
ಬಹುನಿರೀಕ್ಷಿತ ಏಷ್ಯಾಕಪ್ (Asia Cup 2025) ಇಂದಿನಿಂದ ಆರಂಭವಾಗುತ್ತಿದೆ. ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗುತ್ತಿದ್ದು, ಭಾರತ ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆ ಬಳಿಕ ಪಂದ್ಯಾವಳಿಯ ಬಹುನಿರೀಕ್ಷಿತ ಪಂದ್ಯ ಭಾರತ ಹಾಗೂ ಪಾಕಿಸ್ತಾನದ (India vs Pakistan) ನಡುವೆ ಸೆಪ್ಟೆಂಬರ್ 14 ರಂದು ನಡೆಯಲಿದೆ. ಆದರೆ ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಎಲ್ಲಾ ತಂಡಗಳ ನಾಯಕರೊಂದಿಗೆ ಇಂದು ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಇದರಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಕೂಡ ಭಾಗವಹಿಸಿದ್ದರು. ಆದರೆ ಈ ಪತ್ರಿಕಾಗೋಷ್ಠಿಯಲ್ಲಿಯೂ ಉಭಯ ನಾಯಕರು ಯಾವುದೇ ಮಾತುಕತೆಯನ್ನಾಡಿಲ್ಲ, ಹಾಗೆಯೇ ಕೈ ಕೂಡ ಕುಲುಕದೆ ಅಂತರ ಕಾಯ್ದುಕೊಂಡಿದ್ದಾರೆ.
ವಾಸ್ತವವಾಗಿ ಕೆಲವು ದಿನಗಳ ಹಿಂದೆ ಭಾರತ ಹಾಗೂ ಪಾಕಿಸ್ತಾನ ತಂಡದ ಆಟಗಾರರು ಒಂದೇ ಮೈದಾನದಲ್ಲಿ ಅಭ್ಯಾಸ ನಡೆಸಿದರೂ ಒಬ್ಬರಿಗೊಬ್ಬರು ಮಾತನಾಡುವುದಾಗಲಿ ಅಥವಾ ಕಡೆ ಪಕ್ಷ ಕೈಕುಲುಕುವುದಾಗಲಿ ಮಾಡಿಲಿಲ್ಲ ಎಂದು ವರದಿಯಾಗಿತ್ತು. ಇದೀಗ ಅದಕ್ಕೆ ಪೂರಕವೆಂಬಂತೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲೂ ಉಭಯ ತಂಡಗಳ ನಾಯಕರು ಅಂತರವನ್ನು ಕಾಯ್ದುಕೊಂಡಿದ್ದಾರೆ.
— The Game Changer (@TheGame_26) September 9, 2025
ಮೇಲೆ ಹೇಳಿದಂತೆ ಪಂದ್ಯಾವಳಿಯ ಉದ್ಘಾಟನೆಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ನಡುವೆ ಯಾವುದೇ ಔಪಚಾರಿಕ ಶುಭಾಶಯ ಕೋರಿಕೆ ಇರಲಿಲ್ಲ, ಇದು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ವಾಸ್ತವವಾಗಿ, ಎಲ್ಲಾ ತಂಡಗಳ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು, ಆದರೆ ಸೂರ್ಯಕುಮಾರ್ ಮತ್ತು ಸಲ್ಮಾನ್ ಪರಸ್ಪರ ಅಂತರ ಕಾಯ್ದುಕೊಂಡರು.
At the Asia Cup Captains’ Press Conference, the Indian and Pakistani skippers avoided a handshake. pic.twitter.com/4Xlv1emCB0
— Gyanu Gautam (@gyanudatt8) September 9, 2025
ಪತ್ರಿಕಾಗೋಷ್ಠಿಯ ನಂತರ, ಸೂರ್ಯಕುಮಾರ್ ಅಫ್ಘಾನಿಸ್ತಾನ ನಾಯಕ ರಶೀದ್ ಖಾನ್ ಮತ್ತು ಇತರ ಕೆಲವು ನಾಯಕರೊಂದಿಗೆ ಮಾತುಕತೆ ನಡೆಸಿದರು, ಆದರೆ ಸಲ್ಮಾನ್ ಅವರೊಂದಿಗೆ ಯಾವುದೇ ಸಂಭಾಷಣೆ ಅಥವಾ ಹಸ್ತಲಾಘವ ಮಾಡಲಿಲ್ಲ. ಮತ್ತೊಂದೆಡೆ, ಸೂರ್ಯಕುಮಾರ್ ಔಪಚಾರಿಕವಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರೊಂದಿಗೆ ಹಸ್ತಲಾಘವ ಮಾಡಿದರು. ಟೂರ್ನಿ ಆರಂಭಕ್ಕೂ ಮುನ್ನವೇ ಉಭಯ ತಂಡಗಳ ಈ ನಡೆ ಟೂರ್ನಿಗೆ ಇನ್ನಷ್ಟು ರಂಗು ತಂದಿದೆ. ಪಂದ್ಯದ ದಿನ ಈ ಎರಡೂ ತಂಡಗಳ ನಡುವೆ ಯಾವ ರೀತಿಯ ಜಿದ್ದಾಜಿದ್ದಿನ ಹೋರಾಟವಿರುತ್ತದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Tue, 9 September 25