AUS vs WI: ಮ್ಯಾಕ್ಸ್‌ವೆಲ್ ಶತಕ; ಟಿ20 ಸರಣಿ ಸೋತ ವೆಸ್ಟ್ ಇಂಡೀಸ್

|

Updated on: Feb 11, 2024 | 7:00 PM

AUS vs WI: ಆಸ್ಟ್ರೇಲಿಯಾದ ಅಡಿಲೇಡ್ ಓವಲ್​ನಲ್ಲಿ ನಡೆದ ಆತಿಥೇಯ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನು 34 ರನ್​ಗಳಿಂದ ಗೆದ್ದುಕೊಳ್ಳುವ ಮೂಲಕ ಆಸ್ಟ್ರೇಲಿಯಾ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ

AUS vs WI: ಮ್ಯಾಕ್ಸ್‌ವೆಲ್ ಶತಕ; ಟಿ20 ಸರಣಿ ಸೋತ ವೆಸ್ಟ್ ಇಂಡೀಸ್
ಆಸ್ಟ್ರೇಲಿಯಾ- ವೆಸ್ಟ್ ಇಂಡೀಸ್
Follow us on

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ (Australia vs West Indies) ತಂಡ ಮೂರು ಮಾದರಿಯ ಸರಣಿಯನ್ನು ಆಡುತ್ತಿದೆ. ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡಿದ್ದ ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಆ ನಂತರ ನಡೆದ ಏಕದಿನ ಸರಣಿಯಲ್ಲಿ ವೈಟ್ ವಾಶ್ ಮುಖಭಂಗವನ್ನು ಅನುಭವಿಸಿತ್ತು. ಸದ್ಯ ನಡೆಯುತ್ತಿರುವ 3 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನು ಸೋತಿರುವ ಕೆರಿಬಿಯನ್ನರು, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿಯನ್ನು ಕೈಚೆಲ್ಲಿದ್ದಾರೆ. ಅಡಿಲೇಡ್ ಮೈದಾನದಲ್ಲಿ ನಡೆದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ಗ್ಲೆನ್​ ಮ್ಯಾಕ್ಸ್​ವೆಲ್ (Glenn Maxwell) ಅವರ ಅಜೇಯ ಶತಕದ ನೆರವಿನಿಂದ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿತು. ಬಳಿಕ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಲಷ್ಟೇ ಶಕ್ತವಾಗಿ 34 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಆಸೀಸ್​ಗೆ ಕಳಪೆ ಆರಂಭ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾದ ಆರಂಭ ಕಳಪೆಯಾಗಿತ್ತು. 14 ರನ್​ಗಳಿಗೆ ತಂಡದ ಮೊದಲ ವಿಕೆಟ್ ಪತನವಾಯಿತು. ಆ ನಂತರ ಜೊತೆಯಾದ ಡೇವಿಡ್ ವಾರ್ನರ್ ಹಾಗೂ ಮಿಚೆಲ್ ಮಾರ್ಷ್​ ತಂಡವನ್ನು ಅರ್ಧಶತಕ ಗಡಿ ದಾಟಿಸಿ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡ 64 ರನ್ ಗಳಿಸುವಷ್ಟರಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಆದರೆ 4ನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ಮ್ಯಾಕ್ಸ್‌ವೆಲ್, ವಿಂಡೀಸ್ ಬೌಲರ್​ಗಳ ಬೆವರಿಸಿಳಿಸಿದರು.

ಮೊದಲು ಮಾರ್ಕಸ್ ಸ್ಟೊಯಿನಿಸ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 42 ಎಸೆತಗಳಲ್ಲಿ 82 ರನ್‌ಗಳ ಪಾಲುದಾರಿಕೆ ಹಂಚಿಕೊಂಡ ಗ್ಲೆನ್, ನಂತರ ಐದನೇ ವಿಕೆಟ್‌ಗೆ ಟಿಮ್ ಡೇವಿಡ್ ಅವರೊಂದಿಗೆ 39 ಎಸೆತಗಳಲ್ಲಿ 95 ರನ್​ಗಳ ಜೊತೆಯಾಟವನ್ನಾಡಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಟಿಮ್ ಡೇವಿಡ್ ಕೇವಲ 14 ಎಸೆತಗಳಲ್ಲಿ 31 ರನ್ ಸಿಡಿಸಿ ತಂಡವನ್ನು 241 ರನ್‌ಗಳಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮ್ಯಾಕ್ಸ್​ವೆಲ್ ದಾಖಲೆಯ ಶತಕ

ತಂಡವನ್ನು ಬೃಹತ್​ ಸ್ಕೋರ್​ಗೆ ಕೊಂಡೊಯ್ದಿದಲ್ಲದೆ ಮ್ಯಾಕ್ಸ್​ವೆಲ್, ಟಿ20ಯಲ್ಲಿ 5ನೇ ಶತಕ ಕೂಡ ಸಿಡಿಸಿದರು. ಈ ಮೂಲಕ ಮ್ಯಾಕ್ಸ್‌ವೆಲ್ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಚಾರದಲ್ಲಿ ರೋಹಿತ್ ಶರ್ಮಾ ಅವರನ್ನು ಸರಿಗಟ್ಟಿದ್ದಾರೆ. ರೋಹಿತ್ ಇತ್ತೀಚೆಗೆ ಅಫ್ಘಾನಿಸ್ತಾನ ಸರಣಿಯಲ್ಲಿ ತಮ್ಮ ವೃತ್ತಿಜೀವನದ 5 ನೇ ಶತಕವನ್ನು ಸಿಡಿಸಿದ್ದರು. ಆ ಪಂದ್ಯದಲ್ಲಿ ರೋಹಿತ್ 69 ಎಸೆತಗಳಲ್ಲಿ ಅಜೇಯ 121 ರನ್ ಗಳಿಸಿದ್ದರು.

AUS vs WI: ಸಿಡಿಲಬ್ಬರದ ಶತಕ ಸಿಡಿಸಿ ರೋಹಿತ್ ದಾಖಲೆ ಸರಿಗಟ್ಟಿದ ಗ್ಲೆನ್ ಮ್ಯಾಕ್ಸ್‌ವೆಲ್..!

ಆರಂಭಿಕರ ಪೆವಿಲಿಯನ್ ಪರೇಡ್

242 ರನ್​ಗಳ ಬೃಹತ್ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ತಂಡ 11 ರನ್ ಕಲೆಹಾಕುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ರೆಂಡನ್ ಕಿಂಗ್ ಕೇವಲ 5 ರನ್ ಗಳಿಸಿ ಹ್ಯಾಜಲ್ ವುಡ್ಗೆ ಬಲಿಯಾದರು. ಇದಾದ ಬಳಿಕ 42 ರನ್ ಗಳಿಸಿದ್ದಾಗ ನಿಕೋಲಸ್ ಪೂರನ್ ಬಲಿಯಾದರೆ, ಕೇವಲ 14 ರನ್​ಗಳ ಅಂತರದಲ್ಲಿ ಶಾಯ್ ಹೋಪ್ ರೂಪದಲ್ಲಿ ಮೂರನೇ ವಿಕೆಟ್ ಪತನವಾಯಿತು. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಮೊದಲ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 62 ರನ್ ಗಳಿಸಲಷ್ಟೇ ಶಕ್ತವಾಯಿತು.

ಪೊವೆಲ್ ಏಕಾಂಗಿ ಹೋರಾಟ

ಇಲ್ಲಿಂದ, ಆಂಡ್ರೆ ರಸೆಲ್ ಅವರೊಂದಿಗೆ ರೋವ್‌ಮನ್ ಪೊವೆಲ್ ತಂಡದ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಆದರೆ ತಂಡವನ್ನು 100 ರನ್​ಗಳ ಗಡಿ ದಾಟಿಸಿದ ರಸೆಲ್ 37 ರನ್‌ ಸಿಡಿಸಿ ವಿಕೆಟ್ ಒಪ್ಪಿಸಿದರು. ಆದರೆ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರೋವ್‌ಮನ್ ಪೊವೆಲ್ 36 ಎಸೆತಗಳಲ್ಲಿ 63 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಲಿಲ್ಲ. ಆಸ್ಟ್ರೇಲಿಯಾ ಪರ ಮಾರ್ಕಸ್ ಸ್ಟೊಯಿನಿಸ್ 3 ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್ ವುಡ್ ಮತ್ತು ಸ್ಪೆನ್ಸರ್ ಜಾನ್ಸನ್ ತಲಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Sun, 11 February 24