ODI World Cup 2025: ಏಕದಿನ ವಿಶ್ವಕಪ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುವುದು ಡೌಟ್..!
ICC Women's World Cup 2025: 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಲ್ಕು ಪಂದ್ಯಗಳು ನಿಗದಿಯಾಗಿದ್ದವು. ಆದರೆ, ಕೆಎಸ್‌ಸಿಎಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿಲ್ಲ. ಹೀಗಾಗಿ, ಈ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಇತ್ತೀಚಿನ ದುರಂತದ ನಂತರ, ಕ್ರೀಡಾಂಗಣದ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿವೆ.

2025 ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ (ICC Women’s World Cup 2025) ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿದೆ. ಈ ಪಂದ್ಯಾವಳಿ ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯ ನವೆಂಬರ್ 2 ರಂದು ನಡೆಯಲಿದೆ. ವೇಳಾಪಟ್ಟಿಯ ಪ್ರಕಾರ ಈ ಐಸಿಸಿ ಟೂರ್ನಿಯ ಪಂದ್ಯಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣ ( ಬೆಂಗಳೂರು ), ಎಸಿಎ ಕ್ರೀಡಾಂಗಣ ( ಗುವಾಹಟಿ ) , ಹೋಳ್ಕರ್ ಕ್ರೀಡಾಂಗಣ (ಇಂದೋರ್), ಎಸಿಎ-ವಿಡಿಸಿಎ ಕ್ರೀಡಾಂಗಣ ( ವಿಶಾಖಪಟ್ಟಣಂ ) ಮತ್ತು ಆರ್ ಪ್ರೇಮದಾಸ ಕ್ರೀಡಾಂಗಣ ( ಕೊಲಂಬೊ ) ಗಳಲ್ಲಿ ನಡೆಯಲಿವೆ. ಆದರೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ 4 ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ.
ಬೆಂಗಳೂರಿನಿಂದ ಬೇರೆಡೆಗೆ ಶಿಫ್ಟ್?
ವಾಸ್ತವವಾಗಿ , ಬೆಂಗಳೂರಿನ ಎಂ . ಚಿನ್ನಸ್ವಾಮಿ ಕ್ರೀಡಾಂಗಣವು ಈ ಪಂದ್ಯಾವಳಿಯಲ್ಲಿ ನಾಲ್ಕು ಪಂದ್ಯಗಳನ್ನು ಆಯೋಜಿಸಲಿದೆ. ಆದರೆ ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ( ಕೆಎಸ್‌ಸಿಎ ) ಈ ಕ್ರೀಡಾಂಗಣದಲ್ಲಿ ಈ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರದಿಂದ ಇನ್ನೂ ಅಗತ್ಯ ಅನುಮೋದನೆಯನ್ನು ಪಡೆದಿಲ್ಲ. ಹೀಗಾಗಿ ಚಿನ್ನಸ್ವಾಮಿಯಲ್ಲಿ ನಡೆಯಬೇಕಿದ್ದ ಪಂದ್ಯಗಳು ಬೇರಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಶ್ರೀಲಂಕಾ ನಡುವಿನ ಉದ್ಘಾಟನಾ ಪಂದ್ಯ ಹಾಗೂ ಸೆಮಿಫೈನಲ್ ಪಂದ್ಯ ಬೇರೆಡೆ ನಡೆಯಬಹುದು.
ವಾಸ್ತವವಾಗಿ, ಈ ವರ್ಷದ ಜೂನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ಆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈ ಸಮಾರಂಭ ನಡೆಯುವುದಕ್ಕೂ ಮುನ್ನ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದಾಗಿ 11 ಜನರು ಸಾವನ್ನಪ್ಪಿದರು. ಹಾಗೆಯೇ 50 ಕ್ಕೂ ಹೆಚ್ಚು ಜನರು ಗಾಯಗೊಂಡರು. ಈ ಅವಘಡದ ನಂತರ, ರಾಜ್ಯ ಸರ್ಕಾರ ರಚಿಸಿದ ತನಿಖಾ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣವನ್ನು ದೊಡ್ಡ ಕಾರ್ಯಕ್ರಮಗಳಿಗೆ ಅಸುರಕ್ಷಿತ ಎಂದು ಘೋಷಿಸಿತು. ಅಲ್ಲದೆ ದೊಡ್ಡ ಕಾರ್ಯಕ್ರಮಗಳನ್ನು ಹೆಚ್ಚು ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರಿಸಬೇಕೆಂದು ಸೂಚಿಸಿತು. ಹೀಗಾಗಿ ಕೆಎಸ್‌ಸಿಎ, ಮಹಾರಾಜ ಟಿ20 ಪಂದ್ಯಾವಳಿಯನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರಿಸಿದೆ. ಇದೀಗ ಮಹಿಳಾ ವಿಶ್ವಕಪ್‌ನ ಪಂದ್ಯಗಳ ಬಗ್ಗೆಯೂ ಸಸ್ಪೆನ್ಸ್ ಇದೆ.
ಟಿ20 ವಿಶ್ವಕಪ್ ಗೆಲುವಿನ ಬಗ್ಗೆ ಭಾವುಕರಾಗಿ ಮಾತನಾಡಿದ ಹಾರ್ದಿಕ್; ವಿಡಿಯೋ
ಭಾರತಕ್ಕೆ ಬರುವುದಿಲ್ಲ ಪಾಕ್ ತಂಡ
12 ವರ್ಷಗಳ ನಂತರ ಭಾರತದಲ್ಲಿ ಮಹಿಳಾ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿದೆ. ಆದಾಗ್ಯೂ ಪಾಕಿಸ್ತಾನ ಮಹಿಳಾ ತಂಡವು ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತಕ್ಕೆ ಬರುವುದಿಲ್ಲ, ಈ ಕಾರಣದಿಂದಾಗಿ ಶ್ರೀಲಂಕಾವನ್ನು ಸಹ ಜಂಟಿ ಆತಿಥೇಯರನ್ನಾಗಿ ಮಾಡಲಾಗಿದೆ. ಉಳಿದಂತೆ ಈ ಪಂದ್ಯಾವಳಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಭಾಗವಾಗಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
