ಫೋರ್ ತಡೆದ ಫೀಲ್ಡರ್: 5 ರನ್ ಓಡಿದ ಬ್ಯಾಟರ್ಸ್..!
Ireland vs Zimbabwe: ಝಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಐರ್ಲೆಂಡ್ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ಪ್ರಥಮ ಇನಿಂಗ್ಸ್ನಲ್ಲಿ 210 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಐರ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 250 ರನ್ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಝಿಂಬಾಬ್ವೆ 197 ರನ್ಗಳಿಗೆ ಆಲೌಟ್ ಆಗಿದೆ. ಅದರಂತೆ ದ್ವಿತೀಯ ಇನಿಂಗ್ಸ್ನಲ್ಲಿ 158 ರನ್ಗಳ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ತಂಡವು 4 ವಿಕೆಟ್ಗಳ ಜಯ ಸಾಧಿಸಿದೆ.
ಕ್ರಿಕೆಟ್ ಅಂಗಳದಲ್ಲಿ ಬ್ಯಾಟರ್ಗಳು ಒಂದೆರಡು ರನ್ಗಳು ಓಡುವುದು ಸಾಮಾನ್ಯ. ಇನ್ನು ಅವಕಾಶ ಸಿಕ್ಕರೆ ಮೂರನೇ ರನ್ ಅನ್ನು ಸಹ ಪೂರ್ಣಗೊಳಿಸುತ್ತಾರೆ. ಇದಾಗ್ಯೂ 4 ರನ್ಗಳನ್ನು ಓಡಿದ ಉದಾಹರಣೆ ತುಂಬಾ ವಿರಳ. ಆದರೆ ಐರ್ಲೆಂಡ್ ಬ್ಯಾಟರ್ಗಳು ಒಟ್ಟು 5 ರನ್ಗಳನ್ನು ಓಡುವ ಮೂಲಕ ವಿಶ್ವ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಇಂತಹದೊಂದು ಅಪರೂಪದ ರನ್ ಓಟ ಕಂಡು ಬಂದಿದ್ದು ಐರ್ಲೆಂಡ್ ಮತ್ತು ಝಿಂಬಾಬ್ವೆ ನಡುವಣ ಟೆಸ್ಟ್ ಪಂದ್ಯದಲ್ಲಿ. ಉತ್ತರ ಐರ್ಲೆಂಡ್ನ ಬೆಲ್ಫಾಸ್ಟ್ನಲ್ಲಿ ನಡೆದ ಈ ಪಂದ್ಯದ 4ನೇ ಇನಿಂಗ್ಸ್ನಲ್ಲಿ ಐರ್ಲೆಂಡ್ನ ಲೋರ್ಕನ್ ಟಕರ್ ಮತ್ತು ಆಂಡಿ ಮ್ಯಾಕ್‌ಬ್ರೈನ್ ಒಟ್ಟು 5 ರನ್ಗಳು ಓಡಿದ್ದಾರೆ.
ರಿಚರ್ಡ್ ನಾಗರವ ಎಸೆದ 18ನೇ ಓವರ್ನ ಎರಡನೇ ಎಸೆತವನ್ನು ಆಂಡಿ ಮ್ಯಾಕ್‌ಬ್ರೈನ್ ಡೀಪ್ ಕವರ್ನತ್ತ ಬಾರಿಸಿದ್ದರು. ಇತ್ತ ಚೆಂಡಿನ ಹಿಂದೆ ಓಡಿದ ಝಿಂಬಾಬ್ವೆ ಫೀಲ್ಡರ್ ತೆಂಡೈ ಚಟಾರ ಬೌಂಡರಿ ಲೈನ್ ಬಳಿ ಬಾಲ್ ಅನ್ನು ತಡೆಯುವಲ್ಲಿ ಯಶಸ್ವಿಯಾದರು. ಆದರೆ ಬೌಂಡರಿ ಲೈನ್ ಬಳಿ ಚೆಂಡನ್ನು ತಡೆದ ತೆಂಡೈ ನಿಯಂತ್ರಣ ತಪ್ಪಿ ಜಾಹೀರಾತು ಹೋರ್ಡಿಂಗ್ಗಳನ್ನು ದಾಟಿ ಮುಂದಕ್ಕೆ ಹೋಗಿ ಬಿದ್ದಿದ್ದಾರೆ. ಇದರ ನಡುವೆ ಐರ್ಲೆಂಡ್ ಬ್ಯಾಟರ್ಗಳು ಓಟದ ಮೂಲಕವೇ ಐದು ರನ್ಗಳನ್ನು ಕಲೆಹಾಕಿದ್ದಾರೆ. ಇದೀಗ ಲೋರ್ಕನ್ ಟಕರ್ ಮತ್ತು ಆಂಡಿ ಮ್ಯಾಕ್‌ಬ್ರೈನ್ ಅವರ ಐದು ರನ್ಗಳ ಓಟದ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋ ತುಣಕನ್ನು ಈ ಸುದ್ದಿಯ ಮೇಲೆ ವೀಕ್ಷಿಸಬಹುದು.