ಇಂದು ಮಧ್ಯಾಹ್ನ 1:30 ರ ಸುಮಾರಿಗೆ ಏಷ್ಯಾಕಪ್‌ಗೆ (Asia Cup 2023) ಟೀಂ ಇಂಡಿಯಾ ಪ್ರಕಟವಾಗಲಿದೆ ಎಂದು ವರದಿಯಾಗಿದೆ. ದೆಹಲಿಯಲ್ಲಿ ಅಜಿತ್ ಅಗರ್ಕರ್ (Ajit Agarkar) ನೇತೃತ್ವದಲ್ಲಿ ಭಾರತೀಯ ಆಯ್ಕೆಗಾರರ ಸಭೆ ನಡೆಯಲಿದ್ದು, ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಜೊತೆಗೆ ನಾಯಕ ರೋಹಿತ್ ಶರ್ಮಾ (Rohit Sharma) ಕೂಡ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಏಷ್ಯಾಕಪ್‌ಗೆ 17 ಆಟಗಾರರನ್ನು ಆಯ್ಕೆ ಮಾಡಬೇಕಿದ್ದು, ಆ 17 ಆಟಗಾರರ ಆಯ್ಕೆಯ ಬಗ್ಗೆ ಚಿಂತನ ಮಂಥನ ಜೋರಾಗಿ ಸಾಗಲಿದೆ. ಆರಂಭಿಕ, ಮಧ್ಯಮ ಕ್ರಮಾಂಕ ಮತ್ತು ಬೌಲಿಂಗ್‌ನಲ್ಲಿ ಯಾರೆಲ್ಲಾ ಇರುತ್ತಾರೆ ಅಥವಾ ಯಾರಿಗೆ ಅದೃಷ್ಟ ಕೈಹಿಡಿಯಲಿದೆ ಎಂಬುದರ ಕುರಿತು ಚಿತ್ರವು ಈಗಾಗಲೇ ಸಾಕಷ್ಟು ಸ್ಪಷ್ಟವಾಗಿದೆ. ಆದರೆ ತಂಡದಲ್ಲಿರುವ ಈ ನಾಲ್ಕು ಸಮಸ್ಯೆಗಳಿಗೆ ಆಯ್ಕೆ ಮಂಡಳಿ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಟೀಂ ಇಂಡಿಯಾದಲ್ಲಿ 4 ನೇ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆ ಬಹಳ ಹಿಂದಿನಿಂದಲೂ ಕಾಡುತ್ತಿದೆ. 2019 ರಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕಳೆದ ಒಂದೂವರೆ ವರ್ಷಗಳಲ್ಲಿ ಭಾರತ ಈ ಸ್ಥಾನದಲ್ಲಿ 9 ಬ್ಯಾಟ್ಸ್‌ಮನ್‌ಗಳನ್ನು ಪ್ರಯೋಗಿಸಿದೆ. ಆದರೆ ಈ ಸ್ಥಾನಕ್ಕೆ ಇನ್ನು ಸೂಕ್ತವಾದ ಬ್ಯಾಟರ್ ಸಿಕ್ಕಿಲ್ಲ. ಶ್ರೇಯಸ್ ಅಯ್ಯರ್ ರೂಪದಲ್ಲಿ ಒಂದಷ್ಟು ದಿನ ಸ್ಥಾನಕ್ಕೆ ಬ್ಯಾಟರ್ ಸಿಕ್ಕಿದ್ದರು. ಆದರೆ ಪ್ರಸ್ತುತ ಅಯ್ಯರ್, ಇಂಜುರಿಯಿಂದ ಚೇತರಿಸಿಕೊಂಡಿದ್ದು, ಅವರು ಎಷ್ಟು ಫಿಟ್ ಆಗಿದ್ದಾರೆ ಎಂದು ಹೇಳುವುದು ಕಷ್ಟ. ಒಂದು ವೇಳೆ ಅವರು ಏಷ್ಯಾಕಪ್‌ಗೆ ಫಿಟ್ ಆಗದಿದ್ದರೆ 4 ನೇ ಕ್ರಮಾಂಕಕ್ಕೆ ಸ್ಪರ್ಧಿಗಳಾಗಿರುವ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಈ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಾಗುತ್ತದೆ.
IND vs IRE: ಐರ್ಲೆಂಡ್ ಪ್ರವಾಸದಲ್ಲಿ ಕೇವಲ 3 ಎಸೆತಗಳಿಗೆ ಸುಸ್ತಾದ ತಿಲಕ್; ಏಷ್ಯಾಕಪ್‌ಗೆ ಡೌಟ್
ಪ್ರಸ್ತುತ ಹಾರ್ದಿಕ್ ಪಾಂಡ್ಯ ಉತ್ತಮ ಲಯದಲ್ಲಿರುವುದು ತಂಡಕ್ಕೆ ಕೊಂಚ ನಿರಾಳ ತಂದಿದೆ. ಆದರೆ ಬ್ಯಾಟಿಂಗ್ನಲ್ಲಿ ಅವರಿನ್ನೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಇದರ ನಡುವೆ ಒಂದು ವೇಳೆ ಪಾಂಡ್ಯ ಏಷ್ಯಾಕಪ್ಗೂ ಮುನ್ನ ಅಥವಾ ಏಷ್ಯಾಕಪ್ ವೇಳೆ ಇಂಜುರಿಗೆ ಒಳಗಾಗದರೆ, ಅವರ ಬದಲಿಯಾಗಿ ತಂಡದಲ್ಲಿ ಯಾರು ಅವರ ಸ್ಥಾನವನ್ನು ತುಂಬಲ್ಲಿದ್ದಾರೆ ಎಂಬ ಪ್ರಶ್ನೆಗೆ ಆಯ್ಕೆ ಮಂಡಳಿ ಉತ್ತರ ನೀಡಬೇಕಿದೆ.
ಈ ವರ್ಷ ಭಾರತದಲ್ಲೇ ವಿಶ್ವಕಪ್ ನಡೆಯುತ್ತಿದೆ. ನಿಸ್ಸಂಶಯವಾಗಿ ಭಾರತದ ಪಿಚ್‌ಗಳಲ್ಲಿ ಸ್ಪಿನ್ ಮೇಲುಗೈ ಸಾಧಿಸುತ್ತದೆ. ಟೀಂ ಇಂಡಿಯಾದಲ್ಲಿ ರಿಸ್ಟ್ ಸ್ಪಿನ್ನರ್, ಲೆಗ್ ಸ್ಪಿನ್ನರ್, ಲೆಫ್ಟ್ ಆರ್ಮ್ ಸ್ಪಿನ್ನರ್ ಇದ್ದಾರೆ. ಆದರೆ ಅದರ ವೈವಿಧ್ಯದಲ್ಲಿ ರೈಟ್ ಆರ್ಮ್ ಸ್ಪೆಷಲಿಸ್ಟ್ ಆಫ್ ಸ್ಪಿನ್ನರ್ ಇಲ್ಲ. ಹೀಗಾಗಿ ಆಯ್ಕೆಗಾರರು ಬೆಸ್ಟ್ ಸ್ಪಿನ್ ದಾಳಿಯ ಜೊತೆಗೆ ಬ್ಯಾಟಿಂಗ್ನಲ್ಲೂ ಕೊಡುಗೆ ನೀಡಬಲ್ಲ ಆಟಗಾರನನ್ನು ಹುಡುಕಬೇಕಿದೆ.
ಟೀಂ ಇಂಡಿಯಾ ವೇಗದ ಬೌಲರ್‌ಗಳ ವಿಭಾಗದಲ್ಲಿ ಅದ್ಭುತ ಪ್ರತಿಭೆಗಳನ್ನು ಹೊಂದಿದೆ. ಒಳ್ಳೆಯ ವಿಷಯವೆಂದರೆ ಎಲ್ಲರೂ ಫಿಟ್ ಆಗಿದ್ದಾರೆ ಮತ್ತು ಫಾರ್ಮ್ನಲ್ಲಿದ್ದಾರೆ. ಆದರೆ, ಈ ವೇಗದ ದಾಳಿಯಲ್ಲಿ ಎಡಗೈ ವೇಗದ ಬೌಲರ್ ಕೊರತೆ ಎದ್ದು ಕಾಣಿಸುತ್ತಿದೆ. ಪ್ರಸ್ತುತ ಅರ್ಶ್ದೀಪ್ ಸಿಂಗ್ ರೂಪದಲ್ಲಿ ಎಡಗೈ ಬೌಲರ್ ಇದ್ದಾರಾದರೂ ಅವರಿನ್ನು ತಮ್ಮ ಹಳೆಯ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದರಲ್ಲೇ ಸಮಯ ಹರಣ ಮಾಡುತ್ತಿದ್ದಾರೆ. ಹೀಗಾಗಿ ಉತ್ತಮ ಎಡಗೈ ಬೌಲರ್ನನ್ನು ಹುಡುಕುವುದು ಕೂಡ ಅಗತ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾಕ್ಕೆ ಅರ್ಶ್ದೀಪ್ ಹೊರತುಪಡಿಸಿ ಮತ್ತೊಬ್ಬ ಎಡಗೈ ವೇಗಿಯ ಆಯ್ಕೆಯೇ ಇಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:00 am, Mon, 21 August 23