Asia Cup 2022: ಏಷ್ಯಾಕಪ್ನ ಸೂಪರ್-4 ಹಂತದ ಪಂದ್ಯಗಳು ಮುಕ್ತಾಯವಾಗಿದೆ. ಆಡಿದ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಶ್ರೀಲಂಕಾ ತಂಡವು ಅಗ್ರಸ್ಥಾನ ಅಲಂಕರಿಸಿದೆ. ಇನ್ನು ದ್ವಿತೀಯ ಸ್ಥಾನದಲ್ಲಿ 3 ರಲ್ಲಿ 2 ಜಯ ದಾಖಲಿಸಿರುವ ಪಾಕಿಸ್ತಾನ್ ತಂಡವಿದೆ. ಇನ್ನು 3ನೇ ಸ್ಥಾನದೊಂದಿಗೆ ಟೀಮ್ ಇಂಡಿಯೇ ಏಷ್ಯಾಕಪ್ ಅಭಿಯಾನ ಅಂತ್ಯಗೊಳಿಸಿದರೆ, 4ನೇ ಸ್ಥಾನಕ್ಕೆ ಅಫ್ಘಾನಿಸ್ತಾನ್ ತಂಡ ತೃಪ್ತಿಪಟ್ಟುಕೊಂಡಿದೆ. ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮೂರನೇ ಸ್ಥಾನದಲ್ಲಿದ್ದರೂ ರನ್ ರೇಟ್ನಲ್ಲಿ ಪಾಕಿಸ್ತಾನ್ ತಂಡಕ್ಕಿಂತ ಮುಂದಿರುವುದು ವಿಶೇಷ.
ಸೂಪರ್- 4 ಹಂತದಲ್ಲಿ 3 ಪಂದ್ಯಗಳಲ್ಲಿ ಪಾಕಿಸ್ತಾನ್ ತಂಡವು 2 ಜಯ ಸಾಧಿಸಿ -0.279 ನೆಟ್ ರನ್ ಪಡೆದುಕೊಂಡಿದೆ. ಅದೇ ಮೂರು ಪಂದ್ಯಗಳಲ್ಲಿ 1 ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ ಹೊಂದಿರುವುದು +1.607 ನೆಟ್ ರನ್ ರೇಟ್. ಅಂದರೆ ಇಲ್ಲಿ ಟೀಮ್ ಇಂಡಿಯಾ ಹಾಗೂ ಪಾಕ್ ನಡುವಣ ನೆಟ್ ರನ್ ರೇಟ್ ಅಜಗಜಾಂತರ ವ್ಯತ್ಯಾಸವಿದೆ. ಆದರೆ ಪಾಯಿಂಟ್ನಲ್ಲಿ ಪಾಕಿಸ್ತಾನ್ ತಂಡವು 4 ಅಂಕಗಳಿಸಿರುವ ಪರಿಣಾಮ 2ನೇ ಸ್ಥಾನ ಅಲಂಕರಿಸಿದೆ. ಇಲ್ಲಿ ಟೀಮ್ ಇಂಡಿಯಾ ಪಾಲಿಗೆ ಮುಳುವಾಗಿದ್ದು ಅಫ್ಘಾನಿಸ್ತಾನ್ ತಂಡದ ಸೋಲು ಎಂಬುದು ಗಮನಾರ್ಹ.
ಅಂದರೆ ಅಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನ್ ನಡುವಣ ಮುಖಾಮುಖಿಯಲ್ಲಿ ಅಫ್ಘಾನ್ ಗೆದ್ದಿದ್ದರೆ ಟೀಮ್ ಇಂಡಿಯಾಗೆ ಫೈನಲ್ ಪ್ರವೇಶಿಸುವ ಅವಕಾಶ ದೊರೆಯುತ್ತಿತ್ತು. ಆದರೆ ಕೇವಲ 130 ರನ್ಗಳ ಟಾರ್ಗೆಟ್ ನೀಡಿ ಭರ್ಜರಿ ಪೈಪೋಟಿ ನೀಡಿದ್ದ ಅಫ್ಘಾನಿಸ್ತಾನ್ ತಂಡವು ಅಂತಿಮ ಓವರ್ನಲ್ಲಿ ಶರಣಾಗಿತ್ತು. ಅದರಲ್ಲೂ ಕೊನೆಯ ಓವರ್ನಲ್ಲಿ 11 ರನ್ಗಳ ಟಾರ್ಗೆಟ್ ಪಡೆದಿದ್ದ ಪಾಕಿಸ್ತಾನ್ ತಂಡಕ್ಕೆ 2 ಎಸೆತಗಳಲ್ಲಿ ಎರಡು ಸಿಕ್ಸ್ ಸಿಡಿಸುವ ಮೂಲಕ ನಸೀಮ್ ಶಾ 1 ವಿಕೆಟ್ನ ರೋಚಕ ಜಯ ತಂದುಕೊಟ್ಟಿದ್ದರು.
ಒಂದು ವೇಳೆ ಆ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವು ರೋಚಕ ಜಯ ಸಾಧಿಸಿದ್ದರೂ, ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸುತ್ತಿತ್ತು ಎಂಬುದಕ್ಕೆ ಪ್ರಸ್ತುತ ಪಾಯಿಂಟ್ಸ್ ಟೇಬಲೇ ಸಾಕ್ಷಿ. ಅಂದರೆ ಟೀಮ್ ಇಂಡಿಯಾ ಹಾಗೂ ಅಫ್ಘಾನಿಸ್ತಾನ್ ತಂಡಗಳನ್ನು ಮಣಿಸಿ ಪಾಕಿಸ್ತಾನ್ ಹೆಚ್ಚಿನ ಪಾಯಿಂಟ್ ಮೂಲಕ ಇದೀಗ ಫೈನಲ್ ಪ್ರವೇಶಿಸಿದೆ.
ಅಫ್ಘಾನಿಸ್ತಾನ್ ವಿರುದ್ಧ ಪಾಕಿಸ್ತಾನ್ ಸೋತಿದ್ದರೆ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ್ ಸಮ ಅಂಕಗಳನ್ನು ಪಡೆಯುತ್ತಿತ್ತು. ಅಲ್ಲದೆ ಹೆಚ್ಚು ನೆಟ್ ರನ್ ರೇಟ್ ಹೊಂದಿರುವ ಟೀಮ್ ಇಂಡಿಯಾ ಶ್ರೀಲಂಕಾ ವಿರುದ್ಧ ಫೈನಲ್ ಆಡುವ ಅವಕಾಶ ಪಡೆಯುತ್ತಿತ್ತು.
ಇದೀಗ ಸೆಪ್ಟೆಂಬರ್ 11 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿವೆ. ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದು ಯಾರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ ಕಾದು ನೋಡಬೇಕಿದೆ.