ಸೈಲೆಂಟ್​​ ಆಗಿ ಇದ್ಬಿಡಿ... ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು..!

ಸೈಲೆಂಟ್​​ ಆಗಿ ಇದ್ಬಿಡಿ… ಆಸ್ಟ್ರೇಲಿಯನ್ನರಿಗೆ ವಿರಾಟ್ ಕೊಹ್ಲಿ ತಾಕೀತು..!

ಝಾಹಿರ್ ಯೂಸುಫ್
|

Updated on:Dec 15, 2024 | 11:37 AM

Australia vs India, 3rd Test: ಟ್ರಾವಿಸ್ ಹೆಡ್ ಅವರ ಈ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು 70 ಓವರ್​​ಗಳಲ್ಲಿ 3 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಟ್ರಾವಿಸ್ ಹೆಡ್ (103) ಹಾಗೂ ಸ್ಟೀವ್ ಸ್ಮಿತ್ (65) ಬ್ಯಾಟಿಂಗ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಬ್ರಿಸ್ಬೇನ್​ನ ಗಾಬಾ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಇದೀಗ ಮೊದಲ ಇನಿಂಗ್ಸ್​ ಬ್ಯಾಟಿಂಗ್ ಮಾಡುತ್ತಿದೆ.

ಈ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದ್ದು, ಇದರಿಂದಾಗಿ ಕೇವಲ 13.2 ಓವರ್​​ಗಳನ್ನು ಮಾತ್ರ ಆಡಲಾಗಿತ್ತು. ಇನ್ನು ದ್ವಿತೀಯ ದಿನದಾಟದ ಆರಂಭದಲ್ಲೇ ಜಸ್​ಪ್ರೀತ್ ಬುಮ್ರಾ ಉಸ್ಮಾನ್ ಖ್ವಾಜಾ (21) ಹಾಗೂ ನಾಥನ್ ಮೇಕ್​ಸ್ವೀನಿ (9) ವಿಕೆಟ್ ಕಬಳಿಸಿದ್ದರು.

ಇನ್ನು ಮೂರನೇ ವಿಕೆಟ್ ಮೂಡಿಬಂದಿದ್ದು ನಿತೀಶ್ ಕುಮಾರ್ ರೆಡ್ಡಿ ಓವರ್​ ಮೂಲಕ. ನಿತೀಶ್ ಎಸೆದ 34ನೇ ಓವರ್​ನ 2ನೇ ಎಸೆತದಲ್ಲಿ ಮಾರ್ನಸ್ ಲಾಬುಶೇನ್ (12) ಸೆಕೆಂಡ್ ಸ್ಲಿಪ್​ನಲ್ಲಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದ್ದರು. ದಿಢೀರಣೆ ತೂರಿ ಬಂದ ಈ ಚೆಂಡನ್ನು ಅದ್ಭುತವಾಗಿ ಹಿಡಿದ ವಿರಾಟ್ ಕೊಹ್ಲಿ ಆಸ್ಟ್ರೇಲಿಯಯನ್ನ ಪ್ರೇಕ್ಷಕರತ್ತ ಮುಖ ಮಾಡಿ ಸೈಲೆಂಟ್ ಆಗಿರುವಂತೆ ಕೈ ಸನ್ನೆ ತೋರಿಸಿದರು.

ಇದಕ್ಕೂ ಮುನ್ನ ಅಡಿಲೇಡ್​ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ ವೇಳೆಯೂ ವಿರಾಟ್ ಕೊಹ್ಲಿ ಆಸ್ಟ್ರೇಲಿಯನ್ ಅಭಿಮಾನಿಗಳತ್ತ ತಿರುಗಿ ಬಾಯಿ ಮುಚ್ಕೊಂಡಿರಬೇಕು ಎಂದು ಕೈ ಸನ್ನೆ ಮಾಡಿ ಖಡಕ್ ಸೂಚನೆ ನೀಡಿದ್ದರು. ಇದೀಗ ಮತ್ತೊಮ್ಮೆ ಕಿಂಗ್ ಕೊಹ್ಲಿ ಆಸೀಸ್ ಅಭಿಮಾನಿಗಳನ್ನು ಟಾರ್ಗೆಟ್ ಮಾಡಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ತಂಡವು 70 ಓವರ್​​ಗಳ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿದೆ. ಕ್ರೀಸ್​ನಲ್ಲಿ ಶತಕ ಸಿಡಿಸಿರುವ ಟ್ರಾವಿಸ್ ಹೆಡ್ (103) ಹಾಗೂ ಸ್ಟೀವ್ ಸ್ಮಿತ್ (65) ಬ್ಯಾಟಿಂಗ್ ಮಾಡುತ್ತಿದ್ದಾರೆ.

 

Published on: Dec 15, 2024 11:37 AM