ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್‌ನಲ್ಲಿ ಟೀಮ್ ಇಂಡಿಯಾ (Team India) ಆಟಗಾರ ಚೇತೇಶ್ವರ ಪೂಜಾರ (Cheteshwar Pujara) ಅವರ ಭರ್ಜರಿ ಫಾರ್ಮ್ ಮುಂದುವರೆದಿದೆ. ಸಸೆಕ್ಸ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಪೂಜಾರ ಶತಕದ ಮೇಲೆ ಶತಕ ಸಿಡಿಸುತ್ತಾ ಅಬ್ಬರಿಸುತ್ತಿದ್ದಾರೆ. ವಿಶೇಷ ಎಂದರೆ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಪೂಜಾರ ಕಡಿಮೆ ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚುತ್ತಿದ್ದಾರೆ.
ಈ ಬಾರಿ ಟೂರ್ನಿಯಲ್ಲಿ ಒಟ್ಟಾರೆ 3 ಭರ್ಜರಿ ಶತಕ ಹಾಗೂ 2 ಅರ್ಧಶತಕ ದಾಖಲಿಸುವ ಮೂಲಕ ಪೂಜಾರ ಸಸೆಕ್ಸ್ ತಂಡವನ್ನು ಸೆಮಿಫೈನಲ್ಗೆ ಕೊಂಡೊಯ್ದಿದ್ದಾರೆ. ಅದರಲ್ಲೂ ಸರ್ರೆ ವಿರುದ್ಧದ ಪಂದ್ಯದಲ್ಲಿ 131 ಎಸೆತಗಳಲ್ಲಿ 20 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 174 ರನ್ ಗಳಿಸಿ ಟೀಮ್ ಇಂಡಿಯಾ ಆಟಗಾರ ಮಿಂಚಿದ್ದರು. ಇನ್ನು ಮಿಡ್ಲ್‌ಸೆಕ್ಸ್ ವಿರುದ್ಧದ ಪಂದ್ಯದಲ್ಲಿ 90 ಎಸೆತಗಳಲ್ಲಿ 132 ರನ್ ಬಾರಿಸಿದ್ದರು.
ವಾರ್ವಿಕ್‌ಶೈರ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಕೇವಲ 73 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ್ದರು. ಈ ಮೂಲಕ ರಾಯಲ್ ಲಂಡನ್ ಕಪ್‌ನಲ್ಲಿ 500 ರನ್‌ಗಳ ಗಡಿ ದಾಟಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸದ್ಯ 8 ಇನಿಂಗ್ಸ್ ಆಡಿರುವ ಚೇತೇಶ್ವರ ಒಟ್ಟು 614 ರನ್ ಗಳಿಸಿದ್ದಾರೆ. ಈ ವೇಳೆ 60 ಫೋರ್, 11 ಸಿಕ್ಸ್ನೊಂದಿಗೆ 3 ಶತಕ ಹಾಗೂ 2 ಅರ್ಧ ಶತಕಗಳಿರುವುದು ವಿಶೇಷ.
ವಿರಾಟ್ ಕೊಹ್ಲಿ-ಬಾಬರ್ ದಾಖಲೆ ಉಡೀಸ್:
ರಾಯಲ್ ಲಂಡನ್ ಕಪ್‌ನಲ್ಲಿ ಅಬ್ಬರಿಸುವ ಮೂಲಕ ಪೂಜಾರ ಲೀಸ್ ಎ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿ, ಬಾಬರ್ ಆಜಂನಂತಹ ಬ್ಯಾಟ್ಸ್ಮನ್ಗಳನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.
ಲೀಸ್ಟ್ ಎ ಕ್ರಿಕೆಟ್ನಲ್ಲಿ 100 ಇನಿಂಗ್ಸ್ನಲ್ಲಿ ಅತೀ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ವಿಶ್ವದ 2ನೇ ಬ್ಯಾಟ್ಸ್‌ಮನ್ ಎಂಬ ದಾಖಲೆ ಇದೀಗ ಚೇತೇಶ್ವರ ಪೂಜಾರ ಪಾಲಾಗಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಶ್ರೇಷ್ಠ ಮೈಕೆಲ್ ಬೆವನ್ (385 ಇನ್ನಿಂಗ್ಸ್‌ಗಳಲ್ಲಿ 57.86) ಅಗ್ರಸ್ಥಾನದಲ್ಲಿದ್ದಾರೆ. ಇದೀಗ 109 ಲೀಸ್ಟ್ ಎ ಪಂದ್ಯಗಳ ಇನ್ನಿಂಗ್ಸ್‌ಗಳಲ್ಲಿ 57.48 ಸರಾಸರಿಯಲ್ಲಿ ರನ್ ಕಲೆಹಾಕುವ ಮೂಲಕ ಪೂಜಾರ 2ನೇ ಸ್ಥಾನ ಅಲಂಕರಿಸಿದ್ದಾರೆ.
ಈ ಹಿಂದೆ 153 ಇನ್ನಿಂಗ್ಸ್‌ಗಳಲ್ಲಿ 56.56 ಸರಾಸರಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದ ಬಾಬರ್ ಆಜಂ ಹಾಗೂ 286 ಇನ್ನಿಂಗ್ಸ್‌ಗಳಲ್ಲಿ 56.60. ಸರಾಸರಿಯೊಂದಿಗೆ ರನ್ ಕಲೆಹಾಕಿದ್ದ ವಿರಾಟ್ ಕೊಹ್ಲಿಯನ್ನು ಇದೀಗ ಚೇತೇಶ್ವರ ಪೂಜಾರ ಹಿಂದಿಕ್ಕುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸದ್ಯ ರಾಯಲ್ ಲಂಡನ್ ಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಪೂಜಾರ ನಾಯಕತ್ವ ಸಸೆಕ್ಸ್ ತಂಡವು ಚಾಂಪಿಯನ್ ಆಗಲಿದೆಯಾ ಕಾದು ನೋಡಬೇಕಿದೆ.