Asia Cup 2023: ಭಾರತ- ಪಾಕ್ ಪಂದ್ಯಕ್ಕೂ ಕ್ರೀಡಾಂಗಣ ಖಾಲಿ ಖಾಲಿ; 15 ಸಾವಿರ ಟಿಕೆಟ್ ಅನ್​ಸೋಲ್ಡ್..!

|

Updated on: Sep 11, 2023 | 9:53 AM

India vs Pakistan: ವರದಿ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ 15000 ಟಿಕೆಟ್​ಗಳು ಮಾರಾಟವಾಗದೆ ಉಳಿದಿವೆ ಎಂದು ವರದಿಯಾಗಿದೆ. ಪ್ರೇಮದಾಸ ಕ್ರೀಡಾಂಗಣ ಪ್ರೇಕ್ಷಕರ ಸಾಮಥ್ಯ್ರ 35 ಸಾವಿರವಾಗಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಕೇವಲ 20 ಸಾವಿರ ಪ್ರೇಕ್ಷಕರು ಮೈದಾನಕ್ಕೆ ಬಂದಿದ್ದರು ಎಂದು ವರದಿಯಾಗಿದೆ.

Asia Cup 2023: ಭಾರತ- ಪಾಕ್ ಪಂದ್ಯಕ್ಕೂ ಕ್ರೀಡಾಂಗಣ ಖಾಲಿ ಖಾಲಿ; 15 ಸಾವಿರ ಟಿಕೆಟ್ ಅನ್​ಸೋಲ್ಡ್..!
ಭಾರತ- ಪಾಕಿಸ್ತಾನ
Follow us on

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಕ್ರಿಕೆಟ್ ಕದನವೆಂದರೆ ಅದು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ಈ ಹಿಂದೆ ಈ ಉಭಯ ದೇಶಗಳ ನಡುವೆ ನಡೆದ ಪಂದ್ಯಗಳೇ ಇದಕ್ಕೆ ಸಾಕ್ಷಿ. ಇದೆಲ್ಲ ಸಾಲದೆಂಬಂತೆ, ಈ ಎರಡೂ ತಂಡಗಳು ಏಷ್ಯಾಕಪ್ (Asia Cup 2023) ಮುಗಿಯುತ್ತಿದ್ದಂತೆ, ವಿಶ್ವಕಪ್​ನಲ್ಲಿ (ODI World Cup 2023) ಮುಖಾಮುಖಿಯಾಗಲಿವೆ. ಈ ಪಂದ್ಯ ಅಹಮದಾಬಾದ್​ನಲ್ಲಿ ನಡೆಯುತ್ತಿದ್ದು, ಪಂದ್ಯ ನಡೆಯಲು ಇನ್ನೊಂದು ತಿಂಗಳು ಬಾಕಿ ಇರುವಾಗಲೇ, ಅಹಮದಾಬಾದ್ ಸುತ್ತಮುತ್ತಲಿನ ಹೋಟೆಲ್​ಗಳನ್ನು ಈಗಾಗಲೇ ಪಂದ್ಯದ ದಿನಕ್ಕೆ ಬುಕ್ ಮಾಡಲಾಗಿದೆ. ಇನ್ನು ಪಂದ್ಯದ ಟಿಕೆಟ್​ಗಳು ಕೂಡ ಸೋಲ್ಡ್ ಔಟ್ ಆಗಿವೆ. ಆದರೆ ಏಷ್ಯಾಕಪ್​ನಲ್ಲಿ ಮಾತ್ರ ಕಥೆ ವಿಭಿನ್ನವಾಗಿದೆ. ಈ ಬದ್ಧವೈರಿಗಳ ಕದನ ಅದ್ಯಾಕೋ ಲಂಕಾದ ಕ್ರಿಕೆಟ್​ ಅಭಿಮಾನಿಗಳಿಗೆ ರುಚಿ ಹತ್ತಿಸಿಲ್ಲ ಎಂದು ತೋರುತ್ತದೆ. ಹೀಗಾಗಿ ಸೂಪರ್ 4 ಸುತ್ತಿನಲ್ಲಿ ಭಾರತ- ಪಾಕ್ ಕದನವನ್ನು ಅರ್ಧದಷ್ಟು ಖಾಲಿ ಕ್ರೀಡಾಂಗಣದಲ್ಲಿ ಆಡಿಸಲಾಗುತ್ತಿದೆ.

ಮಳೆಯಿಂದಾಗಿ ಮೈದಾನ ಖಾಲಿ ಖಾಲಿ

ವಾಸ್ತವವಾಗಿ ಈ ಉಭಯ ದೇಶಗಳ ಈ ಕ್ರಿಕೆಟ್ ಕದನ ಖಾಲಿ ಮೈದಾನದಲ್ಲಿ ನಡೆಯಲು ಕಾರಣವೂ ಇದೆ. ಈ ಪಂದ್ಯ ನಡೆಯುವುದಕ್ಕೂ ಮುನ್ನವೇ ಪಂದ್ಯದ ದಿನದಂದು ಕೊಲಂಬೊದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಲಾಗಿತ್ತು. ಹವಾಮಾನ ವರದಿಯ ಪ್ರಕಾರ ಸೆ.10 ರಂದು ಶೇ. 90 ರಷ್ಟು ಮಳೆಯಾಗಲಿದೆ ಎಂದು ವರದಿಯಾಗಿತ್ತು. ಹೀಗಾಗಿ ಮಳೆಯ ಮುನ್ಸೂಚನೆ ಮೊದಲೇ ಸಿಕ್ಕಿದ್ದರಿಂದ ಅಭಿಮಾನಿಗಳು ಕ್ರೀಡಾಂಗಣದತ್ತ ಮುಖ ಮಾಡಿಲ್ಲ ಎಂದು ವರದಿಗಳಲ್ಲಿ ಹೇಳಲಾಗುತ್ತಿದೆ. ಆದರೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಲು ಇನ್ನೊಂದು ಕಾರಣವಿದೆ ಎಂತಲೂ ಹೇಳಲಾಗುತ್ತಿದೆ.

ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಸಂಕಷ್ಟಕ್ಕೆ ಸಿಲುಕಲಿದೆ ಟೀಂ ಇಂಡಿಯಾ! ಇಲ್ಲಿದೆ ಫೈನಲ್ ಫೈಟ್ ಲೆಕ್ಕಾಚಾರ

15000 ಟಿಕೆಟ್ ಅನ್​ಸೋಲ್ಡ್

ವರದಿ ಪ್ರಕಾರ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಟಿಕೆಟ್ ಬೆಲೆಯಲ್ಲಿ ಭಾರಿ ಹೆಚ್ಚಳ ಮಾಡಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ನೋಡಲು ಕ್ರೀಡಾಂಗಣಕ್ಕೆ ಬಂದಿಲ್ಲ ಎಂದು ವರದಿಯಾಗಿದೆ. ಪ್ರಮುಖವಾಗಿ ಈ ಎರಡು ಕಾರಣಗಳಿಂದಾಗಿ ಬರೋಬ್ಬರಿ 15000 ಟಿಕೆಟ್​ಗಳು ಮಾರಾಟವಾಗದೆ ಉಳಿದಿವೆ ಎಂದು ವರದಿಯಾಗಿದೆ.

ಆತಿಥೇಯ ರಾಷ್ಟ್ರಗಳಿಗೆ ನಷ್ಟ

ಪ್ರೇಮದಾಸ ಕ್ರೀಡಾಂಗಣ ಪ್ರೇಕ್ಷಕರ ಸಾಮಥ್ಯ್ರ 35 ಸಾವಿರವಾಗಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ವೀಕ್ಷಿಸಲು ಕೇವಲ 20 ಸಾವಿರ ಪ್ರೇಕ್ಷಕರು ಮೈದಾನಕ್ಕೆ ಬಂದಿದ್ದರು ಎಂದು ವರದಿಯಾಗಿದೆ. ಈ ಮೊದಲೇ ಮಳೆಯಿಂದಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರದ್ಧಾದರಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ಆತಿಥೇಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಶ್ರೀಲಂಕಾ ಇದೀಗ ಈ ಪಂದ್ಯದಲ್ಲೂ ಸಾಕಷ್ಟು ನಷ್ಟ ಅನುಭವಿಸುವ ಆತಂಕದಲ್ಲಿವೆ. ಭಾರತ- ಪಾಕ್ ನಡುವಿನ ಮೊದಲ ಪಂದ್ಯವನ್ನು ಮಳೆಯಿಂದ ರದ್ದು ಮಾಡಿದಕ್ಕಾಗಿ ಎಸಿಸಿಯ ಅಧ್ಯಕ್ಷರಾದ ಜಯ್​ ಶಾರನ್ನು ದೂರಿದ್ದ ಪಿಸಿಬಿ, ನಮಗೆ ನಷ್ಟವನ್ನು ಬರಿಸಿಕೊಡಬೇಕು ಎಂದಿದ್ದರು. ಇದೀಗ ಈ ಪಂದ್ಯದಲ್ಲೂ ನಷ್ಟ ಅನುಭವಿಸುವ ಆತಂಕದಲ್ಲಿರುವ ಪಿಸಿಬಿ ನಷ್ಟ ಬರಿಸಲು ಯಾವ ರೀತಿಯ ಕ್ರಮಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:50 am, Mon, 11 September 23