Asia Cup 2022: ಏಷ್ಯಾಕಪ್​ ಬಹಿಷ್ಕರಿಸಿದ್ದ ಟೀಮ್ ಇಂಡಿಯಾ..!

| Updated By: ಝಾಹಿರ್ ಯೂಸುಫ್

Updated on: Aug 25, 2022 | 12:00 PM

Asia Cup 2022: ಈ ಬಾರಿ ಭಾರತ ತಂಡವು ಪಾಕಿಸ್ತಾನ್ ವಿರುದ್ದದ ಪಂದ್ಯದೊಂದಿಗೆ ಏಷ್ಯಾಕಪ್ ಅಭಿಯಾನ ಆರಂಭಿಸುತ್ತಿದೆ. ಉಭಯ ತಂಡಗಳು ಒಂದೇ ಗ್ರೂಪ್​ನಲ್ಲಿದ್ದು, ಎರಡೂ ತಂಡಗಳು ಮುಂದಿನ ಹಂತಕ್ಕೇರಿದರೆ ಮತ್ತೆ ಮುಖಾಮುಖಿಯಾಗಲಿದೆ.

Asia Cup 2022: ಏಷ್ಯಾಕಪ್​ ಬಹಿಷ್ಕರಿಸಿದ್ದ ಟೀಮ್ ಇಂಡಿಯಾ..!
India
Follow us on

Asia Cup 2022: 15ನೇ ಸೀಸನ್ ಏಷ್ಯಾಕಪ್​ಗಾಗಿ ಯುಎಇನ ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಹಾಗೂ ಶಾರ್ಜಾ ಕ್ರಿಕೆಟ್ ಮೈದಾನ ಸಜ್ಜಾಗಿ ನಿಂತಿದೆ. ಈಗಾಗಲೇ ಈ ಟೂರ್ನಿಗಾಗಿ ಭಾರತ, ಪಾಕಿಸ್ತಾನ್, ಹಾಂಕಾಂಗ್, ಶ್ರೀಲಂಕಾ, ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ತಂಡಗಳು ಯುಎಇಗೆ ಬಂದಿಳಿದಿದ್ದಾರೆ. ಈ ಆರು ತಂಡಗಳಲ್ಲಿ ಈ ಬಾರಿ ಕೂಡ ಏಷ್ಯಾಕಪ್ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಪೈಕಿ ಟೀಮ್ ಇಂಡಿಯಾ (Team India) ಮುಂಚೂಣಿಯಲ್ಲಿದೆ. ಏಕೆಂದರೆ ಏಷ್ಯಾಕಪ್​ನಲ್ಲಿ ಪ್ರಬಲ ತಂಡವಾಗಿ ಗುರುತಿಸಿಕೊಂಡಿರುವ ಟೀಮ್ ಇಂಡಿಯಾ ಇದುವರೆಗೆ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನು ಶ್ರೀಲಂಕಾ 5 ಬಾರಿ ಹಾಗೂ ಪಾಕಿಸ್ತಾನ್ 2 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.

ವಿಶೇಷ ಎಂದರೆ ಏಷ್ಯಾಕಪ್​ 14 ಸೀಸನ್​ ಕಳೆದಿದ್ದರೂ ಟೀಮ್ ಇಂಡಿಯಾ 13 ಬಾರಿ ಮಾತ್ರ ಕಾಣಿಸಿಕೊಂಡಿದೆ. ಅಂದರೆ ಒಂದು ಏಷ್ಯಾಕಪ್​ನಿಂದ ಭಾರತ ತಂಡ ಹಿಂದೆ ಸರಿದಿದಿತ್ತು. ಹಾಗಿದ್ರೆ ಏಷ್ಯಾಕಪ್​ನ ಇತಿಹಾಸವೇನು? ಭಾರತ ಯಾವಾಗ ಚಾಂಪಿಯನ್ ಆಯಿತು ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಆರಂಭಿಕ ವರ್ಷಗಳು:

ಏಷ್ಯಾಕಪ್​ ಪಂದ್ಯಾವಳಿಯನ್ನು 1984 ರಲ್ಲಿ ಯುಎಇನಲ್ಲಿ ಆರಂಭಿಸಲಾಯಿತು. ಆಗಸ್ಟ್ 1983ರ ವಿಶ್ವಕಪ್ ಗೆದ್ದು ಬೀಗಿದ್ದ ಟೀಮ್ ಇಂಡಿಯಾ ಏಷ್ಯಾಕಪ್​ನಲ್ಲೂ ಪ್ರಾಬಲ್ಯ ಮೆರೆಯಿತು. ಆದರೆ ಅಂದು ಏಷ್ಯಾಕಪ್​ ಆಡಿದ್ದು ಕೇವಲ 3 ದೇಶಗಳು ಮಾತ್ರ. ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಭಾರತವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಬಹಿಷ್ಕಾರ:

ಮೊದಲ ಏಷ್ಯಾಕಪ್ ಚಾಂಪಿಯನ್ ಆಗಿದ್ದ ಭಾರತವು 2ನೇ ಏಷ್ಯಾಕಪ್ ಆಡಿರಲಿಲ್ಲ. 1986 ರಲ್ಲಿ ಶ್ರೀಲಂಕಾದ ನಡೆದಿದ್ದ ಈ ಟೂರ್ನಿಯಿಂದ ಟೀಮ್ ಇಂಡಿಯಾ ಹಿಂದೆ ಸರಿಯಿತು. ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದ ಪರಿಣಾಮ ಭಾರತ ತಂಡವು 1986ರ ಏಷ್ಯಾಕಪ್​ನಲ್ಲಿ ಭಾಗವಹಿಸಿರಲಿಲ್ಲ.

ರೌಂಡ್ ರಾಬಿನ್ ಸ್ವರೂಪ:

1988 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್​ ಅನ್ನು ರೌಂಡ್ ರಾಬಿನ್ ಸ್ವರೂಪದಲ್ಲಿ ಆಡಲಾಯಿತು. ಟೇಬಲ್ ಟಾಪರ್ಸ್​ ಆಗಿ ಕಾಣಿಸಿಕೊಂಡ ಭಾರತವು ಫೈನಲ್​ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಟೀಮ್ ಇಂಡಿಯಾ ಪ್ರಶಸ್ತಿ ಗೆದ್ದುಕೊಂಡಿತು.

ಬಹಿಷ್ಕಾರ-2:

ಏಷ್ಯಾಕಪ್​ನಲ್ಲಿ 1991 ರಲ್ಲಿ ಮತ್ತೆ ಬಹಿಷ್ಕಾರದ ಧ್ವನಿ ಪ್ರತಿಧ್ವನಿಸಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದ್ದರಿಂದ ಪಾಕ್ ತಂಡವು ಪಂದ್ಯಾವಳಿಯಿಂದ ಹಿಂದೆ ಸರಿಯಿತು. ಇನ್ನು ಈ ಟೂರ್ನಿಯಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ ಮೂರನೇ ಬಾರಿ ಏಷ್ಯಾಕಪ್ ಗೆದ್ದುಕೊಂಡಿತು.

ಪ್ರಶಸ್ತಿ ಬರ:
1984, 1988, 1991, 1995 ರಲ್ಲಿ ಏಷ್ಯಾಕಪ್ ಗೆದ್ದ ಭಾರತ 1997 ರಿಂದ 2008 ರವರೆಗೆ ಮತ್ತೆ ಪ್ರಶಸ್ತಿ ಗೆದ್ದಿರಲಿಲ್ಲ ಎಂಬುದೇ ಅಚ್ಚರಿ. ಈ ವೇಳೆ ಮೂರು ಬಾರಿ ಫೈನಲ್​ ಪ್ರವೇಶಿಸಿದ್ದ ಭಾರತ ಪರಾಜಯಗೊಂಡಿತ್ತು. ವಿಶೇಷ ಎಂದರೆ ಭಾರತವನ್ನು ಮಣಿಸಿ ಮೂರು ಬಾರಿ ಕೂಡ ಶ್ರೀಲಂಕಾ ತಂಡವೇ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಟೀಮ್ ಇಂಡಿಯಾ ಮತ್ತೆ ಚಾಂಪಿಯನ್​:

ಸುದೀರ್ಘ 10 ವರ್ಷಗಳ ಬಳಿಕ ಟೀಮ್ ಇಂಡಿಯಾ 2010 ರಲ್ಲಿ ಧೋನಿ ನಾಯಕತ್ವದಲ್ಲಿ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಅದು ಕೂಡ ಶ್ರೀಲಂಕಾವನ್ನು ಮಣಿಸಿ ಎಂಬುದು ವಿಶೇಷ. ಇದಾದ ಬಳಿಕ ಭಾರತ 2016 ಮತ್ತು 2018 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ 7 ಬಾರಿ ಏಷ್ಯಾಕಪ್ ಗೆದ್ದ ತಂಡ ಎಂಬ ದಾಖಲೆಯನ್ನು ಟೀಮ್ ಇಂಡಿಯಾ ಬರೆದಿದೆ.

ಈ ಬಾರಿ ಭಾರತ ತಂಡವು ಪಾಕಿಸ್ತಾನ್ ವಿರುದ್ದದ ಪಂದ್ಯದೊಂದಿಗೆ ಏಷ್ಯಾಕಪ್ ಅಭಿಯಾನ ಆರಂಭಿಸುತ್ತಿದೆ. ಉಭಯ ತಂಡಗಳು ಒಂದೇ ಗ್ರೂಪ್​ನಲ್ಲಿದ್ದು, ಎರಡೂ ತಂಡಗಳು ಮುಂದಿನ ಹಂತಕ್ಕೇರಿದರೆ ಮತ್ತೆ ಮುಖಾಮುಖಿಯಾಗಲಿದೆ. ಹಾಗೆಯೇ ಫೈನಲ್ ಪ್ರವೇಶಿಸಿದರೆ ಭಾರತ-ಪಾಕ್ ನಡುವಣ 3 ಪಂದ್ಯವನ್ನು ವೀಕ್ಷಿಸುವ ಅವಕಾಶ ಈ ಬಾರಿ ಕ್ರಿಕೆಟ್ ಪ್ರೇಮಿಗಳಿಗೆ ಸಿಗಲಿದೆ.