Ashes 2025: ಆಶಸ್ ಸರಣಿಯ 2ನೇ ಟೆಸ್ಟ್‌ಗೆ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್
England Playing XI Ashes 2nd Test: ಆಸ್ಟ್ರೇಲಿಯಾ ವಿರುದ್ಧದ 2ನೇ ಆಶಸ್ ಟೆಸ್ಟ್‌ಗೆ ಇಂಗ್ಲೆಂಡ್ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಮೊದಲ ಪಂದ್ಯದಲ್ಲಿ ಹೀನಾಯ ಸೋಲಿನ ನಂತರ, ತಂಡವು ಬ್ಯಾಟಿಂಗ್ ಬಲಪಡಿಸಲು ವೇಗಿ ಮಾರ್ಕ್ ವುಡ್ ಬದಲಿಗೆ ಆಲ್‌ರೌಂಡರ್ ವಿಲ್ ಜ್ಯಾಕ್ಸ್‌ಗೆ ಅವಕಾಶ ನೀಡಿದೆ. ಗಬ್ಬಾದಲ್ಲಿ ನಡೆಯಲಿರುವ ಈ ಪಿಂಕ್ ಬಾಲ್ ಡೇ-ನೈಟ್ ಪಂದ್ಯದಲ್ಲಿ ಇಂಗ್ಲೆಂಡ್ 3 ಬೌಲರ್‌ಗಳು ಮತ್ತು 8 ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿಯಲಿದೆ.

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia vs England) ನಡುವಿನ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾದಲ್ಲಿ (Gabba Test) ನಡೆಯಲಿದ್ದು, ಈ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಅದರಂತೆ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವೇಗಿ ಮಾರ್ಕ್ ವುಡ್ ಬದಲಿಗೆ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್‌ಗೆ ಅವಕಾಶ ನೀಡಿದೆ. ವಿಲ್ ಜ್ಯಾಕ್ಸ್ ಇದುವರೆಗೆ ಇಂಗ್ಲೆಂಡ್ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 89 ರನ್ ಗಳಿಸಿದ್ದಾರೆ. ಇನ್ನು ಅವರ ಪ್ರಥಮ ದರ್ಜೆ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, 4 ಶತಕ ಸೇರಿದಂತೆ 2591 ರನ್ ಬಾರಿಸಿದ್ದಾರೆ. ಹಾಗೆಯೇ ಬೌಲಿಂಗ್ನಲ್ಲೂ 49 ವಿಕೆಟ್ ಉರುಳಿಸಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಹೀನಾಯ ಸೋಲು
ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡವು ಕಳಪೆ ಆರಂಭ ಮಾಡಿದೆ. ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಕೇವಲ ಎರಡೇ ದಿನಗಳಲ್ಲಿ ಸೋತಿತು. ಮುಂದಿನ ಟೆಸ್ಟ್ ಪಂದ್ಯವು ಗಬ್ಬಾದಲ್ಲಿ ನಡೆಯಲಿದ್ದು, ಈ ಪಂದ್ಯ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಿದೆ. ಈ ಗುಲಾಬಿ ಚೆಂಡಿನ ಪಂದ್ಯಕ್ಕಾಗಿ, ಇಂಗ್ಲೆಂಡ್ ಕೇವಲ ಮೂವರು ಬೌಲರ್‌ಗಳು ಮತ್ತು ಎಂಟು ಬ್ಯಾಟರ್ಗಳನ್ನು (ಆಲ್ರೌಂಡರ್ಗಳು ಸೇರಿದಂತೆ) ಕಣಕ್ಕಿಳಿಸಿದೆ.
ಇಂಗ್ಲೆಂಡ್ ತನ್ನ ಬ್ಯಾಟಿಂಗ್ ಅನ್ನು ಬಲಪಡಿಸುವ ನಿರ್ಧಾರಕ್ಕೆ ಮೊದಲ ಟೆಸ್ಟ್‌ನಲ್ಲಿನ ವೈಫಲ್ಯವೇ ಕಾರಣವಾಗಿರಬಹುದು. ತಂಡವು ಎರಡೂ ಇನ್ನಿಂಗ್ಸ್‌ಗಳಲ್ಲಿ 40 ಓವರ್‌ಗಳನ್ನು ಸಹ ಆಡಲು ವಿಫಲವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 32.5 ಓವರ್‌ಗಳನ್ನು ಆಡಿದ ಇಂಗ್ಲೆಂಡ್, ಎರಡನೇ ಇನ್ನಿಂಗ್ಸ್‌ನಲ್ಲಿ 34.4 ಓವರ್‌ಗಳಲ್ಲಿ ಆಲೌಟ್ ಆಯಿತು. ಹೀಗಾಗಿ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವ ಕೆಲಸವನ್ನು ಆಯ್ಕೆ ಮಂಡಳಿ ಮಾಡಿದೆ. ಇದೀಗ ಎರಡನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಯಾವ ರೀತಿಯ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
📋 We’ve made one change to our XI for the second Test…
Enter stage right, Will Jacks 👊
— England Cricket (@englandcricket) December 2, 2025
ಇಂಗ್ಲೆಂಡ್ ಆಡುವ XI: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್, ಜೇಮೀ ಸ್ಮಿತ್, ವಿಲ್ ಜ್ಯಾಕ್ಸ್, ಗಸ್ ಅಟ್ಕಿನ್ಸನ್, ಬ್ರೈಡನ್ ಕಾರ್ಸೆ ಮತ್ತು ಜೋಫ್ರಾ ಆರ್ಚರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Tue, 2 December 25
