
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ 2025 ರ ಏಷ್ಯಾಕಪ್ನ (Asia Cup 2025) ಆರನೇ ಪಂದ್ಯದಲ್ಲಿ ಕೋಟ್ಯಾಂತರ ಭಾರತೀಯರು ಯಾವ ರೀತಿಯ ಫಲಿತಾಂಶ ಬರಬೇಕು ಎಂದು ದೇವರಲ್ಲಿ ಮೊರೆ ಇಟ್ಟಿದ್ದರೋ ಅದೇ ಫಲಿತಾಂಶ ಹೊರಬಿದ್ದಿದೆ. ಬದ್ಧವೈರಿಗಳ ಕದನದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿದ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಭಾರತದ ಬೌಲಿಂಗ್ ಮುಂದೆ ಮಕಾಡೆ ಮಲಗಿ 127 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 15.5 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆಬೀರಿತು.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಪಾಕ್ ತಂಡಕ್ಕೆ ಟೀಂ ಇಂಡಿಯಾ ವೇಗಿಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರಿತ್ ಬುಮ್ರಾ ಎರಡು ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು. ಬೌಲಿಂಗ್ ಆರಂಭಿಸಿದ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ಸ್ಯಾಮ್ ಅಯೂಬ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ನಂತರ ಜಸ್ಪ್ರೀತ್ ಬುಮ್ರಾ ಪಂದ್ಯದ ಎರಡನೇ ಓವರ್‌ನಲ್ಲಿ ಮೊಹಮ್ಮದ್ ಹ್ಯಾರಿಸ್ ಅವರನ್ನು 3 ರನ್‌ಗಳಿಗೆ ಔಟ್ ಮಾಡಿದರು.
ಈ ವೇಳೆ ಸಾಹಿಬ್‌ಜಾದಾ ಮತ್ತು ಫಖರ್ ಜಮಾನ್ ಮೂರನೇ ವಿಕೆಟ್‌ಗೆ 39 ರನ್‌ಗಳ ಜೊತೆಯಾಟವನ್ನಾಡಿದರು. ಈ ವೇಳೆ ದಾಳಿಗಿಳಿದ ಅಕ್ಷರ್ ಪಟೇಲ್ 17 ರನ್ ಬಾರಿಸಿ ಇನ್ನಿಂಗ್ಸ್ ಕಟ್ಟುತ್ತಿದ್ದ ಫಖರ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು. ನಂತರ 10 ನೇ ಓವರ್‌ನ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ ಪಾಕ್ ನಾಯಕ ಸಲ್ಮಾನ್ ಆಘಾ ಅವರನ್ನು ಕೇವಲ 3 ರನ್‌ಗಳಿಗೆ ಪೆವಿಲಿಯನ್ ಸೇರುವಂತೆ ಮಾಡಿದರು. 13 ನೇ ಓವರ್‌ನ ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ಕುಲ್ದೀಪ್ ಯಾದವ್ ಪಾಕಿಸ್ತಾನಕ್ಕೆ ಸತತ ಎರಡು ಹೊಡೆತಗಳನ್ನು ನೀಡಿದರು. ಮೊದಲು ಹಸನ್ ನವಾಜ್ (5) ವಿಕೆಟ್ ಪಡೆದ ಕುಲ್ದೀಪ್ ಆ ಬಳಿಕ ಮೊಹಮ್ಮದ್ ನವಾಜ್ (0) ಅವರನ್ನು ಔಟ್ ಮಾಡಿದರು.
2⃣ wins on the bounce for #TeamIndia! 🙌
A dominating show with bat & ball from Surya Kumar Yadav & Co. to bag 2 more points! 👏 💪
Scorecard ▶️ https://t.co/W2OEWMTVaY#AsiaCup2025 pic.twitter.com/hM7iin7AAq
— BCCI (@BCCI) September 14, 2025
17 ನೇ ಓವರ್‌ನ ಮೊದಲ ಎಸೆತದಲ್ಲಿ ಸಾಹಿಬ್‌ಜಾದಾ ಫರ್ಹಾನ್ ಅವರನ್ನು ಔಟ್ ಮಾಡುವ ಮೂಲಕ ಕುಲ್ದೀಪ್ 3 ವಿಕೆಟ್ ಪಡೆದ ಸಾಧನೆ ಮಾಡಿದರು. ಪಾಕ್ ಪರ ಅತ್ಯಧಿಕ ರನ್‌ಗಳ ಇನ್ನಿಂಗ್ಸ್ ಆಡಿದ ಸಾಹಿಬ್‌ಜಾದಾ 40 ರನ್ ಬಾರಿಸಿದರು. ವರುಣ್ ಚಕ್ರವರ್ತಿ 11 ರನ್ ಗಳಿಸಿದ್ದ ಫಹೀಮ್ ಅಶ್ರಫ್ ಅವರನ್ನು ಎಲ್ಬಿಡಬ್ಲ್ಯೂ ಮಾಡುವ ಮೂಲಕ ತಮ್ಮ ಮೊದಲ ವಿಕೆಟ್ ಪಡೆದರು. ಬುಮ್ರಾ, ಸುಫಿಯಾನ್ ಮುಕಿಮ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಪಾಕಿಸ್ತಾನಕ್ಕೆ ಒಂಬತ್ತನೇ ಹೊಡೆತ ನೀಡಿದರು. ಆದರೆ ಕೊನೆಯ ಕೆಲವು ಓವರ್‌ಗಳಲ್ಲಿ ಶಾಹೀನ್ ಅದ್ಭುತ ಪ್ರದರ್ಶನ ನೀಡಿ ಸಿಕ್ಸರ್ಗಳ ಮಳೆಗರೆದರು. ಶಾಹೀನ್ 16 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ ಅಜೇಯ 33 ರನ್ ಬಾರಿಸಿದರು.
128 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಅಭಿಷೇಕ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಂಡಕ್ಕೆ ಮತ್ತೊಮ್ಮೆ ಉತ್ತಮ ಆರಂಭ ನೀಡಿದರು, ಆದರೆ ಇಬ್ಬರೂ ಪವರ್‌ಪ್ಲೇನಲ್ಲಿಯೇ ತಮ್ಮ ವಿಕೆಟ್‌ಗಳನ್ನು ಕಳೆದುಕೊಂಡರು. ಗಿಲ್ 10 ರನ್ ಗಳಿಸಿ ಔಟಾದರೆ, ಅಭಿಷೇಕ್ ಶರ್ಮಾ 31 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಆದಾಗ್ಯೂ ಅಭಿಷೇಕ್ ಔಟಾಗುವುದಕ್ಕೂ ಮುನ್ನ ತಂಡದ ಗೆಲುವನ್ನು ಖಚಿತ ಪಡಿಸಿದರು. ಇದರ ನಂತರ, ನಾಯಕ ಸೂರ್ಯಕುಮಾರ್, ತಿಲಕ್ ವರ್ಮಾ ಅವರೊಂದಿಗೆ ಮೂರನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನಡೆಸಿದರು. ತಿಲಕ್ ವರ್ಮಾ 31 ರನ್ ಗಳಿಸಿ ಔಟಾದರು. ನಂತರ ಶಿವಂ ದುಬೆ ಮತ್ತು ಸೂರ್ಯಕುಮಾರ್ ಒಟ್ಟಾಗಿ ಭಾರತಕ್ಕೆ ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ನಾಯಕ ಸೂರ್ಯ 37 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 47 ರನ್ ಬಾರಿಸಿದರೆ, ಶಿವಂ ದುಬೆ 1 ಸಿಕ್ಸರ್ ಸಹಿತ 10 ರನ್ ಬಾರಿಸಿ ಅಜೇಯರಾಗಿ ಉಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 pm, Sun, 14 September 25