Asia Cup 2025: ಏಷ್ಯಾಕಪ್‌ಗೆ 16 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ

Bangladesh Announces Asia Cup 2025 Squad: 2025ರ ಏಷ್ಯಾಕಪ್‌ಗಾಗಿ ಬಾಂಗ್ಲಾದೇಶ ತನ್ನ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಲಿಟ್ಟನ್ ದಾಸ್ ನಾಯಕತ್ವದ ಈ ತಂಡದಲ್ಲಿ ಅನುಭವಿ ಆಲ್‌ರೌಂಡರ್ ಮೆಹದಿ ಹಸನ್ ಮಿರಾಜ್‌ಗೆ ಸ್ಥಾನ ಸಿಕ್ಕಿಲ್ಲ. ಆದರೆ ಮೂರು ವರ್ಷಗಳ ನಂತರ ನೂರುಲ್ ಹಸನ್ ತಂಡಕ್ಕೆ ಮರಳಿದ್ದಾರೆ. ಸೈಫ್ ಹಸನ್ ಅವರನ್ನು ಕೂಡ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಮಿರಾಜ್ ಅವರನ್ನು ಸ್ಟ್ಯಾಂಡ್‌ಬೈ ಆಟಗಾರರಾಗಿ ಆಯ್ಕೆ ಮಾಡಲಾಗಿದೆ.

Asia Cup 2025: ಏಷ್ಯಾಕಪ್‌ಗೆ 16 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ
Bangladesh Team

Updated on: Sep 04, 2025 | 5:41 PM

2025 ರ ಏಷ್ಯಾಕಪ್‌ಗೆ (Asia Cup 2025) 3 ವಾರಗಳಿಗಿಂತ ಕಡಿಮೆ ಸಮಯ ಬಾಕಿ ಇದ್ದು, ಈಗ ಪ್ರತಿಯೊಂದು ಮಂಡಳಿಯೂ ಈ ಪಂದ್ಯಾವಳಿಗೆ ತನ್ನ ತಂಡವನ್ನು ಪ್ರಕಟಿಸುತ್ತಿದೆ. ಪಾಕಿಸ್ತಾನ ಹಾಗೂ ಟೀಂ ಇಂಡಿಯಾ (Team India) ಈಗಾಗಲೇ ಪ್ರಕಟಗೊಂಡಿದ್ದವು. ಇದೀಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಈ ಪಂದ್ಯಾವಳಿಗಾಗಿ ತನ್ನ ತಂಡವನ್ನು (Bangladesh Cricket Team) ಬಿಡುಗಡೆ ಮಾಡಿದೆ. ಲಿಟ್ಟನ್ ದಾಸ್ ನಾಯಕತ್ವದಲ್ಲಿ, ಬಾಂಗ್ಲಾದೇಶದ ಆಯ್ಕೆದಾರರು 16 ಸದಸ್ಯರ ತಂಡವನ್ನು ಘೋಷಿಸಿದ್ದಾರೆ. ಆದಾಗ್ಯೂ ಈ ತಂಡದಲ್ಲಿ ಅನುಭವಿ ಆಲ್‌ರೌಂಡರ್ ಮತ್ತು ಏಕದಿನ ನಾಯಕ ಮೆಹದಿ ಹಸನ್ ಮಿರಾಜ್​ಗೆ ಈ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಆದರೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ನೂರುಲ್ ಹಸನ್ ಅವರು ಸುಮಾರು 3 ವರ್ಷಗಳ ನಂತರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೆಹದಿ ಔಟ್, ಹಸನ್ ಎಂಟ್ರಿ

2025 ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಆರಂಭವಾಗಲಿದ್ದು, ಸೆಪ್ಟೆಂಬರ್ 28 ರವರೆಗೆ ನಡೆಯಲಿದೆ. ಈ ಬಾರಿ 8 ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗವಹಿಸುತ್ತಿದ್ದು, ಇದು ಟಿ20 ಸ್ವರೂಪದಲ್ಲಿ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಂದು ದೇಶದ ಕ್ರಿಕೆಟ್ ಮಂಡಳಿಯು ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಘೋಷಿಸುತ್ತಿದೆ. ಕೆಲವು ಸ್ಟಾರ್ ಆಟಗಾರರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿರುವುದಕ್ಕೆ ಹಾಗೆಯೇ ಕೆಲವು ಸ್ಟಾರ್ ಆಟಗಾರರು ಪಾಕಿಸ್ತಾನ ತಂಡದಿಂದ ಕಾಣೆಯಾಗಲು ಇದೇ ಕಾರಣ. ಇದನ್ನು ಗಮನದಲ್ಲಿಟ್ಟುಕೊಂಡು, ಬಾಂಗ್ಲಾದೇಶವು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸ್ಪಿನ್-ಆಲ್‌ರೌಂಡರ್ ಮೆಹದಿ ಹಸನ್ ಮಿರಾಜ್‌ಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಆದಾಗ್ಯೂ ಅವರನ್ನು ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.

ಏಕದಿನ ತಂಡದ ನಾಯಕ ಮೆಹದಿ ಹಸನ್ ಮಿರಾಜ್ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ ಆಯ್ಕೆದಾರರು 3 ವರ್ಷಗಳ ನಂತರ ವಿಕೆಟ್ ಕೀಪರ್ ನೂರುಲ್ ಹಸನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾರೆ. 31 ವರ್ಷದ ಹಸನ್ ಬಾಂಗ್ಲಾದೇಶ ಪರ ತಮ್ಮ ಕೊನೆಯ ಟಿ20 ಪಂದ್ಯವನ್ನು ನವೆಂಬರ್ 2022 ರಲ್ಲಿ ಆಡಿದ್ದರು. ಅಲ್ಲದೆ ಡಿಸೆಂಬರ್ 2023 ರಿಂದ ರಾಷ್ಟ್ರೀಯ ತಂಡದ ಪರ ಯಾವುದೇ ಸ್ವರೂಪದಲ್ಲಿ ಯಾವುದೇ ಪಂದ್ಯವನ್ನು ಆಡಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರ ಆಯ್ಕೆಯು ಸ್ವಲ್ಪ ಆಶ್ಚರ್ಯಕರವಾಗಿದೆ. ಏಕೆಂದರೆ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಟಿ20 ಲೀಗ್‌ನಲ್ಲಿಯೂ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಮಾಡಿಲ್ಲ ಅಥವಾ ಸಾಕಷ್ಟು ರನ್ ಗಳಿಸಿಲ್ಲ. ಹಾಗಿದ್ದರೂ ಅವರಿಗೆ ಅವಕಾಶ ನೀಡಲಾಗಿದೆ.

ಈ ಆಲ್‌ರೌಂಡರ್‌ಗೂ ಅವಕಾಶ

ನೂರುಲ್ ಹಸನ್ ಇದುವರೆಗೆ ಬಾಂಗ್ಲಾದೇಶ ಪರ 46 ಟಿ20 ಪಂದ್ಯಗಳಲ್ಲಿ 445 ರನ್ ಗಳಿಸಿದ್ದಾರೆ. ಇದರಲ್ಲಿ ಒಂದೇ ಒಂದು ಅರ್ಧಶತಕವೂ ಇಲ್ಲ. ಹಸನ್ ಜೊತೆಗೆ, 26 ವರ್ಷದ ಆಲ್‌ರೌಂಡರ್ ಸೈಫ್ ಹಸನ್ ಅವರನ್ನು ಸಹ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಬಾಂಗ್ಲಾದೇಶ ಪರ 5 ಟಿ20 ಮತ್ತು 6 ಟೆಸ್ಟ್ ಪಂದ್ಯಗಳನ್ನು ಆಡಿರುವ ಹಸನ್, ಈ ಸ್ವರೂಪದಲ್ಲಿ ಕೇವಲ 52 ರನ್‌ ಗಳಿಸಿದ್ದಾರೆ. ಹಾಗೆಯೇ ಅವರು ಈ ಸ್ವರೂಪದಲ್ಲಿ ಯಾವುದೇ ವಿಕೆಟ್ ಕೂಡ ಪಡೆದಿಲ್ಲ.

ಬಾಂಗ್ಲಾದೇಶದ 16 ಸದಸ್ಯರ ತಂಡ

ಲಿಟ್ಟನ್ ದಾಸ್ (ನಾಯಕ), ತಂಜಿದ್ ಹಸನ್, ಪರ್ವೇಜ್ ಹೊಸೈನ್ ಎಮನ್, ಸೈಫ್ ಹಸನ್, ತೌಹಿದ್ ಹೃದಯ್, ಝಾಕರ್ ಅಲಿ, ಶಮೀಮ್ ಹೊಸೈನ್, ಕಾಜಿ ನೂರುಲ್ ಹಸನ್ ಸೋಹನ್, ಸಾಕಿಬ್ ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರಹಮಾನ್, ತನ್ಜಿ ಶೈಫ್ ಉದ್ದೀನ್.

ಸ್ಟ್ಯಾಂಡ್‌ಬೈ- ಸೌಮ್ಯ ಸರ್ಕಾರ್, ಮೆಹದಿ ಹಸನ್ ಮಿರಾಜ್, ತನ್ವೀರ್ ಅಹ್ಮದ್ ಮತ್ತು ಹಸನ್ ಮಹಮೂದ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:40 pm, Fri, 22 August 25