2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯವಹಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದರೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳಲಿದೆಯೇ ಅಥವಾ ಇಲ್ಲವೇ ಎಂಬುದು ಭಾರಿ ಚರ್ಚೆ ಹುಟ್ಟುಹಾಕಿದೆ. ಒಂದೆಡೆ ಪಾಕಿಸ್ತಾನ ಕ್ರಿಕಟ್ ಮಂಡಳಿ, ನಾವು ಏಕದಿನ ವಿಶ್ವಕಪ್ ಆಡಲು ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸಿದ್ದೇವು. ಹೀಗಾಗಿ ಇದೀಗ ಚಾಂಪಿಯನ್ಸ್ ಟ್ರೋಫಿ ಆಡಲು ಬಿಸಿಸಿಐ, ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂಬ ವಾದ ಮುಂದಿಟ್ಟಿದೆ. ಆದರೆ ಈ ನಿರ್ಧಾರವನ್ನು ಭಾರತ ಸರ್ಕಾರದ ಹೆಗಲಿಗೆ ಹೊರಿಸಿರುವ ಬಿಸಿಸಿಐ ಅಡ್ಡಗೋಡೆಯ ಮೇಲೆ ದೀಪ ಇಟ್ಟಿದೆ. ಇದೆಲ್ಲದರ ನಡುವೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು, ಮುಂದಿನ ವರ್ಷ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತ ಪ್ರವಾಸ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮುಂದಿನ ವರ್ಷ ನಡೆಯಲ್ಲಿರುವ ಏಷ್ಯಾಕಪ್‌ಗೆ ಭಾರತ ಆತಿಥ್ಯವಹಿಸುತ್ತಿರುವುದು.
ವರದಿಗಳ ಪ್ರಕಾರ, ಭಾರತವು 2025 ರ ಪುರುಷರ ಏಷ್ಯಾಕಪ್ ಅನ್ನು ಆಯೋಜಿಸುವ ಹಕ್ಕು ಪಡೆದಿದೆ. ಈ ಟೂರ್ನಿ 20 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ. ಇದರಲ್ಲಿ 6 ತಂಡಗಳು ಭಾಗವಹಿಸಲಿದ್ದು, ಈಗಾಗಲೇ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ತಂಡಗಳು ಅರ್ಹತೆ ಪಡೆದುಕೊಂಡಿದ್ದು, ಆರನೇ ತಂಡವನ್ನು ಅರ್ಹತಾ ಸುತ್ತಿನ ಮೂಲಕ ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಬೇಕಾಗುತ್ತದೆ.
ವಾಸ್ತವವಾಗಿ 2023 ರ ಏಷ್ಯಾಕಪ್ ಅನ್ನು ಆಯೋಜಿಸುವ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು. ಆದರೆ ಈ ಟೂರ್ನಿಗಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಸರ್ಕಾರ ನಿರಾಕರಿಸಿತ್ತು. ಇದರಿಂದಾಗಿ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಯಿತು. ಅದರ ಪ್ರಕಾರ ಭಾರತದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆದಿದ್ದವು.
ಏಷ್ಯಾ ಕ್ರಿಕೆಟ್ ಕೌನ್ಸಿಲ್ ಬಿಡುಗಡೆ ಮಾಡಿದ IEOI ದಾಖಲೆಯ ಪ್ರಕಾರ, ಭಾರತವು 2025 ರಲ್ಲಿ ನಡೆಯಲ್ಲಿರುವ ಪುರುಷರ ಏಷ್ಯಾಕಪ್‌ಗೆ ಆತಿಥ್ಯವಹಿಸಲಿದೆ. ಈ ಟೂರ್ನಿ ಟಿ20 ಸ್ವರೂಪದಲ್ಲಿ ನಡೆಯಲ್ಲಿದೆ. ಅದೇ ಸಮಯದಲ್ಲಿ, 2027 ರ ಏಷ್ಯಾಕಪ್ ಆಯೋಜಿಸುವ ಹಕ್ಕನ್ನು ಬಾಂಗ್ಲಾದೇಶಕ್ಕೆ ನೀಡಲಾಗಿದೆ. ಆದರೆ 2027ರ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಈ ಎರಡೂ ಆವೃತ್ತಿಗಳಲ್ಲೂ ತಲಾ 13 ಪಂದ್ಯಗಳು ನಡೆಯಲಿವೆ. ವೇಳಾಪಟ್ಟಿ, ದಿನಾಂಕ, ಸ್ವರೂಪ ಮತ್ತು ಸ್ಥಳ ಸೇರಿದಂತೆ ಈ ಎಲ್ಲಾ ಮಾಹಿತಿಯನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಕೂಡ ಬದಲಾಯಿಸಬಹುದು ಎಂದು ದಾಖಲೆಯಲ್ಲಿ ಹೇಳಲಾಗಿದೆ.
ಏಷ್ಯಾಕಪ್ ಅನ್ನು 1984 ರಲ್ಲಿ ಪ್ರಾರಂಭಿಸಲಾಯಿತು. ಇದುವರೆಗೆ ಈ ಟೂರ್ನಿಯ 16 ಆವೃತ್ತಿಗಳನ್ನು ಆಡಲಾಗಿದೆ. ಆದರೆ ಭಾರತ ಒಮ್ಮೆ ಮಾತ್ರ ಏಷ್ಯಾಕಪ್‌ಗೆ ಆತಿಥ್ಯ ವಹಿಸಿದೆ. ಭಾರತವು 1990/91 ರ ಆವೃತ್ತಿಯ ಏಷ್ಯಾಕಪ್ ಅನ್ನು ಆಯೋಜಿಸಿತ್ತು. ಆ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇಂತಹ ಪರಿಸ್ಥಿತಿಯಲ್ಲಿ 2025ರ ಏಷ್ಯಾಕಪ್ ತುಂಬಾ ವಿಶೇಷವಾಗಿರಲಿದೆ. 34 ವರ್ಷಗಳ ಬಳಿಕ ಭಾರತದಲ್ಲಿ ಈ ಟೂರ್ನಿ ನಡೆಯಲಿದೆ.
ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಭಾರತ ಇದುವರೆಗೆ 8 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿದೆ. ಅದೇ ಸಮಯದಲ್ಲಿ, ಶ್ರೀಲಂಕಾ ಈ ಪಟ್ಟಿಯಲ್ಲಿ 6 ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಏಷ್ಯಾಕಪ್‌ನಲ್ಲಿ ಎರಡು ಬಾರಿ ಮಾತ್ರ ಚಾಂಪಿಯನ್ ಆಗಲು ಸಾಧ್ಯವಾಗಿದೆ. ಕಳೆದ ಏಷ್ಯಾಕಪ್ ಅನ್ನು ಭಾರತ ಗೆದ್ದುಕೊಂಡಿತ್ತು. ಟೀಂ ಇಂಡಿಯಾ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ದಾಖಲೆಯ 8ನೇ ಬಾರಿಗೆ ಏಷ್ಯನ್ ಕಿರೀಟ ತೊಟ್ಟಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ