AUS vs PAK: ಆಸೀಸ್ ಮಾರಕ ದಾಳಿಗೆ ಪಾಕ್ ತತ್ತರ; ಮೊದಲ ಟೆಸ್ಟ್ ಸೋತ ಶಾನ್ ಮಸೂದ್ ಪಡೆ

|

Updated on: Dec 17, 2023 | 3:08 PM

AUS vs PAK: ಪರ್ತ್​ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ನಾಲ್ಕನೇ ದಿನದಲ್ಲಿಯೇ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ನಿರಸ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ 360 ರನ್‌ಗಳ ಹೀನಾಯ ಸೋಲು ಅನುಭವಿಸಿದೆ.

AUS vs PAK: ಆಸೀಸ್ ಮಾರಕ ದಾಳಿಗೆ ಪಾಕ್ ತತ್ತರ; ಮೊದಲ ಟೆಸ್ಟ್ ಸೋತ ಶಾನ್ ಮಸೂದ್ ಪಡೆ
ಆಸ್ಟ್ರೇಲಿಯಾ ತಂಡ
Follow us on

ಪರ್ತ್​ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ (Australia vs Pakistan) ನಾಲ್ಕನೇ ದಿನದಲ್ಲಿಯೇ ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ನಿರಸ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡ 360 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಬಾಬರ್ ಆಝಂ (Babar Azam) ಬಳಿಕ ಪಾಕಿಸ್ತಾನ ಟೆಸ್ಟ್ ತಂಡದ ನಾಯಕತ್ವವಹಿಸಿಕೊಂಡಿದ್ದ ಶಾನ್ ಮಸೂದ್‌ಗೆ (Shan Masood) ಉತ್ತಮ ಆರಂಭ ಸಿಕ್ಕಿಲ್ಲ. ನಾಯಕತ್ವದ ಜೊತೆಗೆ ಮಸೂದ್ ಬ್ಯಾಟಿಂಗ್‌ನಲ್ಲೂ ವಿಫಲರಾದರು. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ 100 ರನ್ ಗಳಿಸಲು ಸಾಧ್ಯವಾಗದೆ ಕೇವಲ 89 ರನ್‌ಗಳಿಗೆ ಆಲೌಟ್ ಆಯಿತು.

ವಾರ್ನರ್ ಸ್ಮರಣೀಯ ಇನ್ನಿಂಗ್ಸ್

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರು 164 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ವಾರ್ನರ್ ಹೊರತುಪಡಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಮಿಚೆಲ್ ಮಾರ್ಷ್​ 90 ರನ್​ಗಳ ಇನ್ನಿಂಗ್ಸ್ ಆಡಿದರು. ಹಾಗೆಯೇ ಉಸ್ಮಾನ್ ಖವಾಜಾ ಹಾಗೂ ಟ್ರಾವಿಸ್ ಹೆಡ್​ ಕೂಡ ಕ್ರಮವಾಗಿ 41 ಹಾಗೂ 40 ರನ್​ಗಳ ಕೊಡುಗೆ ನೀಡಿದರು. ಹೀಗಾಗಿ ಆತಿಥೇಯ ತಂಡ ಮೊದಲ ಇನಿಂಗ್ಸ್‌ನಲ್ಲಿ 487 ರನ್ ಗಳಿಸಿತ್ತು.

ಬಾಬರ್ ಅಟ್ಟರ್ ಫ್ಲಾಪ್

ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡದ ಪರ ಆರಂಭಿಕ ಇಮಾಮ್ ಉಲ್ ಹಕ್ 62 ರನ್​ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಮತ್ತೊಬ್ಬ ಆರಂಭಿಕ ಅಬ್ದುಲ್ಲಾ ಶಫೀಕ್ 41 ರನ್​ಗಳ ಕೊಡುಗೆ ನೀಡಿದರು. ನಾಯಕ ಶಾನ್ ಮಸೂದ್ 30 ರನ್​ಗಳಿಗೆ ಸುಸ್ತಾದರೆ, ಮಾಜಿ ನಾಯಕ ಬಾಬರ್ 21 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಉಳಿದಂತೆ ಸೌದ್ ಶಕೀಲ್ ಹಾಗೂ ಸಲ್ಮಾನ್ ಅಗ ತಲಾ 28 ರನ್​ಗಳ ಕೊಡುಗೆ ನೀಡಿದರು. ಅಂತಿಮವಾಗಿ ತಂಡ 271 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಆಸೀಸ್ ಪರ ಬೌಲಿಂಗ್​ನಲ್ಲಿ ಮಿಂಚಿದ ನಾಥನ್ ಲಿಯಾನ್ 3 ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ತಲಾ ಎರಡು ವಿಕೆಟ್ ಪಡೆದರು.

90 ರನ್ ಬಾರಿಸಿದ ಖವಾಜಾ

216 ರನ್‌ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಉಸ್ಮಾನ್ ಖವಾಜಾ ಅವರ 90 ರನ್, ಸ್ಟೀವ್ ಸ್ಮಿತ್ ಅವರ 45 ರನ್ ಹಾಗೂ ಮಿಚೆಲ್ ಮಾರ್ಷ್​ ಅವರ 63 ರನ್​ಗಳ ಇನ್ನಿಂಗ್ಸ್​ನಿಂದಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಪಾಕಿಸ್ತಾನ ಗೆಲುವಿಗೆ 450 ರನ್‌ಗಳ ಗುರಿ ನೀಡಿತು.

89 ರನ್‌ಗಳಿಗೆ ಆಲೌಟ್

ಬೃಹತ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಮೊದಲ ಇನ್ನಿಂಗ್ಸ್​ನಂತೆಯೇ ಎರಡನೇ ಇನ್ನಿಂಗ್ಸ್​ನಲ್ಲೂ ತನ್ನ ಕಳಪೆ ಬ್ಯಾಟಿಂಗ್ ಮುಂದುವರೆಸಿತು. ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಸೌದ್ ಶಕೀಲ್ 24 ರನ್ ಬಾರಿಸಿದ್ದು, ಬಿಟ್ಟರೆ ಉಳಿದ ಬ್ಯಾಟರ್​ಗಳು ಕೇವಲ ಒಂದಂಕ್ಕಿಗೆ ಸುಸ್ತಾದರು. ಹೀಗಾಗಿ ಇಡೀ ತಂಡ 89 ರನ್‌ಗಳಿಗೆ ಆಲೌಟ್ ಆಯಿತು.

ನಾಥನ್ ಲಿಯಾನ್ ಮ್ಯಾಜಿಕ್

ಆಸೀಸ್ ಪರ ಆಫ್​ ಸ್ಪಿನ್ನರ್ ನಾಥನ್ ಲಿಯಾನ್ ಮೊದಲ ಇನ್ನಿಂಗ್ಸ್‌ನಲ್ಲಿ ಮೂರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್ ಪಡೆದರು. ಆದರೆ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್‌ವುಡ್ ಎರಡನೇ ಇನ್ನಿಂಗ್ಸ್‌ನಲ್ಲಿ ತಲಾ 3 ವಿಕೆಟ್ ಪಡೆದರು. ಆದರೆ ಲಿಯಾನ್ ಅವರ ಈ ಐದು ವಿಕೆಟ್‌ಗಳು ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್‌ಗಳ ಗಡಿಯನ್ನು ಮೀರಿ ಕೊಂಡೊಯ್ದವು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ8ನೇ ಬೌಲರ್ ಎಂಬ ಖ್ಯಾತಿಗೆ ಲಿಯಾನ್ ಭಾಜನರಾದರು. ಇದುವರೆಗೆ 123 ಪಂದ್ಯಗಳನ್ನಾಡಿರುವ ಲಿಯಾನ್ 501 ವಿಕೆಟ್‌ ಪಡೆದಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 23 ಬಾರಿ ಐದು ವಿಕೆಟ್ ಪಡೆದಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಮುಖಾಮುಖಿ

ಮೂರು ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ ತಂಡ ಈಗ 1-0 ಅಂತರದಲ್ಲಿ ಹಿನ್ನಡೆಯಲ್ಲಿದೆ. ಸರಣಿಯ ಎರಡನೇ ಪಂದ್ಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವಾಗಿದೆ. ಕ್ರಿಸ್‌ಮಸ್ ಮರುದಿನ ಈ ಪಂದ್ಯ ಆರಂಭವಾಗಲಿದೆ. ಸರಣಿಯ ಎರಡನೇ ಪಂದ್ಯ ಡಿಸೆಂಬರ್ 26 ರಿಂದ 30 ರವರೆಗೆ ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಆ ಪಂದ್ಯದಲ್ಲಿ ಪಾಕಿಸ್ತಾನ ಸರಣಿಯಲ್ಲಿ ಪುನರಾಗಮನದ ಮೇಲೆ ಕಣ್ಣಿಟ್ಟಿದೆ. ಕಾಂಗರೂ ತಂಡ ಸರಣಿ ಗೆಲ್ಲಲು ಬಯಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:47 pm, Sun, 17 December 23