IND vs SA: ಸರಣಿ ನಿರ್ಧಾರಕ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ
India vs South Africa 2nd ODI: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ನಿರ್ಣಾಯಕ 2ನೇ ಏಕದಿನ ಪಂದ್ಯ ರಾಯ್‌ಪುರದಲ್ಲಿ ನಡೆಯಲಿದೆ. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ ಗೆಲುವಿನ ಲಯ ಮುಂದುವರಿಸಲು ನೋಡುತ್ತಿದೆ. ಈ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ 11ರಲ್ಲಿ ಆರಂಭಿಕರು (ಜೈಸ್ವಾಲ್/ರುತುರಾಜ್) ಮತ್ತು ಮಧ್ಯಮ ಕ್ರಮಾಂಕದಲ್ಲಿ (ರುತುರಾಜ್/ತಿಲಕ್ ವರ್ಮಾ) ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ. ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಸರಣಿಯಲ್ಲಿ ಮುನ್ನಡೆ ಸಾಧಿಸಲು ಗೆಲುವಿಗಾಗಿ ತೀವ್ರ ಹೋರಾಟ ನಡೆಸಲಿವೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವಿನ ಸರಣಿಯ ಎರಡನೇ ಏಕದಿನ ಪಂದ್ಯ ನಾಳೆ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡೂ ತಂಡಗಳು ಸರಣಿಯಲ್ಲಿ ಮುನ್ನಡೆ ಸಾಧಿಸುವ ಗುರಿಯನ್ನು ಹೊಂದಿರುವುದರಿಂದ ಈ ಪಂದ್ಯ ನಿರ್ಣಾಯಕವಾಗಿದೆ. ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡ ಈಗಾಗಲೇ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಒಂದೆಡೆ ಭಾರತ ತನ್ನ ಬೌಲಿಂಗ್ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಅವಲಂಬಿಸಿದ್ದರೆ, ದಕ್ಷಿಣ ಆಫ್ರಿಕಾ ತನ್ನ ಯುವ ಮತ್ತು ಅನುಭವಿ ಆಟಗಾರರನ್ನು ಅವಲಂಬಿಸಿ ಪಂದ್ಯವನ್ನು ಗೆಲ್ಲಲು ಎದುರು ನೋಡುತ್ತಿದೆ. ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿರುವುದರಿಂದ ಯಾವ ಆಡುವ ಹನ್ನೊಂದರ ಬಳಗದೊಂದಿಗೆ ಕಣಕ್ಕಿಳಿಯುತ್ತವೆ ಎಂಬುದು ಕುತೂಹಲ ಮೂಡಿಸಿದೆ.
ಜೈಸ್ವಾಲ್ ಔಟ್, ತಿಲಕ್ ಇನ್?
ಟೀಂ ಇಂಡಿಯಾ ವಿಚಾರಕ್ಕೆ ಬರುವುದಾದರೆ.. ಸಾಮಾನ್ಯವಾಗಿ ಗೆಲುವಿನ ಸಂಯೋಜನೆಯನ್ನು ಬದಲಿಸಲು ಯಾರು ಯೋಚಿಸುವುದಿಲ್ಲ. ಆದಾಗ್ಯೂ ಮೊದಲ ಏಕದಿನದಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಒಂದು ವೇಳೆ ಪ್ಲೇಯಿಂಗ್ 11 ಬದಲಿಸಲು ನೋಡಿದರೆ, ಜೈಸ್ವಾಲ್ರನ್ನು ಹೊರಗಿಟ್ಟು, ರುತುರಾಜ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಬಹುದು. ಏಕೆಂದರೆ ರುತುರಾಜ್ ಆರಂಭಿಕರಾಗಿಯೇ ಹೆಚ್ಚು ಯಶಸ್ಸು ಸಾಧಿಸಿದ್ದಾರೆ.
ಇದು ನಿಜವಾದರೆ, ರುತುರಾಜ್ ಸ್ಥಾನಕ್ಕೆ ತಿಲಕ್ ವರ್ಮಾ ಬರಬಹುದು. ಏಕೆಂದರೆ ತಿಲಕ್ ವರ್ಮಾಗೆ ಮಧ್ಯಮ ಕ್ರಮಾಂಕದಲ್ಲಿ ಆಡಿದ ಅನುಭವವಿದೆ. ಅಲ್ಲದೆ ಪರಿಸ್ಥಿತಿಗೆ ಅನುಗುಣವಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ, ಅವರನ್ನು ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಆಯ್ಕೆ ಎಂದು ಪರಿಗಣಿಸಲಾಗಿದೆ.
ಪಂತ್-ನಿತೀಶ್ ಡೌಟ್
ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದರು. ವಿಶೇಷವಾಗಿ ಕುಲ್ದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದ್ದರಿಂದ, ಈ ಇಬ್ಬರು ಖಂಡಿತವಾಗಿಯೂ ಎರಡನೇ ಏಕದಿನ ಪಂದ್ಯದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಭಾರತ ಮತ್ತೊಮ್ಮೆ 3 ಸ್ಪಿನ್ನರ್‌ಗಳು ಮತ್ತು 3 ವೇಗಿಗಳ ಸಂಯೋಜನೆಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ನಿತೀಶ್ ರೆಡ್ಡಿ ಮತ್ತು ರಿಷಭ್ ಪಂತ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ.
IND vs SA: ರಾಂಚಿಯಲ್ಲಿ ರಾಜನ ದರ್ಬಾರ್; 52ನೇ ಏಕದಿನ ಶತಕ ಬಾರಿಸಿದ ವಿರಾಟ್ ಕೊಹ್ಲಿ
ಭಾರತದ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್/ ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್/ ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ ಮತ್ತು ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್.
ದಕ್ಷಿಣ ಆಫ್ರಿಕಾ ಸಂಭಾವ್ಯ ಪ್ಲೇಯಿಂಗ್ XI: ಏಡೆನ್ ಮಾರ್ಕ್ರಾಮ್, ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ಕ್ವಿಂಟನ್ ಡಿ ಕಾಕ್, ಮ್ಯಾಥ್ಯೂ ಬ್ರೀಟ್ಜ್ಕೆ, ಟೆಂಬಾ ಬವುಮಾ (ನಾಯಕ), ಡೆವಾಲ್ಡ್ ಬ್ರೂವಿಸ್, ಕಾರ್ಬಿನ್ ಬಾಷ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಒಟ್ನಿಯೆಲ್ ಬಾರ್ಟ್‌ಮನ್, ನಾಂದ್ರೆ ಬರ್ಗರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
