ಬಾಂಗ್ಲಾದೇಶ ವಿರುದ್ಧದ ಸೋಲನ್ನು ಮರೆತಿರುವ ಟೀಂ ಇಂಡಿಯಾದ (Team India) ಕಣ್ಣು ಇದೀಗ ಏಷ್ಯಾಕಪ್‌ನ ಫೈನಲ್‌ನತ್ತ (Asia Cup 2023 Final) ನೆಟ್ಟಿದೆ. ಭಾರತ ಮತ್ತು ಶ್ರೀಲಂಕಾ (India vs Sri lanka) ನಡುವಿನ ಅಂತಿಮ ಪಂದ್ಯವು ಭಾನುವಾರ, ಸೆಪ್ಟೆಂಬರ್ 17 ರಂದು ನಡೆಯಲಿದೆ. ಆದರೆ ಪಂದ್ಯಾವಳಿ ಉದ್ದಕ್ಕೂ ತೊಂದರೆನೀಡಿದ ಮಳೆರಾಯ ಈ ಪಂದ್ಯಕ್ಕೂ ಕಾಟ ಕೊಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಎಸಿಸಿ (ACC) ಈ ಫೈನಲ್ ಫೈಟ್ಗೆ ಮೀಸಲು ದಿನವನ್ನು ನಿಗದಿಪಡಿಸಿದೆ. ಒಂದು ವೇಳೆ ಭಾನುವಾರದಂದು ಕೊಲಂಬೊದಲ್ಲಿ ಮಳೆ ಸುರಿದು ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಮೀಸಲು ದಿನದಂದು (Reserve Day) ಅಂದರೆ, ಸೋಮವಾರದಂದು ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ. ಆದರೆ ರಿಸರ್ವ್ ದಿನದಂದು ಮಳೆ ಬಂದು ಪಂದ್ಯ ನಡೆಯದಿದ್ದರೆ, ಚಾಂಪಿಯನ್ ತಂಡವನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಓಡುತ್ತಿದೆ.
ಭಾರತ-ಶ್ರೀಲಂಕಾ ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ. ಅಕ್ಯುವೆದರ್ ಪ್ರಕಾರ, ಶನಿವಾರ ಕೊಲಂಬೊದಲ್ಲಿ ಶೇ.90 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಫೈನಲ್‌ಗೆ ಮೀಸಲು ದಿನವನ್ನೂ ಇಡಲಾಗಿದೆ ಎಂಬುದು ಸಮಾಧಾನದ ಸಂಗತಿಯಾದರೂ, ಸೋಮವಾರವೂ ಕೊಲಂಬೊದಲ್ಲಿ ಶೇ.70 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಅಂದರೆ, ಸೆಪ್ಟೆಂಬರ್ 17 ರಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಈ ಪಂದ್ಯವು ಸೆಪ್ಟೆಂಬರ್ 18 ರಂದು ನಡೆಯಲಿದೆ. ಭಾರತ-ಪಾಕಿಸ್ತಾನ ನಡುವಿನ ಸೂಪರ್ 4 ಸುತ್ತಿನ ಪಂದ್ಯದಲ್ಲಿ ಏನಾಯಿತೋ ಅದೇ ರೀತಿ ಈ ಪಂದ್ಯ ನಡೆಯಲ್ಲಿದೆ. ಆದರೆ, ಮಳೆಯಿಂದಾಗಿ ಎರಡೂ ದಿನಗಳಲ್ಲೂ ಉಭಯ ತಂಡಗಳು ತಲಾ 20 ಓವರ್‌ಗಳ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಭಾರತ ಮತ್ತು ಶ್ರೀಲಂಕಾ ನಡುವೆ ಟ್ರೋಫಿಯನ್ನು ಹಂಚಿಕೊಳ್ಳಲಾಗುತ್ತದೆ.
ಮಳೆಯಿಂದಾಗಿ, ಇಡೀ ಏಷ್ಯಾಕಪ್‌ನ ಅನೇಕ ಪಂದ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಮತ್ತು ಕೆಲವು ಪಂದ್ಯಗಳನ್ನು ರದ್ದುಗೊಳಿಸಬೇಕಾಯಿತು. ಆದರೆ, ಶ್ರೀಲಂಕಾದಲ್ಲಿ ಮಳೆಯಿಂದಾಗಿ ಟೂರ್ನಿಗೆ ಅಡ್ಡಿಯಾಗುತ್ತಿರುವುದು ಇದೇ ಮೊದಲಲ್ಲ. 2002ರಲ್ಲಿ ಇಲ್ಲಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದಾಗ ಸೆಪ್ಟಂಬರ್‌ನಲ್ಲಿ ಟೂರ್ನಿ ನಡೆದಿದ್ದು, ಮಳೆಯಿಂದಾಗಿ ಫೈನಲ್ ಪಂದ್ಯ ನಡೆಯಲಿಲ್ಲ. ವಿಶೇಷವೆಂದರೆ 2002ರಲ್ಲಿಯೂ ಭಾರತ ಹಾಗೂ ಶ್ರೀಲಂಕಾ ತಂಡಗಳು ಫೈನಲ್ ತಲುಪಿದ್ದು, ಫೈನಲ್ ನಡೆಯದಿದ್ದರೂ ಉಭಯ ತಂಡಗಳು ಟ್ರೋಫಿ ಹಂಚಿಕೊಂಡಿದ್ದವು.
ಹವಾಮಾನ ಮಾತ್ರವಲ್ಲದೇ ಫಿಟ್ನೆಸ್ ಕೂಡ ಫೈನಲ್‌ನಲ್ಲಿ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ. ಟೀಂ ಇಂಡಿಯಾದ ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡಿರುವ ಕಾರಣ ವಾಷಿಂಗ್ಟನ್ ಸುಂದರ್ ಅವರನ್ನು ಶ್ರೀಲಂಕಾ ವಿರುದ್ಧ ಮೀಸಲು ಆಟಗಾರನನ್ನಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ, ಶ್ರೀಲಂಕಾದ ಮಹಿಶ್ ತಿಕ್ಷಾನಾ ಕೂಡ ಗಾಯದ ಕಾರಣ ಫೈನಲ್‌ನಿಂದ ಹೊರಗುಳಿದಿದ್ದು, ಅವರ ಬದಲಿಗೆ ಸಹನ್ ಆರ್ಚಿಗೇ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ