಾಕ್ ಕ್ರಾಲಿ ಅಬ್ಬರ ಮುಂದುವರೆದಿತ್ತು. ಆಸೀಸ್ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿದ ಝಾಕ್ ಕ್ರಾಲಿ ಕೇವಲ 93 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ದಾಖಲೆ ಪಟ್ಟಿಯಲ್ಲಿ 2ನೇ ಸ್ಥಾನವನ್ನೂ ಸಹ ತಮ್ಮದಾಗಿಸಿಕೊಂಡರು.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲೂ ಝಾಕ್ ಕ್ರಾಲಿ ಇರುವುದು ವಿಶೇಷ. 2022 ರಲ್ಲಿ ಪಾಕಿಸ್ತಾನ್ ವಿರುದ್ಧ ಕೇವಲ 86 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಇಂಗ್ಲೆಂಡ್ ಪರ ವೇಗದ ಟೆಸ್ಟ್ ಶತಕ ಸಿಡಿಸಿ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ಕ್ರಾಲಿ ಬರೆದಿದ್ದರು. ಇದೀಗ 93 ಎಸೆತಗಳಲ್ಲಿ ಮತ್ತೊಂದು ಶತಕ ಸಿಡಿಸಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಲ್ಲದೆ ಆಸ್ಟ್ರೇಲಿಯಾ ವಿರುದ್ಧ ಅತೀ ವೇಗದ ಟೆಸ್ಟ್ ಶತಕ ಸಿಡಿಸಿದ ನಾಲ್ಕನೇ ಇಂಗ್ಲೆಂಡ್ ಬ್ಯಾಟರ್ ಎಂಬ ದಾಖಲೆ ಕೂಡ ಝಾಕ್ ಕ್ರಾಲಿ ಪಾಲಾಗಿದೆ. ಗಿಲ್ಬರ್ಟ್ ಜೆಸ್ಸಾಪ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 1902 ರಲ್ಲಿ ಗಿಲ್ಬರ್ಟ್ ಆಸ್ಟ್ರೇಲಿಯಾ ವಿರುದ್ಧ ಕೇವಲ 76 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಇನ್ನು ಇಯಾನ್ ಬಾಥಮ್ 1981 ರಲ್ಲಿ 2 ಬಾರಿ ಆಸ್ಟ್ರೇಲಿಯಾ ವಿರುದ್ಧ 86 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದೀಗ 93 ಎಸೆತಗಳಲ್ಲಿ ಶತಕ ಸಿಡಿಸಿರುವ ಝಾಕ್ ಕ್ರಾಲಿ ಈ ಪಟ್ಟಿಯಲ್ಲಿ 4ನೇ ಸ್ಥಾನ ಅಲಂಕರಿಸಿದ್ದಾರೆ.

ಸದ್ಯ ಬ್ಯಾಟಿಂಗ್ ಮುಂದುವರೆಸಿರುವ ಝಾಕ್ ಕ್ರಾಲಿ 128 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 132 ರನ್​ ಬಾರಿಸಿದ್ದಾರೆ. ಮತ್ತೊಂದೆಡೆ ಜೋ ರೂಟ್ 35 ಎಸೆತಗಳಲ್ಲಿ 44 ರನ್​ ಬಾರಿಸಿ ಉತ್ತಮ ಸಾಥ್ ನೀಡಿದ್ದಾರೆ. ಪರಿಣಾಮ ಟೀ ವಿರಾಮದ ವೇಳೆಗೆ ಕೇವಲ 41 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 239 ರನ್​ ಕಲೆಹಾಕಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಕ್ಯಾಮರೋನ್ ಗ್ರೀನ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಪ್ಯಾಟ್ ಕಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ , ಜೋಶ್ ಹ್ಯಾಝಲ್​ವುಡ್.

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಝಾಕ್ ಕ್ರಾಲಿ , ಮೊಯಿನ್ ಅಲಿ , ಜೋ ರೂಟ್ , ಹ್ಯಾರಿ ಬ್ರೂಕ್ , ಬೆನ್ ಸ್ಟೋಕ್ಸ್ (ನಾಯಕ) , ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್) , ಕ್ರಿಸ್ ವೋಕ್ಸ್ , ಮಾರ್ಕ್ ವುಡ್ , ಸ್ಟುವರ್ಟ್ ಬ್ರಾಡ್ , ಜೇಮ್ಸ್ ಅ್ಯಂಡರ್ಸನ್.