VIDEO: ಕ್ಲಿಯರ್ ರನೌಟ್: ಮನವಿ ಮಾಡಿಲ್ಲವೆಂದು ನಾಟೌಟ್ ನೀಡಿದ ಅಂಪೈರ್

AUS vs WI: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ 2ನೇ ಟಿ20 ಪಂದ್ಯದಲ್ಲಿ ಫೀಲ್ಡ್ ಅಂಪೈರ್ ನೀಡಿದ ತೀರ್ಪು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಝಾರಿ ಜೋಸೆಫ್ ಕ್ಲಿಯರ್ ರನೌಟ್ ಆಗಿದ್ದರೂ ಮನವಿ ಮಾಡದಿರುವ ಕಾರಣ ಅಂಪೈರ್ ನಾಟೌಟ್ ನೀಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VIDEO: ಕ್ಲಿಯರ್ ರನೌಟ್: ಮನವಿ ಮಾಡಿಲ್ಲವೆಂದು ನಾಟೌಟ್ ನೀಡಿದ ಅಂಪೈರ್
AUS vs WI
Edited By:

Updated on: Feb 12, 2024 | 12:29 PM

ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಣ 2ನೇ ಟಿ20 ಪಂದ್ಯವು ಅನಿರೀಕ್ಷಿತ ತೀರ್ಪಿಗೆ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು.
ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್​ವೆಲ್ 55 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳನ್ನು ಬಾರಿಸಿ ಅಜೇಯ 120 ರನ್ ಸಿಡಿಸಿದ್ದರು. ಈ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಕಲೆಹಾಕಿತು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪರ ಮಿಂಚಿದ್ದು ರೋವ್​ಮನ್ ಪೊವೆಲ್ ಹಾಗೂ ಆಂಡ್ರೆ ರಸೆಲ್. 36 ಎಸೆತಗಳನ್ನು ಎದುರಿಸಿದ ಪೊವೆಲ್ 4 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 63 ರನ್ ಚಚ್ಚಿದ್ದರು. ಇನ್ನು ರಸೆಲ್ 16 ಎಸೆತಗಳಲ್ಲಿ 2 ಸಿಕ್ಸ್ 4 ಫೋರ್​ಗಳೊಂದಿಗೆ 37 ರನ್ ಬಾರಿಸಿದ್ದರು. ಇದಾಗ್ಯೂ ವೆಸ್ಟ್ ಇಂಡೀಸ್ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 207 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ 34 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಆಲೌಟ್ ಆಗದೇ ಉಳಿದ ವಿಂಡೀಸ್:

ವಿಶೇಷ ಎಂದರೆ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 190 ರನ್​ಗಳಿಗೆ ಆಲೌಟ್ ಆಗಬೇಕಿತ್ತು. ಆದರೆ ಅಂಪೈರ್ ನೀಡಿದ ವಿಚಿತ್ರ ತೀರ್ಪಿನಿಂದಾಗಿ ಅಲ್ಝಾರಿ ಜೋಸೆಫ್ ಅಜೇಯರಾಗಿ ಉಳಿದರು.

ಪಂದ್ಯದ 19ನೇ ಓವರ್​ನ 2ನೇ ಎಸೆತವನ್ನು ಅಲ್ಝಾರಿ ಜೋಸೆಫ್ ಕವರ್​ನತ್ತ ಬಾರಿಸಿ ಓಡಿದರು. ಅಲ್ಲೇ ಫೀಲ್ಡಿಂಗ್​ನಲ್ಲಿದ್ದ ನಾಯಕ ಮಿಚೆಲ್ ಮಾರ್ಷ್ ಚೆಂಡನ್ನು ಬೌಲರ್​ಗೆ ಎಸೆದರು. ತಕ್ಷಣವೇ ಸೆನ್ಪರ್ ಜಾನ್ಸನ್ ಚೆಂಡನ್ನು ವಿಕೆಟ್​ಗೆ ಮುಟ್ಟಿಸಿದ್ದಾರೆ.

ಅಲ್ಲದೆ ರನೌಟ್ ಆಗಿರುವುದು ಕನ್ಫರ್ಮ್ ಆಗಿದ್ದ ಕಾರಣ ಆಸ್ಟ್ರೇಲಿಯಾ ಆಟಗಾರರು ಸಂಭ್ರಮಿಸಿದ್ದರು. ಅತ್ತ ಬಿಗ್ ಸ್ಕ್ರೀನ್​ನಲ್ಲೂ ರನೌಟ್ ಆಗಿರುವ ರೀಪ್ಲೇ ತೋರಿಸಲಾಗಿತ್ತು. ಆದರೆ ಇತ್ತ ಅಂಪೈರ್ ಸಂಭ್ರಮ ನಿಲ್ಲಿಸಿ ಪಂದ್ಯ ಮುಂದುವರೆಸುವಂತೆ ಸೂಚಿಸಿದ್ದರು.

ಇದನ್ನೂ ಓದಿ: Matheesha Pathirana: ಅತೀ ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದ ಮಥೀಶ ಪತಿರಾಣ

ಇದಕ್ಕೆ ಮುಖ್ಯ ಕಾರಣ ಆಟಗಾರರು ರನೌಟ್​ ತೀರ್ಪಿಗೆ ಮನವಿ ಮಾಡದಿರುವುದು. ಅಂದರೆ ಆಟಗಾರರು ಮನವಿ ಸಲ್ಲಿಸಿದರೆ ಮಾತ್ರ ಫೀಲ್ಡ್ ಅಂಪೈರ್ ಮೂರನೇ ಅಂಪೈರ್​ಗೆ ವಿಡಿಯೋ ಪರಿಶೀಲಿಸುವಂತೆ ಸೂಚಿಸುತ್ತಾರೆ. ಆದರೆ ಆಸ್ಟ್ರೇಲಿಯಾ ಆಟಗಾರರು ಯಾವುದೇ ಮನವಿ ಮಾಡಿರಲಿಲ್ಲ.

ಇತ್ತ ಮನವಿ ಸಲ್ಲಿಸದ ಕಾರಣ ಫೀಲ್ಡ್ ಅಂಪೈರ್ ನೇರವಾಗಿ ಔಟ್ ಎಂದು ತೀರ್ಪು ನೀಡಿರಲಿಲ್ಲ. ಹಾಗಾಗಿ ನಿರ್ದಿಷ್ಟ ಸಮಯ ಮುಗಿಯುತ್ತಿದ್ದಂತೆ ಪಂದ್ಯವನ್ನು ಮುಂದುವರೆಸಲು ಸೂಚಿಸಲಾಯಿತು. ಇದರ ನಡುವೆ ಬಿಗ್ ಸ್ಕ್ರೀನ್​ನಲ್ಲಿ ರನೌಟ್ ಆಗಿರುವುದನ್ನು ತೋರಿಸುತ್ತಿದ್ದಂತೆ ಆಸ್ಟ್ರೇಲಿಯಾ ಆಟಗಾರರು ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಇದಾಗ್ಯೂ ಅಂಪೈರ್ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಇದೀಗ ಅಂಪೈರ್ ತೀರ್ಪಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ಶುರುವಾಗಿದೆ.