AUS vs WI: ಆಸೀಸ್​ಗೆ ಏಕದಿನದಲ್ಲಿ ಸತತ 11ನೇ ಗೆಲುವು; ವಿಂಡೀಸ್​ ಕೈತಪ್ಪಿದ ಸರಣಿ

|

Updated on: Feb 04, 2024 | 6:00 PM

AUS vs WI: ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವನ್ನು 83 ರನ್‌ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಆತಿಥೇಯ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

AUS vs WI: ಆಸೀಸ್​ಗೆ ಏಕದಿನದಲ್ಲಿ ಸತತ 11ನೇ ಗೆಲುವು; ವಿಂಡೀಸ್​ ಕೈತಪ್ಪಿದ ಸರಣಿ
ಆಸ್ಟ್ರೇಲಿಯಾ- ವೆಸ್ಟ್ ಇಂಡೀಸ್
Follow us on

ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯವನ್ನು 83 ರನ್‌ಗಳಿಂದ ಗೆಲ್ಲುವ ಮೂಲಕ ಆಸ್ಟ್ರೇಲಿಯಾ (Australia vs West Indies) ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಆತಿಥೇಯ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್‌ಗಳಲ್ಲಿ 258 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ ಇಡೀ ತಂಡ 43.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 175 ರನ್ ಗಳಿಸಲಷ್ಟೇ ಶಕ್ತವಾಯಿತು.

ಸೀನ್ ಅಬಾಟ್ ಆಲ್​ರೌಂಡರ್ ಪ್ರದರ್ಶನ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. 21 ರನ್ ಕಲೆಹಾಕುವಷ್ಟರಲ್ಲೇ ಆರಂಭಿಕರಿಬ್ಬರು ಪೆವಿಲಿಯನ್ ಸೇರಿಕೊಂಡರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕ್ಯಾಮರೂನ್ ಗ್ರೀನ್ 33 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಸ್ಟೀವ್ ಸ್ಮಿತ್ 5 ರನ್​ಗಳಿಗೆ ಸುಸ್ತಾದರು. ಮಾರ್ನಸ್ ಲಬುಶೇನ್ 23 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಮ್ಯಾಥ್ಯೂ ಶಾರ್ಟ್​ 41 ರನ್​ಗಳ ಕಾಣಿಕೆ ನೀಡಿದರು. ಕೆಳಕ್ರಮಾಂಕದಲ್ಲಿ ಆರನ್ ಹಾರ್ಡಿ 26 ರನ್ ಸಿಡಿಸಿದರೆ, ತಂಡದ ಪರ ಅತ್ಯಧಿಕ 69 ರನ್ ಸಿಡಿಸಿದ ಸೀನ್ ಅಬಾಟ್ ಆಸೀಸ್ ಪಡೆಯನ್ನು 250 ರನ್​ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

AUS vs WI: ಮೊದಲ ಏಕದಿನದಲ್ಲಿ ಆಸ್ಟ್ರೇಲಿಯಾಕ್ಕೆ ಸುಲಭ ತುತ್ತಾದ ವೆಸ್ಟ್ ಇಂಡೀಸ್

ತತ್ತರಿಸಿದ ವಿಂಡೀಸ್ ಇನ್ನಿಂಗ್ಸ್

ಆಸೀಸ್ ನೀಡಿದ 259 ರನ್‌ಗಳ ಗುರಿ ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ಕೂಡ ಉತ್ತಮ ಆರಂಭ ಪಡೆಯಲಿಲ್ಲ. 19 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡರೆ, 34 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಪತನಗೊಂಡವು. ಇಲ್ಲಿಂದ ನಾಯಕ ಶಾಯ್ ಹೋಪ್ ಮತ್ತು ಕೇಸಿ ಕಾರ್ಟಿ ತಂಡದ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿ, ಸ್ಕೋರ್ ಅನ್ನು 87 ರನ್‌ಗಳಿಗೆ ಕೊಂಡೊಯ್ದರು. ಆದರೆ 29 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಹೋಪ್ ವಿಕೆಟ್ ಒಪ್ಪಿಸಿದರು. ಇಲ್ಲಿಂದ, ಕಾಂಗರೂ ತಂಡವು ವೆಸ್ಟ್ ಇಂಡೀಸ್‌ಗೆ ಪಂದ್ಯದಲ್ಲಿ ಪುನರಾಗಮನಕ್ಕೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಅಂತಿಮವಾಗಿ ವೆಸ್ಟ್ ಇಂಡೀಸ್ 43.3 ಓವರ್‌ಗಳಲ್ಲಿ 175 ರನ್‌ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್‌ವುಡ್ ಮತ್ತು ಸೀನ್ ಅಬಾಟ್ ತಲಾ 3 ವಿಕೆಟ್, ವಿಲ್ ಸದರ್ಲೆಂಡ್ 2 ವಿಕೆಟ್ ಮತ್ತು ಆರೋನ್ ಹಾರ್ಡಿ ಮತ್ತು ಆಡಮ್ ಝಂಪಾ ತಲಾ 1 ವಿಕೆಟ್ ಪಡೆದರು.

ಏಕದಿನದಲ್ಲಿ ಸತತ 11ನೇ ಗೆಲುವು

2023ರ ಏಕದಿನ ವಿಶ್ವಕಪ್‌ ಪ್ರಶಸ್ತಿಯನ್ನು ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಇದು ಸತತ 11ನೇ ಗೆಲುವಾಗಿದೆ. ವಿಶ್ವಕಪ್​ನ ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿದ್ದ ಕಾಂಗರೂಗಳು ಆ ಬಳಿಕ ಸತತ 11 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆಸ್ಟ್ರೇಲಿಯಾ ಈಗ ಫೆಬ್ರವರಿ 6 ರಂದು ಕ್ಯಾನ್‌ಬೆರಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಆಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ