Asia Cup 2025: ‘ಗ್ಯಾರಂಟಿ ನೀಡಲು ಸಾಧ್ಯವಿಲ್ಲ’.. ಆದರೆ; ಏಷ್ಯಾಕಪ್​ನಲ್ಲೂ ಭಾರತ- ಪಾಕ್ ಪಂದ್ಯ ರದ್ದು?

Asia Cup 2025: 2025ರ ಏಷ್ಯಾಕಪ್ ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 14ಕ್ಕೆ ನಿಗದಿಯಾಗಿದೆ. ಆದರೆ, ಇತ್ತೀಚಿನ ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಪಂದ್ಯ ನಡೆಯಲಿದೆ ಎಂದು ಹೇಳಿದ್ದರೂ, ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಎಂಟು ತಂಡಗಳು ಟಿ20 ಸ್ವರೂಪದಲ್ಲಿ ಪಾಲ್ಗೊಳ್ಳಲಿವೆ.

Asia Cup 2025: ‘ಗ್ಯಾರಂಟಿ ನೀಡಲು ಸಾಧ್ಯವಿಲ್ಲ’.. ಆದರೆ; ಏಷ್ಯಾಕಪ್​ನಲ್ಲೂ ಭಾರತ- ಪಾಕ್ ಪಂದ್ಯ ರದ್ದು?
Asia Cup 2025

Updated on: Aug 07, 2025 | 8:23 PM

2025 ರ ಏಷ್ಯಾಕಪ್‌ (Asia Cup 2025) ಇದೇ ಸೆಪ್ಟೆಂಬರ್ 9 ರಿಂದ ಯುಎಇಯಲ್ಲಿ ಆರಂಭವಾಗಲಿದೆ. ಬಿಸಿಸಿಐ (BCCI) ಆತಿಥ್ಯದಲ್ಲಿ ನಡೆಯಲ್ಲಿರುವ ಈ ಪಂದ್ಯಾವಳಿಯಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಪಂದ್ಯಾವಳಿ 9 ರಿಂದ ಆರಂಭವಾದರೂ ಈ ಲೀಗ್​ನ ಹೈವೋಲ್ಟೇಜ್ ಕದನ ಸೆಪ್ಟೆಂಬರ್ 14 ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳ ನಡುವೆ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಟೀಂ ಇಂಡಿಯಾ ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ತೆರಳಲಿದ್ದು, ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆ ನಂತರ ಸೆಪ್ಟೆಂಬರ್ 14 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಆದರೆ ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ ಪಂದ್ಯವನ್ನು ಆಡುತ್ತದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ?

ಭಾರತ-ಪಾಕಿಸ್ತಾನ ಪಂದ್ಯ ರದ್ದಾಗುವುದೇ?

ಎರಡು ದೇಶಗಳ ನಡುವಿನ ಉದ್ವಿಗ್ನತೆಯ ನಂತರ, ಅನೇಕ ಭಾರತೀಯ ಅಭಿಮಾನಿಗಳು ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಪಂದ್ಯವನ್ನು ಆಡಬಾರದು ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ಆ ಪ್ರಕಾರ ಇತ್ತೀಚೆಗೆ ಮುಗಿದ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನಲ್ಲೂ ಉಭಯ ತಂಡಗಳ ಪಂದ್ಯ ನಡೆಯಲಿಲ್ಲ. ಭಾರತ ತಂಡದ ಆಟಗಾರರು ಪಾಕ್ ವಿರುದ್ಧದ ಪಂದ್ಯವನ್ನು ಆಡಲು ನಿರಾಕರಿಸಿ ಟೂರ್ನಿಯಿಂದ ಹೆಸರನ್ನು ಹಿಂತೆಗೆದುಕೊಂಡರು. ಹೀಗಾಗಿ ಏಷ್ಯಾಕಪ್‌ನಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ.

ಈ ನಡುವೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಭಾನ್ ಅಹ್ಮದ್ ಉಭಯ ತಂಡಗಳ ನಡುವಿನ ಪಂದ್ಯದ ಕುರಿತು ಮಾತನಾಡಿದ್ದು, ‘ಏಷ್ಯಾಕಪ್‌ನಲ್ಲಿ ಈ ಎರಡೂ ತಂಡಗಳ ನಡುವೆ ಪಂದ್ಯ ನಡೆಯಲಿದೆ ಎಂದಿದ್ದಾರೆ. ಆದಾಗ್ಯೂ ನಾವು ಯಾವುದೇ ಗ್ಯಾರಂಟಿ ನೀಡಲು ಸಾಧ್ಯವಿಲ್ಲ, ಆದರೆ ಏಷ್ಯಾಕಪ್ ಅನ್ನು WCL ನಂತಹ ಖಾಸಗಿ ಕಾರ್ಯಕ್ರಮದೊಂದಿಗೆ ಹೋಲಿಸುವುದು ಸರಿಯಲ್ಲ. ಏಷ್ಯಾಕಪ್‌ನಲ್ಲಿ ಆಡಲು ನಿರ್ಧಾರ ತೆಗೆದುಕೊಳ್ಳುವಾಗ, ಸರ್ಕಾರದ ಅನುಮತಿಯನ್ನು ಮುಂಚಿತವಾಗಿ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ನಾವು WCL ನಂತಹ ಪರಿಸ್ಥಿತಿಯಲ್ಲಿ ಇರಬಾರದು ಎಂದು ಆಶಿಸುತ್ತೇವೆ ಎಂದಿದ್ದಾರೆ.

Rishabh Pant Injury Update: ಏಷ್ಯಾಕಪ್​ನಿಂದ ಹೊರಬಿದ್ದ ರಿಷಭ್ ಪಂತ್; ಟೆಸ್ಟ್ ಸರಣಿಗೂ ಡೌಟ್

8 ತಂಡಗಳ ನಡುವೆ ಪಂದ್ಯಾವಳಿ

2025 ರ ಏಷ್ಯಾಕಪ್ ಅನ್ನು ಟಿ20 ಸ್ವರೂಪದಲ್ಲಿ ಆಡಲಾಗುವುದು. ಈ ಮೂಲಕ 2026 ರ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲಾಗುತ್ತದೆ. ಈ ಬಾರಿ ಎಂಟು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಭಾರತ ಮತ್ತು ಪಾಕಿಸ್ತಾನ ಯುಎಇ ಮತ್ತು ಒಮಾನ್ ಜೊತೆಗೆ ಗ್ರೂಪ್ ಎ ನಲ್ಲಿದ್ದರೆ, ಗ್ರೂಪ್ ಬಿಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳಿವೆ. ಎರಡೂ ತಂಡಗಳು ಸೂಪರ್ ಫೋರ್ ಮತ್ತು ಫೈನಲ್ ತಲುಪಿದರೆ, ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮೂರು ಬಾರಿ ಮುಖಾಮುಖಿಯಾಗಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ