Asia Cup 2022: ಏಷ್ಯಾಕಪ್ನ 3ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಬಗ್ಗು ಬಡಿಯುವ ಮೂಲಕ ಅಫ್ಘಾನಿಸ್ತಾನ್ ತಂಡ ಸೂಪರ್-4 ಹಂತಕ್ಕೇರಿದೆ. ಬುಧವಾರ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಪವರ್ಪ್ಲೇನಲ್ಲೇ ಮೊದಲ ಮೂರು ವಿಕೆಟ್ಗಳನ್ನು ಉರುಳಿಸುವ ಮೂಲಕ ಅಫ್ಘಾನಿಸ್ತಾನ್ ತಂಡಕ್ಕೆ ಮುಜೀಬ್ ಉರ್ ರಹಮಾನ್ ಆರಂಭಿಕ ಯಶಸ್ಸು ತಂದುಕೊಟ್ಟರು. ಕೇವಲ 23 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾ ತಂಡಕ್ಕೆ ಆ ಬಳಿಕ ರಶೀದ್ ಖಾನ್ ಸಹ ಶಾಕ್ ನೀಡಿದರು.
7ನೇ ಓವರ್ನಲ್ಲಿ ಮುಷ್ಫಿಕುರ್ ರಹೀಮ್ರನ್ನು ಎಲ್ಬಿ ಬಲೆಗೆ ಬೀಳಿಸಿದ ರಶೀದ್ ಖಾನ್ ಆ ಬಳಿಕ ಆಸೀಫ್ ಹುಸೇನ್ಗೂ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಅಫ್ಘಾನಿಸ್ತಾನ್ ಸ್ಪಿನ್ನರ್ಗಳು ಕೇವಲ 53 ರನ್ ನೀಡಿ 5 ಪ್ರಮುಖ ವಿಕೆಟ್ಗಳನ್ನು ಕಬಳಿಸಿದ್ದರು. ಈ ಹಂತದಲ್ಲಿ ಜೊತೆಗೂಡಿದ ಮೊಹಮ್ಮದುಲ್ಲಾ ಹಾಗೂ ಮೊಸದೆಕ್ ಹುಸೇನ್ ತಂಡಕ್ಕೆ ಆಸರೆಯಾದರು. 36 ರನ್ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೊನೆಗೂ ರಶೀದ್ ಖಾನ್ ಯಶಸ್ವಿಯಾದರು.
ಪಂದ್ಯದ 16ನೇ ಓವರ್ನಲ್ಲಿ ದಾಳಿಗಿಳಿದ ರಶೀದ್ ಖಾನ್ ಮೊಹಮ್ಮದುಲ್ಲಾ (25) ವಿಕೆಟ್ ಪಡೆಯುವ ಮೂಲಕ ತಂಡಕ್ಕೆ 6ನೇ ಯಶಸ್ಸು ತಂದುಕೊಟ್ಟರು. ಇದಾಗ್ಯೂ ಅಂತಿಮ ಓವರ್ಗಳ ವೇಳೆ 31 ಎಸೆತಗಳಲ್ಲಿ 4 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 48 ರನ್ ಬಾರಿಸುವ ಮೂಲಕ ಮೊಸದೆಕ್ ಹುಸೇನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಬಾಂಗ್ಲಾದೇಶ್ ತಂಡವು 7 ವಿಕೆಟ್ ಕಳೆದುಕೊಂಡು 127 ರನ್ ಕಲೆಹಾಕಿತು.
ಸಾಧಾರಣ ಗುರಿ ಪಡೆದ ಅಫ್ಘಾನಿಸ್ತಾನ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಗುರ್ಬಾಜ್ 5ನೇ ಓವರ್ನಲ್ಲಿ ಸ್ಟಂಪ್ ಔಟ್ ಆಗುವ ಮೂಲಕ ಹೊರನಡೆದರು. ಅಷ್ಟೇ ಅಲ್ಲದೆ ಮೊದಲ ಹತ್ತು ಓವರ್ಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಬಾಂಗ್ಲಾ ಬೌಲರ್ಗಳು ನೀಡಿದ್ದು ಕೇವಲ 45 ರನ್ಗಳು ಮಾತ್ರ.
ಅಷ್ಟೇ ಅಲ್ಲದೆ 10ನೇ ಓವರ್ನಲ್ಲಿ ಮೊಸದೆಕ್ ಹುಸೇನ್ ಎಸೆತದಲ್ಲಿ ಝಝೈ (23) ಕೂಡ ವಿಕೆಟ್ ಒಪ್ಪಿಸಿದ್ದರು. ಇನ್ನು ನಾಯಕ ಮೊಹಮ್ಮದ್ ನಬಿ 8 ರನ್ಗಳಿಸಿ ಸೈಫುದ್ದೀನ್ ಎಸೆತಕ್ಕೆ ಎಲ್ಬಿಡಬ್ಲ್ಯೂ ಆದರು. ಈ ವೇಳೆ 13 ಓವರ್ಗಳಲ್ಲಿ ಅಫ್ಘಾನಿಸ್ತಾನ್ ತಂಡ ಕಲೆಹಾಕಿದ್ದು ಕೇವಲ 62 ರನ್ ಮಾತ್ರ.
ಆದರೆ ಕೊನೆಯ 7 ಓವರ್ಗಳಲ್ಲಿ ಇಡೀ ಪಂದ್ಯದ ಚಿತ್ರಣ ಬದಲಿಸಿದ್ದು ನಜೀಬುಲ್ಲಾ ಝರ್ದಾನ್. ಕ್ರೀಸ್ಗೆ ಆಗಸುತ್ತಿದ್ದಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಝರ್ದಾನ್ ಬಾಂಗ್ಲಾ ಬೌಲರ್ಗಳ ಬೆಂಡೆತ್ತಿದ್ದರು. ಸಿಕ್ಸ್-ಫೋರ್ಗಳನ್ನು ಸಿಡಿಸುವ ಮೂಲಕ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಅಫ್ಘಾನ್ ತಂಡವನ್ನು ಮೇಲೆತ್ತಿದರು.
ಇತ್ತ ಝರ್ದಾನ್ ಅಬ್ಬರಕ್ಕೆ ಬಾಂಗ್ಲಾ ಬೌಲರ್ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ಎಡಗೈ ದಾಂಡಿಗ ಝರ್ದಾನ್ 6 ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಕೇವಲ 17 ಎಸೆತಗಳಲ್ಲಿ ಅಜೇಯ 43 ರನ್ ಚಚ್ಚಿದರು. ಪರಿಣಾಮ 18.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಅಫ್ಘಾನಿಸ್ತಾನ್ ತಂಡವು 131 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ್ ತಂಡವು ಗ್ರೂಪ್-ಬಿ ನಿಂದ ಸೂಪರ್- 4 ಹಂತಕ್ಕೇರಿದೆ.
ಇನ್ನು ಇಂದಿನ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ ಗೆಲುವು ದಾಖಲಿಸಿದರೆ ಗ್ರೂಪ್-ಎ ನಿಂದ ಸೂಪರ್-4 ಹಂತಕ್ಕೇರಬಹುದು. ಸದ್ಯ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿದ್ದು, ಈ ಸುತ್ತಿನ ಎರಡು ಗ್ರೂಪ್ಗಳಿಂದ ಮೊದಲೆರಡು ಸ್ಥಾನ ಪಡೆಯುವ ನಾಲ್ಕು ತಂಡಗಳು ಸೂಪರ್-4 ಹಂತದಲ್ಲಿ ಆಡಲಿದೆ. ಅದರಂತೆ ಮುಂದಿನ ಹಂತದಲ್ಲಿ ನಾಲ್ಕು ತಂಡಗಳ ನಡುವೆ ರೌಂಡ್ ರಾಬಿನ್ ಸ್ವರೂಪದಲ್ಲಿ ಪಂದ್ಯಗಳು ನಡೆಯಲಿದೆ. ಸೂಪರ್-4 ಹಂತದ ಪಾಯಿಂಟ್ ಟೇಬಲ್ನಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಫೈನಲ್ ಆಡಲಿವೆ.