ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವನ್ನು ಸೋಲಿಸಿ ಶ್ರೀಲಂಕಾ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರೊಂದಿಗೆ ಏಷ್ಯಾಕಪ್ನಲ್ಲಿ 6 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಹೆಗ್ಗಳಿಕೆಗೆ ತಂಡ ಪಾತ್ರವಾಗಿದೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಭಾನುಕಾ ರಾಜಪಕ್ಸೆ (71) ಅವರ ಅಜೇಯ ಅರ್ಧಶತಕದ ನೆರವಿನಿಂದ 170 ರನ್ ಕಲೆಹಾಕಿತು.
171 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ್ ತಂಡವನ್ನು ಲಂಕಾ ಬೌಲರ್ಗಳು 147 ರನ್ಗಳಿಗೆ ಆಲೌಟ್ ಮಾಡಿದರು. ಈ ಮೂಲಕ 23 ರನ್ಗಳ ಜಯದೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಅಲ್ಲದೆ ಟ್ರೋಫಿಯೊಂದಿಗೆ ಪ್ರಶಸ್ತಿ ಮೊತ್ತವನ್ನು ಕೂಡ ತನ್ನದಾಗಿಸಿಕೊಂಡಿತು.
ಪ್ರಶಸ್ತಿ ಮೊತ್ತ ಎಷ್ಟು?
ಪ್ರಶಸ್ತಿ ಮೊತ್ತ ಎಷ್ಟು?
ಏಷ್ಯಾಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಶ್ರೀಲಂಕಾ ತಂಡವು ಬಹುಮಾನ ಮೊತ್ತವಾಗಿ 150,000 ಡಾಲರ್ (ಸುಮಾರು 1,19,44,920 ರೂ.) ಅನ್ನು ಸ್ವೀಕರಿಸಿದೆ. ಹಾಗೆಯೇ ರನ್ನರ್ ಅಪ್ ಆಗಿರುವ ಪಾಕಿಸ್ತಾನ್ ತಂಡಕ್ಕೆ ಬಹುಮಾನ ಮೊತ್ತವಾಗಿ 75,000 ಡಾಲರ್ (ಸುಮಾರು 59,72,460 ರೂ.) ಲಭಿಸಿದೆ. ಇದಾಗ್ಯೂ ಸೂಪರ್-4 ಹಂತಕ್ಕೇರಿದ ಉಳಿದ ತಂಡಗಳಿಗೆ ಯಾವುದೇ ಪ್ರಶಸ್ತಿ ಮೊತ್ತ ನೀಡಲಾಗುತ್ತಿಲ್ಲ.
ಅದರಂತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದೀಗ ಏಷ್ಯಾಕಪ್ ಮೂಲಕ 1 ಕೋಟಿ 19 ಲಕ್ಷಕ್ಕೂ ಅಧಿಕ ಮೊತ್ತವನ್ನು ತನ್ನದಾಗಿಸಿಕೊಂಡಿದೆ.
6 ತಂಡಗಳ ಹಣಾಹಣಿ:
ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿದಿದ್ದವು. ಇದರಲ್ಲಿ ಐದು ತಂಡಗಳು ನೇರವಾಗಿ ಅರ್ಹತೆ ಪಡೆದಿದ್ದರೆ, ಒಂದು ತಂಡವು ಅರ್ಹತಾ ಸುತ್ತಿನ ಮೂಲಕ ಎಂಟ್ರಿ ಕೊಟ್ಟಿತ್ತು. ಅದರಂತೆ ಮೊದಲ ಸುತ್ತಿನಲ್ಲಿ ಭಾರತ, ಪಾಕಿಸ್ತಾನ್, ಹಾಂಗ್ಕಾಂಗ್ ತಂಡಗಳು ಗ್ರೂಪ್-ಎ ನಲ್ಲಿ ಸೆಣಸಿದ್ದವು. ಇನ್ನು ಗ್ರೂಪ್-ಬಿ ನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ್ ಹಾಗೂ ಬಾಂಗ್ಲಾದೇಶ್ ತಂಡಗಳು ಮುಖಾಮುಖಿಯಾಗಿದ್ದವು.
ಗ್ರೂಪ್ ಹಂತದ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನ ಪಡೆದಿದ್ದ ನಾಲ್ಕು ತಂಡಗಳು ಸೂಪರ್-4 ಹಂತಕ್ಕೇರಿದ್ದವು. ಅದರಂತೆ ಸೂಪರ್-4 ಸುತ್ತಿನಲ್ಲಿ ಭಾರತ, ಪಾಕಿಸ್ತಾನ್ , ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಿದ್ದವು. ಸೂಪರ್-4 ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಗಳನ್ನು ಪಡೆದ 2 ತಂಡಗಳು ಫೈನಲ್ ಪ್ರವೇಶಿಸಿದ್ದವು. ಅದರಂತೆ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ್ ಹಾ್ಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಪಾಕ್ ತಂಡವನ್ನು ಬಗ್ಗು ಬಡಿದು ಶ್ರೀಲಂಕಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.