AUS vs ENG: ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಜೋ ರೂಟ್

Joe Root's Maiden Ashes Century in Australia: ಆಸ್ಟ್ರೇಲಿಯಾದಲ್ಲಿ ನಡೆದ ಆಶಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಜೋ ರೂಟ್ ಶತಕ ಬಾರಿಸಿ ಮಿಂಚಿದ್ದಾರೆ. ಇದು ಆಸ್ಟ್ರೇಲಿಯಾ ನೆಲದಲ್ಲಿ ಅವರ ಮೊದಲ ಟೆಸ್ಟ್ ಶತಕವಾಗಿದ್ದು, ಈ ಮೂಲಕ 40 ಟೆಸ್ಟ್ ಶತಕಗಳನ್ನು ಗಳಿಸಿ ಸಂಗಕ್ಕಾರ ದಾಖಲೆ ಮುರಿದಿದ್ದಾರೆ. ಇಂಗ್ಲೆಂಡ್ ಆರಂಭಿಕ ಕುಸಿತ ಕಂಡಾಗ ರೂಟ್ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಜೀವ ತುಂಬಿದರು.

AUS vs ENG: ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಜೋ ರೂಟ್
Joe Root

Updated on: Dec 04, 2025 | 4:50 PM

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (England vs Australia) ನಡುವೆ ನಡೆಯುತ್ತಿರುವ ಆಶಸ್ ಸರಣಿಯ ಎರಡನೇ ಟೆಸ್ಟ್ ( Ashes 2nd Test) ಪಂದ್ಯದಲ್ಲಿ ಇಂಗ್ಲೆಂಡ್​ನ ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ (Joe Root) ಶತಕ ಸಿಡಿಸಿ ಮಿಂಚಿದ್ದಾರೆ. ಬ್ರಿಸ್ಬೇನ್​ನ ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಹಗಲು ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನೀಡಿದ ರೂಟ್ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ. ವಾಸ್ತವವಾಗಿ ಜೋ ರೂಟ್ ಆಸ್ಟ್ರೇಲಿಯಾದಲ್ಲಿ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದೀಗ ತಮ್ಮ 30 ನೇ ಟೆಸ್ಟ್ ಇನ್ನಿಂಗ್ಸ್​ನಲ್ಲಿ ರೂಟ್ ಶತಕ ಸಿಡಿಸಿದ್ದಾರೆ. ರೂಟ್ ಈ ಹಿಂದೆ ಆಸ್ಟ್ರೇಲಿಯಾದಲ್ಲಿ 9 ಟೆಸ್ಟ್ ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಒಮ್ಮೆಯೂ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿರಲಿಲ್ಲ. ಆದರೆ ಈ ಬಾರಿ ಅವರು ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

181 ಎಸೆತಗಳಲ್ಲಿ ನನಸಾದ ಜೋ ರೂಟ್ ಕನಸು

ಜೋ ರೂಟ್ 181 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಇದು ಅವರ 40 ನೇ ಟೆಸ್ಟ್ ಶತಕವಾಗಿದ್ದು, ಈ ಮೂಲಕ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸಂಗಕ್ಕಾರ ಅವರ ದಾಖಲೆಯನ್ನು ಮುರಿದಿದ್ದಾರೆ. ರೂಟ್ ಈಗ ರಿಕಿ ಪಾಂಟಿಂಗ್, ಜಾಕ್ವೆಸ್ ಕಾಲಿಸ್ ಮತ್ತು ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲಿದ್ದಾರೆ. ರಿಕಿ ಪಾಂಟಿಂಗ್ 41 ಶತಕಗಳನ್ನು ಬಾರಿಸಿದ್ದರೆ, ಜಾಕ್ವೆಸ್ ಕಾಲಿಸ್ 45 ಮತ್ತು ಸಚಿನ್ ತೆಂಡೂಲ್ಕರ್ 51 ಶತಕಗಳನ್ನು ಸಿಡಿಸಿದ್ದಾರೆ.

ಇಂಗ್ಲೆಂಡ್ ಇನ್ನಿಂಗ್ಸ್​ಗೆ ಜೀವ ತುಂಬಿದ ಜೋ ರೂಟ್

ಈ ಶತಕ ಗಳಿಸುವುದು ಜೋ ರೂಟ್‌ಗೆ ಸುಲಭವಾಗಿರಲಿಲ್ಲ. ಏಕೆಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ಮೊದಲ ಓವರ್‌ನಲ್ಲಿಯೇ ಬೆನ್ ಡಕೆಟ್ ಅವರನ್ನು ಕಳೆದುಕೊಂಡಿತು. ನಂತರ ಬಂದ ಓಲ್ಲಿ ಪೋಪ್‌ ಕೂಡ ಔಟಾದರು. ಇವರಿಬ್ಬರಿಗೆ ಖಾತೆ ಕೂಡ ತೆರೆಯಲು ಸಾಧ್ಯವಾಗಲಿಲ್ಲ. ನಂತರ ಕ್ರೀಸ್​ಗೆ ಬಂದ ಜೋ ರೂಟ್, ಕ್ರಾಲಿ ಜೊತೆಗೆ ಶತಕದ ಪಾಲುದಾರಿಕೆಯನ್ನು ನಿರ್ಮಿಸಿ ಇಂಗ್ಲೆಂಡ್ ತಂಡವನ್ನು ತೊಂದರೆಯಿಂದ ಪಾರು ಮಾಡಿದರು.

AUS vs ENG: ಆಶಸ್ ಸರಣಿಯ 2ನೇ ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಆಸ್ಟ್ರೇಲಿಯಾ ತಂಡ ಪ್ರಕಟ

ಇಬ್ಬರು ಆಟಗಾರರು 117 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಕ್ರಾಲಿ ಔಟಾದ ನಂತರ ರೂಟ್, ಬ್ರೂಕ್ ಜೊತೆ 54 ರನ್‌ಗಳ ಜೊತೆಯಾಟವನ್ನಾಡಿದರು. ಆದರೆ ಇವರಿಬ್ಬರ ಜೊತೆಯಾಟ ಮುರಿದ ಬಳಿಕ ಇಂಗ್ಲೆಂಡ್ ಇನ್ನಿಂಗ್ಸ್ ಕುಸಿಯಲಾರಂಭಿಸಿತು. ಸ್ಟೋಕ್ಸ್ 19 ರನ್‌ಗಳಿಗೆ ಮತ್ತು ಜೇಮೀ ಸ್ಮಿತ್ 0 ರನ್‌ಗಳಿಗೆ ಔಟಾದರು. ಆದಾಗ್ಯೂ, ತನ್ನ ಆಟ ಮುಂದುವರೆಸಿದ ರೂಟ್, ವಿಲ್ ಜ್ಯಾಕ್ಸ್ ಜೊತೆ 40 ರನ್‌ ಕಲೆಹಾಕಿದರು. ಅಂತಿಮವಾಗಿ, ರೂಟ್ ಆಸ್ಟ್ರೇಲಿಯಾದಲ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Thu, 4 December 25